ಸಂಗ್ರಹ ಚಿತ್ರ
ಸಂಗ್ರಹ ಚಿತ್ರ 
ರಾಜ್ಯ

4.5 ಗಂಟೆ ಕಳೆದರೂ ಟೇಕ್ ಆಫ್ ಆಗದ ಬೆಂಗಳೂರು-ಮಂಗಳೂರು ಏರ್ ಇಂಡಿಯಾ ವಿಮಾನ: ಆಕ್ರೋಶ

Manjula VN

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ರಿಂದ ಮಂಗಳೂರಿಗೆ ಹೊರಡಬೇಕಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು 4.5 ಗಂಟೆ ಕಳೆದರೂ ಪ್ರಯಾಣ ಆರಂಭಿಸದೇ ಇದ್ದ ಹಿನ್ನೆಲೆಯಲ್ಲಿ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎರಡು ನಗರಗಳ ನಡುವಿನ ಪ್ರಯಾಣದ ಸಮಯ ಕೇವಲ 90 ನಿಮಿಷಗಳು. ವಿಮಾನದ ಸಿಬ್ಬಂದಿಗಳು ಪ್ರಯಾಣಿಕರನ್ನು ವಿಮಾನ ಹತ್ತಿಸಿದ್ದಾರೆ. ಆದರೆ, ವಿಮಾನ ಮಾತ್ರ 4 ಗಂಟೆ ಕಳೆದರೂ ತನ್ನ ಪ್ರಯಾಣವನ್ನು ಆರಂಭಿಸಿಲ್ಲ. ಎರಡು ಗಂಟೆಗಳ ಕಾಲ ವಿಮಾನದಲ್ಲಿ ಕುಳಿದ ಪ್ರಯಾಣಿಕರು ನಂತರ ಕೆಳಗೆ ಇಳಿದಿದ್ದಾರೆ.

ವಿಮಾನವು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ರಿಂದ ಹೊರಟು ರಾತ್ರಿ 8 ಗಂಟೆಗೆ ಮಂಗಳೂರು ತಲುಪಬೇಕಿತ್ತು. ಬದಲಾಗಿ ರಾತ್ರಿ 11.02ರ ಸುಮಾರಿಗೆ ಪ್ರಯಾಣ ಆರಂಭಿಸಿ, ಭಾನುವಾರ (ಮಾರ್ಚ್ 10) 12.04ಕ್ಕೆ ಮಂಗಳೂರು ವಿಮಾನ ನಿಲ್ದಾಣ ತಲುಪಿದೆ.

ವಿಮಾನದಲ್ಲಿ ಪ್ರಯಾಣಿಸಿದ ರುಮಾನ್ ಎಂಬುವವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿ, ಏರ್ ಇಂಡಿಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅತ್ಯಂತ ಕೆಟ್ಟ ಅನುಭವವಾಯಿತು. AirIndiaX IX-1795 ಪ್ರಯಾಣಿಸಬೇಕಿತ್ತು. ಮೊದಲಿಗೆ ಪ್ರವೇಶ ದ್ವಾರದ ಬಳಿ 40 ನಿಮಿಷ ಕಾಯುವಂತೆ ಮಾಡಿದ್ದರು. ನಂತರ ವಿಮಾನ ಹತ್ತಿಸಿದರು. ವಿಮಾನ ಹತ್ತಿಸಿದ ನಂತರ ಕೆಲ ಗಂಟೆಗಳ ಬಳಿಕ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಇದೆ ಎಂದು ಹೇಳಿದರು ಎಂದು ಹೇಳಿದ್ದಾರೆ.

ಘಟನೆ ಸಂಬಂಧ ವಿಮಾನಯಾನ ಸಂಸ್ಥೆ ಪ್ರತಿಕ್ರಿಯೆ ನೀಡಿ, ಕಾರ್ಯಾಚರಣೆ ಸಮಸ್ಯೆಯಿಂದಾಗಿ ವಿಳಂಬವಾಗಿತ್ತು. ಪ್ರಯಾಣಿಕರ ಸುರಕ್ಷತೆ ಖಚಿತಪಡಿಸಿಕೊಳ್ಳುವುದು ನಮ್ಮ ಆದ್ಯತೆಯಾಗಿದೆ. ಸ್ವಲ್ಪ ಸಮಯದ ನಂತರ ವಿಮಾನ ಟೇಕ್ ಆಫ್ ಆಯಿತು ಎಂದು ಹೇಳಿದೆ.

SCROLL FOR NEXT