ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ  
ರಾಜ್ಯ

ಬೆಂಗಳೂರು: ವಿಂಡ್ಸರ್ ಮ್ಯಾನರ್ ಮೇಲ್ಸೇತುವೆಯಲ್ಲಿ ರೈಲಿಂದ ಆಯತಪ್ಪಿ ಬಿದ್ದು ಯುವಕ ಸಾವು!

Manjula VN

ಬೆಂಗಳೂರು: ನಗರದ ಅರಮನೆ ರಸ್ತೆಯ ವಿಂಡ್ಸರ್ ಮ್ಯಾನರ್ ಮೇಲ್ಸೇತುವೆಯಲ್ಲಿ ರೈಲಿನಿಂದ ಆಯತಪ್ಪಿ ರೈಲ್ವೆ ಹಳಿ ಮೇಲೆ ಬಿದ್ದು ಬಳಿಕ ಮೇಲ್ಸೇತುವೆ ಕೆಳೆ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರೊಂದರ ಮೇಲೆ ಬಿದ್ದು ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.

ತಮಿಳುನಾಡು ಆಂಬೂರುಮೂಲದ ಗೌರಿಶಂಕರ್ (21) ಮೃತ ಯುವಕ. ನಿನ್ನೆ ಮಧ್ಯಾಹ್ನ 3.20ರ ಸುಮಾರಿಗೆ ಘಟನೆ ನಡೆದಿದೆ. ಜೇಬಿನಲ್ಲಿ ಸಿಕ್ಕ ರೈಲ್ವೇ ಟಿಕೆಟ್, ಮೊಬೈಲ್ ಹಾಗೂ ಗುರುತಿನ ಚೀಟಿ ಆಧಾರದ ಮೇಲೆ ಮೃತನ ಗುರುತು ಪತ್ತೆಯಾಗಿದೆ.

ಕೆಲ ದಿನಗಳ ಹಿಂದೆ ಕುಣಿಗಲ್‌ನ ಕೋಳಿ ಫಾರಂನಲ್ಲಿ ಕೆಲಸ ಮಾಡುತ್ತಿದ್ದ. ನಂತರ ಆತ ಯಾವ ಕೆಲಸ ಮಾಡುತ್ತಿದ್ದ, ಎಲ್ಲಿ ಉಳಿದುಕೊಂಡಿದ್ದ ಎಂಬ ಮಾಹಿತಿ ನಮಗೆ ತಿಳಿದಿಲ್ಲ ಎಂದು ಮೃತ ಯುವಕನ ತಂದೆ ಭಾಸ್ಕರ್ ಅವರು ಹೇಳಿದ್ದಾರೆ.

ಯುವಕ ಚೆನ್ನೈಗೆ ಪ್ರಯಾಣಿಸುತ್ತಿದ್ದು, ರೈಲು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಹೊರಟ ಕೇವಲ 10 ನಿಮಿಷಕ್ಕೆ ರೈಲಿನಿಂದ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾನೆ.

ಮೃತ ಯುವಕ ಪ್ರಯಾಣದ ವೇಳೆ ಬೋಗಿಯ ಬಾಗಿಲು ಬಳಿ ನಿಂತಿದ್ದು, ರೈಲು ವಿಂಡ್ಸರ್ ಮ್ಯಾನರ್ ಮೇಲ್ಸೇತುವೆಯಲ್ಲಿ ತೆರಳುವಾಗ ಆಯತಪ್ಪಿ ಮೇಲ್ಸೇತುವೆಗೆ ರೈಲ್ವೇ ಹಳಿಗೆ ಬಿದ್ದಿದ್ದಾನೆ. ಬಳಿಕ ನಿಯಂತ್ರಣ ಸಿಗದೆ ಉರುಳಿ ಮೇಲ್ಸೇತುವೆ ಕೆಳ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರೊಂದರ ಮೇಲೆ ಬಿದ್ದಿದ್ದಾನೆ. ಪರಿಣಾಮ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈತ ಬಿದ್ದ ರಭಸಕ್ಕೆ ಕಾರಿನ ಗಾಜುಗಳು ಪುಡಿ ಪುಡಿಯಾಗಿದ್ದು, ಕಾರು ಕೊಂಚ ನಜ್ಜುಗುಜ್ಜಾಗಿದೆ.

ಅದೃಷ್ಟವಶಾತ್ ಕಾರಿನ ಚಾಲಕ ಸೇರಿದಂತೆ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಸುದ್ದಿ ತಿಳಿದು ಹೈಗ್ರೌಂಡ್ಸ್ ಠಾಣೆ ಪೊಲೀಸರು ಸ್ಥಳಕ್ಕೆ ದೌಡಯಿಸಿ ಪರಿಶೀಲನೆ ನಡೆಸಿದ್ದಾರೆ.

ಚಲಿಸುತ್ತಿದ್ದ ರೈಲಿನಿಂದ ಆಕಸ್ಮಿಕವಾಗಿ ಬಿದ್ದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದರೆ, ಆತ್ಮಹತ್ಯೆ ಬಗ್ಗೆಯೂ ಶಂಕೆಗಳಿವೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರಗೆ ರವಾನಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

SCROLL FOR NEXT