ಹೊಸನಗರ: ಫಾಲ್ಸ್ ವೀಕ್ಷಣೆಗೆಂದು ಹೋಗಿದ್ದ ಸಾಫ್ಟ್‌ವೇರ್ ಉದ್ಯೋಗಿ ನಾಪತ್ತೆಯಾಗಿರೋ ಘಟನೆ ಹೊಸನಗರ ತಾಲೂಕಿನ ತಲಸಿ ಅಬ್ಬಿ ಫಾಲ್ಸ್ನಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಬೆಂಗಳೂರಿನ ಖಾಸಗಿ ಸಂಸ್ಥೆಯ ಉದ್ಯೋಗಿ 26 ವರ್ಷದ ವಿನೋದ್ ಎಂದು ಗುರುತಿಸಲಾಗಿದೆ. ಈತ ಬಳ್ಳಾರಿ ಮೂಲದವನಾಗಿದ್ದು, ಪ್ರವಾಸಕ್ಕೆ ತೆರಳಿದ್ದ ವೇಳೆ ಫಾಲ್ಸ್ಗೆ ತೆರಳಿದ್ದಾಗ ಕಾಲು ಜಾರಿ ಬಿದ್ದಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಾಪತ್ತೆಯಾದ ವಿನೋದ್ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಕೆಲಸ ಮಾಡುತ್ತಿದ್ದನಂತೆ. 12 ಜನರ ತಂಡದೊಂದಿಗೆ ಆಗಮಿಸಿ, ಕೊಡಚಾದ್ರಿಯಿಂದ ತಲಸಿ ಅಬ್ಬೆ ಫಾಲ್ಸ್ಗೆ ತೆರಳಿದ್ದರು. ಇದೇ ವೇಳೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ಫಾಲ್ಸ್ ಬಳಿ ತೆರಳಿದ್ದಾಗ ಕಾಲು ಜಾರಿ ಬಿದ್ದಿದ್ದಾನೆ.
ಸದ್ಯ ನಾಪತ್ತೆಯಾಗಿರುವ ವಿನೋದ್ಗಾಗಿ ಅಗ್ನಿಶಾಮಕ ದಳ ಹಾಗೂ ನಗರ ಠಾಣೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಕತ್ತಲೆಯಾಗಿರುವ ಕಾರಣ ಪತ್ತೆ ಕಾರ್ಯಕ್ಕೆ ತೊಡಕು ಉಂಟಾಗಿದೆ. ಈ ಹಿಂದೆ ಕೊಲ್ಲೂರು ಘಾಟಿಗೆ ಹೊಂದಿಕೊಂಡಿರುವ ಅರಿಶಿನ ಗುಂಡಿ ಫಾಲ್ಸ್ನಲ್ಲಿ ಭದ್ರಾವತಿ ಯುವಕ ಶರತ್ ಕಾಲು ಜಾರಿ ಬಿದ್ದಿದ್ದರು. ಶರತ್ ಕಾಲು ಜಾರಿ ಜಲಪಾತದಲ್ಲಿ ಬೀಳುತ್ತಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಘಟನಾ ಸ್ಥಳಕ್ಕೆ ಪಟ್ಟಣ ಠಾಣೆ ಪಿಎಸ್‌ಐ ರಮೇಶ್ ಹಾಗೂ ಅಗ್ನಿಶಾಮಕ ದಳದವರು ಆಗಮಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ವಾರಾಂತ್ಯ ಪ್ರವಾಸಕ್ಕೆ ಬಂದಿದ್ದ 12 ಯುವಕರ ಗುಂಪಿನಲ್ಲಿ ವಿನೋದ್ ಇದ್ದರು. ಯಡೂರು ತಲಸಿ ಅಬ್ಬಿ ಜಲಪಾತಕ್ಕೆ ಬರುವ ಮುನ್ನ ಕೊಡಚಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ್ದರು. ಕಳೆದ ವರ್ಷ ಮತ್ತೊಬ್ಬ ಪ್ರವಾಸಿಗರು ಮೃತಪಟ್ಟ ಹಿನ್ನೆಲೆಯಲ್ಲಿ ಅಬ್ಬಿ ಜಲಪಾತದ ಮಾರ್ಗವನ್ನು ಕಂದಕ ತೋಡಿ ನಿರ್ಬಂಧಿಸಲಾಗಿತ್ತು. ಆದರೆ, ಯುವಕರು ವಾಹನ ನಿಲ್ಲಿಸಿ ಒಂದೂವರೆ ಕಿ.ಮೀ ನಡೆದು ಜಲಪಾತ ತಲುಪಿದ್ದರು.