ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆಯಲ್ಲಿ ತಮ್ಮೊಂದಿಗೆ ಕೈಜೋಡಿಸುವಂತೆ ಕರ್ನಾಟಕ ಪೊಲೀಸರು ಆದಾಯ ತೆರಿಗೆ ಇಲಾಖೆಗೆ ಮನವಿ ಮಾಡಲು ನಿರ್ಧರಿಸಿದ್ದಾರೆ.
ಜೂನ್ 8 ರಂದು ಚಿತ್ರದುರ್ಗದ ರೇಣುಕಾಸ್ವಾಮಿ ಅವರನ್ನು ಅಪಹರಿಸಿ ಚಿತ್ರಹಿಂಸೆ ನೀಡಿ ಬರ್ಬರವಾಗಿ ಹತ್ಯೆಗೈದ ಆರೋಪದ ಮೇಲೆ ನಟ ದರ್ಶನ್, ಅವರ ಸ್ನೇಹಿತೆ ಪವಿತ್ರಾ ಗೌಡ ಸೇರಿದಂತೆ 17 ಮಂದಿಯನ್ನು ಬಂಧಿಸಲಾಗಿದೆ.
ಪೊಲೀಸರ ಪ್ರಕಾರ, ದರ್ಶನ್ ಮತ್ತು ಅವರ ಗ್ಯಾಂಗ್ ಅಪರಾಧವನ್ನು ಮುಚ್ಚಿಹಾಕಲು ಮತ್ತು ಸಾಕ್ಷ್ಯಗಳನ್ನು ನಾಶಮಾಡಲು 78 ಲಕ್ಷ ರೂ. ಸಂಗ್ರಹಿಸಲಾಗಿದೆ. ಇನ್ನು ಬಹಳಷ್ಟು ಹಣ ತೊಡಗಿಸಿಕೊಂಡಿದ್ದು, ಕೋಲೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ಅವರು ಅಕ್ರಮ ವಿಧಾನಗಳ ಮೂಲಕ ಎಷ್ಟು ಹಣ ಸಂಗ್ರಹಿಸಿದ್ದಾರೆ ಎಂಬುದು ನಮಗೆ ತಿಳಿದಿಲ್ಲ. ಹಾಗಾಗಿ ಐಟಿ ಇಲಾಖೆಯನ್ನು ಪ್ರಕರಣದಲ್ಲಿ ಸೇರಿಸಿಕೊಳ್ಳಲು ನಿರ್ಧರಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈವರೆಗೆ ದರ್ಶನ್ ಮತ್ತು ಗ್ಯಾಂಗ್ ನಿಂದ 70.4 ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದ್ದು, ಇನ್ನೂ 7.6 ಲಕ್ಷ ರೂಪಾಯಿ ವಶಪಡಿಸಿಕೊಳ್ಳಬೇಕಿದೆ ಎಂದು ಅವರು ಹೇಳಿದ್ದಾರೆ.
ತನ್ನ ವಿರುದ್ಧದ ಕಾನೂನು ಕ್ರಮಗಳಿಂದ ತಪ್ಪಿಸಿಕೊಳ್ಳಲು ಮತ್ತು ಸಾಕ್ಷ್ಯ ನಾಶಪಡಿಸಲು ತನ್ನ ಸ್ನೇಹಿತ ಮೋಹನ್ ರಾಜ್ ಅವರಿಂದ 40 ಲಕ್ಷ ರೂಪಾಯಿ ಪಡೆದಿರುವುದಾಗಿ ದರ್ಶನ್ ಅವರು ತಮ್ಮ ಪರಿಷ್ಕೃತ ಹೇಳಿಕೆಯಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಜಪ್ತಿ ಮಾಡಿರುವ ಹಣಕ್ಕೆ ಸೂಕ್ತ ದಾಖಲೆ ಒದಗಿಸದೆ ಇದ್ದರೆ ಐಟಿ ಅಧಿಕಾರಿಗಳು ದರ್ಶನ್ ಹಾಗೂ ಮೋಹನ್ ರಾಜ್‌ಗೆ ನೋಟಿಸ್ ನೀಡಿ ಈ ಬಗ್ಗೆ ಮಾಹಿತಿ ಕೇಳುವ ಸಾಧ್ಯತೆಗಳಿವೆ. ಅಕ್ರಮ ಹಣ ವರ್ಗಾವಣೆ ಮಾಡಿದರೆ ಇಡಿ ತನಿಖೆ ನಡೆಸುವ ಸಾಧ್ಯತೆಗಳಿವೆ.