ಬೆಂಗಳೂರು: ಸಮಾಜದ ಮತ್ತು ಭವಿಷ್ಯದಲ್ಲಿ ನಾಗರಿಕರ ಹಿತದೃಷ್ಟಿಯಿಂದ ಬ್ರಿಟಿಷರ ಕಾಲದ ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC), ಇಂಡಿಯನ್ ಪೀನಲ್ ಕೋಡ್ (IPC) ಮತ್ತು ಇಂಡಿಯನ್ ಎವಿಡೆನ್ಸ್ ಆಕ್ಟ್ ನ್ನು ಬದಲಿಸಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (BNSS 2023), ಭಾರತೀಯ ನ್ಯಾಯ ಸಂಹಿತಾ (BNS 2023) ಮತ್ತು ಭಾರತೀಯ ಸಾಕ್ಷಿ ಅಧಿನಿಯಮ (BSA 2023) ಎಂದು ತಂದಿದ್ದು, ಜುಲೈ 1ರಿಂದ ಜಾರಿಗೆ ಬರಲಿದೆ.
ಮೂರು ಹೊಸ ಕ್ರಿಮಿನಲ್ ಕಾನೂನುಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಲು ಬೆಂಗಳೂರಿನ ಕೇಂದ್ರ ವಾರ್ತಾ ಶಾಖೆ(ಪಿಐಬಿ) ವತಿಯಿಂದ ಇಂದು ವಾರ್ತಾಲಾಪ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ನಿವೃತ್ತ ನ್ಯಾಯಾಧೀಶರಾದ ಡಿ.ಆರ್. ವೆಂಕಟ ಸುದರ್ಶನ್ ಅವರು ಭಾರತೀಯ ನ್ಯಾಯ ಸಂಹಿತಾ-2023, ಭಾರತೀಯ ಸಾಕ್ಷಿ ಅಧಿನಿಯಮ್-2023 ಕುರಿತು ಅರಿವು ಮೂಡಿಸಿದರು. ಹೊಸ ಕಾನೂನುಗಳು ಶ್ರೀಸಾಮಾನ್ಯರ ಜೀವನವನ್ನು ಸುಲಭಗೊಳಿಸಲು ಮತ್ತು ತ್ವರಿತ ನ್ಯಾಯವನ್ನು ಖಾತ್ರಿಪಡಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಕರ್ನಾಟಕ ಸರ್ಕಾರದ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಅಭಿಯೋಜಕಿ ಶೈಲಜಾ ಕೃಷ್ಣ ನಾಯಕ್ ಮಾತನಾಡಿ, ಭಾರತೀಯ ನಾಗರೀಕ ಸುರಕ್ಷಾ ಸಂಹಿತಾ (BNSS) ಕುರಿತು ಮಾಹಿತಿ ನೀಡಿದರು. ಕಾಲಮಿತಿಯೊಳಗೆ ತನಿಖೆ ಮತ್ತು ತ್ವರಿತ ನ್ಯಾಯವನ್ನು ಖಾತ್ರಿಪಡಿಸುವ ಪ್ರಮುಖ ಬದಲಾವಣೆಗಳ ಬಗ್ಗೆ ಅವರು ಒತ್ತಿ ಹೇಳಿದರು. ಶಾಸನಗಳ ಮೂಲಕ ಡಿಜಿಟಲ್ ದಾಖಲೆಗಳನ್ನು ಪ್ರಾಥಮಿಕ ಪುರಾವೆಗಳಾಗಿ ಗುರುತಿಸುವ ಪ್ರಾಮುಖ್ಯತೆಯನ್ನು ಅವರು ವಿವರಿಸಿದರು.
ಮೂರು ಕಾನೂನುಗಳು ಭಾರತದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆಯನ್ನು ತರುತ್ತವೆ ಮತ್ತು ನಾಗರಿಕರನ್ನು ವಸಾಹತುಶಾಹಿ ಮನಸ್ಥಿತಿಯಿಂದ ಮುಕ್ತಗೊಳಿಸುತ್ತವೆ. ಅಲ್ಲದೆ, ಇದು ಪೊಲೀಸರ ಕಾರ್ಯನಿರ್ವಹಣೆಗೆ ಕೂಡ ಸಹಾಯ ಮಾಡುತ್ತದೆ ಮತ್ತು ಸುಧಾರಿಸುತ್ತದೆ. ಇದು ತ್ವರಿತ ನ್ಯಾಯವನ್ನು ಖಚಿತಪಡಿಸುತ್ತದೆ. ಡಿಜಿಟಲ್ ದಾಖಲೆಗಳನ್ನು ಈ ಕಾನೂನುಗಳೊಂದಿಗೆ ಪ್ರಾಥಮಿಕ ಪುರಾವೆಗಳಾಗಿ ಗುರುತಿಸಿರುವುದು ಒಂದು ಪ್ರಮುಖ ಬದಲಾವಣೆಯಾಗಿದೆ” ಎಂದರು.
ಬೆಂಗಳೂರಿನ ಪಿಐಬಿ ಹೆಚ್ಚುವರಿ ಮಹಾನಿರ್ದೇಶಕ ಎಸ್.ಜಿ.ರವೀಂದ್ರ, ಇದು ಕ್ರಿಮಿನಲ್ ಕಾನೂನುಗಳಲ್ಲಿ ಒಂದು ಕ್ರಾಂತಿಕಾರಿ ಬದಲಾವಣೆಯಾಗಿದೆ. ಸಾರ್ವಜನಿಕರಿಗೆ ಮತ್ತು ಮಾಧ್ಯಮಗಳಿಗೆ ಅರಿವು ಮೂಡಿಸುವಲ್ಲಿ ಕಾನೂನು ತಜ್ಞರ ವರ್ಗವು ಮುಂಚೂಣಿಯಲ್ಲಿರುವುದು ಬಹಳ ಮುಖ್ಯ, ಇದರಿಂದ ಈ ಕಾನೂನುಗಳ ಸರಿಯಾದ ವಿವರಗಳು ಮತ್ತು ಪರಿಣಾಮಗಳ ಬಗ್ಗೆ ಸಾಮಾನ್ಯ ಜನರಿಗೆ ತಿಳಿಯುತ್ತದೆ ಎಂದರು.