ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ 
ರಾಜ್ಯ

ಸಾಫ್ಟ್‌ವೇರ್ ಅಪ್‌ಗ್ರೇಡ್‌ ಕಾರಣ 10 ದಿನಗಳ ಕಾಲ ಎಸ್ಕಾಂಗಳ ಆನ್‌ಲೈನ್ ಸೇವೆ ಸ್ಥಗಿತ

Shilpa D

ಬೆಂಗಳೂರು: ಇಂಧನ ಇಲಾಖೆಯ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಉನ್ನತೀಕರಣದ ಕಾರಣ ಮಾರ್ಚ್ 10 ರಿಂದ 19 ರವರೆಗೆ ಒಟ್ಟು ಹತ್ತು ದಿನಗಳ ಕಾಲ ರಾಜ್ಯದ ಎಲ್ಲಾ ಎಸ್ಕಾಂಗಳ ಆನ್‌ಲೈನ್ ಸೇವೆಗಳು ನಗರ ಪುದೇಶದ ಗ್ರಾಹಕರಿಗೆ ಲಭ್ಯವಿರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ರಾಜ್ಯದ ಎಲ್ಲಾ ಎಸ್ಕಾಂಗಳ ವ್ಯಾಪ್ತಿಯಲ್ಲಿ ಒಟ್ಟು ಹತ್ತು ದಿನಗಳ ಕಾಲ ವಿದ್ಯುತ್ ಬಿಲ್‌ ಪಾವತಿ, ಹೊಸ ಸಂಪರ್ಕಕ್ಕಾಗಿ ಆನ್‌ಲೈನ್ ಅರ್ಜಿ ಸಲ್ಲಿಕೆ, ಹೆಸರು ಮತ್ತು ಜಕಾತಿ ಬದಲಾವಣೆ ಸೇರಿದಂತೆ ಯಾವುದೇ ಆನ್ ಲೈನ್ ಸೇವೆಗಳು ಈ ಅವಧಿಯಲ್ಲಿ ಲಭ್ಯವಿರುವುದಿಲ್ಲ. ಆನ್ಲೈನ್ ಸೇವೆಗಳು ಮಾತ್ರವೇ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುತ್ತವೆಯೇ ಹೊರತು ವಿದ್ಯುತ್ ಪೂರೈಕೆಯಲ್ಲಿ ಯಾವುದೇ ಬದಲಾವಣೆ ಆಗಲಿ, ಕಡಿತವಾಗಲಿ ಮಾಡುವುದಿಲ್ಲ ಎಂದು ತಿಳಿಸಿದೆ.

ತಂತ್ರಾಂಶವು ಕಾರ್ಯಾರಂಭಗೊಂಡ ನಂತರ ಸ್ಥಿರಗೊಳ್ಳಲು ಸುಮಾರು 15 ದಿನಗಳ ಕಾಲಾವಕಾಶ ಬೇಕಿರುವುದರಿಂದ ಈ ಸಮಯದಲ್ಲಿ ತಂತ್ರಾಂಶದ ಕಾರ್ಯನಿರ್ವಹಣೆಯಲ್ಲಿ ಸ್ವಲ್ಪ ಮಟ್ಟದ ವ್ಯತ್ಯಯ ಉಂಟಾಗಬಹುದು ಎಂದು ಪ್ರಕಟಣೆ ತಿಳಿಸಿದೆ.

ಆದರೆ ಸಾಫ್ಟ್ ವೇರ್ ಉನ್ನತೀಕರಣ ಸಂದರ್ಭದಲ್ಲಿ ವಿದ್ಯುತ್ ಪಾವತಿ ಸಾಧ್ಯವಾಗದ ಕಾರಣ, ಗ್ರಾಹಕರ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುವುದಿಲ್ಲವೆಂದು ಈ ಮೂಲಕ ತಿಳಿಸಲಾಗಿದೆ. ಈ ಸಂದರ್ಭದಲ್ಲಿ ಮಾಪಕ ಓದುಗರು ಗ್ರಾಹಕರಿಗೆ ಬಿಲ್ ಗಳನ್ನು ನೀಡಲಿದ್ದಾರೆ, ಆದರೆ ಈ ಬಿಲ್ ಗಳನ್ನು ಮಾರ್ಚ್ 20 ರ ನಂತರವೇ ತಂತ್ರಾಂಶದಲ್ಲಿ ಅಪಲೋಡ್ ಮಾಡಲು ಸಾಧ್ಯವಾಗಲಿದೆ ಎಂದು ಹೇಳಿದೆ.

ಬೆಂಗಳೂರು, ಮೈಸೂರು, ಮಂಗಳೂರು, ಕಲಬುರ್ಗಿ ಮತ್ತು ಹುಬ್ಬಳ್ಳಿ-ಧಾರವಾಡ ಎಸ್ಕಾಂ ವ್ಯಾಪ್ತಿಯಲ್ಲಿ ಪರಿಣಾಮ ಬೀರುತ್ತವೆ. ಈ ಸಮಯದಲ್ಲಿ ಯಾವುದೇ ವಿದ್ಯುತ್ ಕಡಿತ ಅಥವಾ ವಿದ್ಯುತ್ ಬಿಲ್‌ಗಳನ್ನು ಪಾವತಿಸದ ಕಾರಣ ಸಂಪರ್ಕ ಕಡಿತಗೊಳ್ಳುವುದಿಲ್ಲ ಎಂದು ಇಂಧನ ಇಲಾಖೆ ಅಧಿಕಾರಿಗಳು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

SCROLL FOR NEXT