ರಾಜ್ಯ

ಕೆಫೆ ಸ್ಫೋಟದಲ್ಲಿ ಯಾವುದಾದರು ಸಂಘಟನೆ ಭಾಗಿಯಾಗಿದೆಯೇ ಎಂದು ಸದ್ಯಕ್ಕೆ ಹೇಳಲು ಸಾಧ್ಯವಿಲ್ಲ: ಪರಮೇಶ್ವರ

Lingaraj Badiger

ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟದ ಬಗ್ಗೆ ಪೊಲೀಸರು ಆಳವಾದ ತನಿಖೆ ನಡೆಸುತ್ತಿದ್ದಾರೆ ಮತ್ತು ಎಲ್ಲಾ ಕೋನಗಳಿಂದಲೂ ಪರಿಶೀಲಿಸುತ್ತಿದ್ದಾರೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ಅವರು ಶನಿವಾರ ಹೇಳಿದ್ದಾರೆ.

ಸಿಸಿಟಿವಿ ದೃಶ್ಯಾವಳಿಗಳಿಂದ ತನಿಖಾಧಿಕಾರಿಗಳು ಕೆಲವು ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಅಪರಾಧಿಯನ್ನು ಹಿಡಿಯಲು ತನಿಖೆಯ ಭಾಗವಾಗಿ ನಗರದ ಸಾರ್ವಜನಿಕ ಸಾರಿಗೆ ಬಸ್‌ಗಳ ದೃಶ್ಯಗಳನ್ನು ಸಹ ಪರಿಶೀಲಿಸಲಾಗುತ್ತಿದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.

ಇಂದು ಮಧ್ಯಾಹ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಗೃಹ ಇಲಾಖೆ ಹಿರಿಯ ಅಧಿಕಾರಿಗಳ ಸಭೆ ಕರೆಯಲಾಗಿದೆ.

ಪೂರ್ವ ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ಕಾರಿಡಾರ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ ನಡೆದ ಘಟನೆಯಲ್ಲಿ ಹತ್ತು ಮಂದಿ ಗಾಯಗೊಂಡಿದ್ದು, ಈ ಹಿನ್ನೆಲೆಯಲ್ಲಿ ಸಭೆ ಕರೆಯಲಾಗಿದೆ ಮತ್ತು ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಿ, ಅಧಿಕಾರಿಗಳಿಗೆ ಕೆಲವು ಸೂಚನೆಗಳನ್ನು ನೀಡಲಾಗುವುದು ಎಂದರು.

''ತನಿಖೆಗೆ ಹಲವು ತಂಡಗಳನ್ನು ರಚಿಸಲಾಗಿದೆ. ಗಂಭೀರವಾಗಿ ತನಿಖೆ ನಡೆಯುತ್ತಿದೆ. ಕೆಲವು ಕುರುಹುಗಳು ಪತ್ತೆಯಾಗಿವೆ, ಸಿಸಿಟಿವಿ ದೃಶ್ಯಗಳಿಂದ ಕೆಲವು ಮಾಹಿತಿ ಸಂಗ್ರಹಿಸಲಾಗಿದೆ. ಆ ಸಮಯದಲ್ಲಿ ಆ ಮಾರ್ಗದಲ್ಲಿ 26 ಬಸ್‌ಗಳು ಹೋಗಿದ್ದವು ಎಂಬ ಮಾಹಿತಿ ಇದೆ. ಅವರು ಬಸ್‌ನಲ್ಲಿ ಬಂದಿದ್ದಾರೆ. ಆದ್ದರಿಂದ 26 ಬಸ್‌ಗಳನ್ನು ಬಿಎಂಟಿಸಿಯಲ್ಲಿ ಪರಿಶೀಲಿಸಲಾಗಿದೆ" ಎಂದು ಪರಮೇಶ್ವರ ಅವರು ಸುದ್ದಿಗಾರರಿಗೆ ಹೇಳಿದ್ದಾರೆ.

"ಈ ಎಲ್ಲಾ ಮಾಹಿತಿಯನ್ನು ಒಟ್ಟುಗೂಡಿಸಿ ನಾವು ಅಪರಾಧಿಯನ್ನು ಹಿಡಿಯುತ್ತೇವೆ. ಯಾವುದೇ ಕಾರಣಕ್ಕೂ ನಾವು ದುಷ್ಕರ್ಮಿಯನ್ನು ಬಿಡುವುದಿಲ್ಲ. ಅವರು ಎಷ್ಟೇ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ನಾವು ಬಿಡುವುದಿಲ್ಲ" ಎಂದಿದ್ದಾರೆ.

ಈ ಸ್ಫೋಟದಲ್ಲಿ ಯಾವುದೇ ಸಂಘಟನೆ ಅಥವಾ ವ್ಯಕ್ತಿ ಭಾಗಿಯಾಗಿದ್ದಾರೆಯೇ ಎಂದು ಸದ್ಯಕ್ಕೆ ಹೇಳಲು ಸಾಧ್ಯವಿಲ್ಲ ಎಂದು ಗೃಹ ಸಚಿವರು ತಿಳಿಸಿದ್ದಾರೆ.

ಕಳೆದ ರಾತ್ರಿ ನಾನು ರಾಮೇಶ್ವರ ಕೆಫೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೆಲವು ಮಾಹಿತಿ ಲಭ್ಯವಾಗಿದ್ದು, ಕೆಫೆಯ ಯಶಸ್ಸು ಮತ್ತು ವಿಸ್ತರಣೆಯನ್ನು ಅರಗಿಸಿಕೊಳ್ಳಲು ಸಾಧ್ಯವಾಗದೆ ಯಾರಾದರೂ ಈ ಕೃತ್ಯ ಎಸಗಿರುಬಹುದು ಎಂದು ಪರಮೇಶ್ವರ ಅನುಮಾನ ವ್ಯಕ್ತಪಡಿಸಿದ್ದಾರೆ.

SCROLL FOR NEXT