ಜೋಳ
ಜೋಳ 
ರಾಜ್ಯ

ಗದಗ: ಬರದ ನಡುವೆ ಜೋಳದ ಬೆಲೆ ದಿಢೀರ್ ಕುಸಿತ; ರೈತರಿಗೆ ನಷ್ಟ

Ramyashree GN

ಗದಗ: ಕಳೆದ ಹತ್ತು ದಿನಗಳಿಂದ ಜೋಳದ ಬೆಲೆಯಲ್ಲಿ ದಿಢೀರ್ ಕುಸಿತ ಕಂಡು ಬರುತ್ತಿದ್ದು, ಗದಗ ರೈತರು ಕಂಗಾಲಾಗಿದ್ದಾರೆ. ಮೊನ್ನೆಯಷ್ಟೇ ಬ್ಯಾಡಗಿ ಮೆಣಸಿನಕಾಯಿ ದರ ಕುಸಿತದ ಹಿನ್ನೆಲೆಯಲ್ಲಿ ಹಾವೇರಿ ರೈತರು ರೊಚ್ಚಿಗೆದ್ದಿದ್ದರು. ಇದೀಗ ಬರ ಪರಿಸ್ಥಿತಿಯ ನಡುವೆ ಜೋಳದ ಬೆಳೆಯು ಕುಸಿತ ಕಂಡಿದ್ದು, ರೈತರು ಸತತ ನಷ್ಟ ಎದುರಿಸುವಂತಾಗಿದೆ.

ಜೋಳದ ಬೆಲೆ ಕಳೆದ ತಿಂಗಳು ಕ್ವಿಂಟಲ್‌ಗೆ ಸುಮಾರು 7,000-8,000 ರೂ.ಗಳಿದ್ದರೆ, ಸದ್ಯದ ಬೆಲೆ 2,500-3,500 ರೂ.ಗೆ ಕುಸಿದಿದೆ. ಈ ವರ್ಷ ಅಲ್ಪ ಪ್ರಮಾಣದ ಮಳೆಯಿಂದಾಗಿ ಬೆಳೆ ಗುಣಮಟ್ಟವು ಕಳಪೆಯಾಗಿದ್ದು, ರೈತರು ಹೆಚ್ಚು ಜೋಳವನ್ನು ಮಾರುಕಟ್ಟೆಗೆ ತರುವುದನ್ನು ಮುಂದುವರಿಸಿದ್ದರಿಂದ ಬೆಲೆಗಳಲ್ಲಿ ದಿಢೀರ್ ಕುಸಿತ ಕಾಣುತ್ತಿದೆ.

ಉತ್ತರ ಮತ್ತು ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಬೆಳೆಗಳಲ್ಲಿ ಒಂದಾದ ಜೋಳವನ್ನು ಕೊಪ್ಪಳ, ಹಾವೇರಿ, ಗದಗ, ಬೀದರ್, ಧಾರವಾಡ ಮತ್ತು ಇತರ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತದೆ. ಸಾಕಷ್ಟು ರೈತರು ಜೋಳದ ಕೃಷಿಗೆ ಉತ್ತಮ ಬೆಲೆ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದರು. ಆದರೆ, ಉತ್ತರ ಕರ್ನಾಟಕದಲ್ಲಿ ಬಿಳಿಜೋಳ, ಮೆಣಸಿನಕಾಯಿ ಬೆಳೆ ಬೆಳೆದ ರೈತರು ಇದೀಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೆಲವು ರೈತರು ಬೆಂಗಳೂರು ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ 4,000 ರೂ.ಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಮುಂದಾಗಿದ್ದು, ರೈತರಿಗೆ ಲಾಭ ಮಾಡಿಕೊಡದೆ ಅದು ಸಾಗಣೆ ವೆಚ್ಚಕ್ಕಷ್ಟೇ ಸರಿದೂಗಿಸಿದೆ. ಈಮಧ್ಯೆ, ಕೆಲವು ರೈತರು ಭವಿಷ್ಯದಲ್ಲಿ ಉತ್ತಮ ಬೆಲೆ ಸಿಗುವ ನಿರೀಕ್ಷೆಯಲ್ಲಿ ಜೋಳವನ್ನು ಗೋದಾಮಿನಲ್ಲಿ ಸಂಗ್ರಹಿಸಿದ್ದಾರೆ.

ಗದಗದ ರೈತ ಪ್ರಕಾಶ ನೀರಲಗಿ ಮಾತನಾಡಿ, ಜೋಳವನ್ನು ಮಾರಲು ಮಾರುಕಟ್ಟೆಗೆ ಹೋದಾಗ ಕ್ವಿಂಟಲ್‌ಗೆ 2,200 ರೂ.ಗೆ ಕೇಳಲಾಗುತ್ತಿದೆ. ಬಳ್ಳಾರಿ, ಬೆಂಗಳೂರು ಮತ್ತು ಕೊಪ್ಪಳ ಮಾರುಕಟ್ಟೆಯಲ್ಲೂ ಇದೇ ದರವಿದೆ. ಆರ್ಥಿಕವಾಗಿ ಸದೃಢವಾಗಿರುವ ರೈತರು ತಮ್ಮ ಜೋಳವನ್ನು ಸಂಗ್ರಹಿಸಿಟ್ಟಿದ್ದಾರೆ. ಆದರೆ, ಸಣ್ಣ ರೈತರು ನಷ್ಟ ಅನುಭವಿಸಿ ಮಾರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಕರ್ನಾಟಕದ ಅನೇಕ ರೈತರನ್ನು ಬರ ಕಾಡಿದೆ. ಗದಗ ರೈತರು ಖಾರಿಫ್ ಮತ್ತು ರಬಿ ಎರಡೂ ಬೆಳೆಗಳಲ್ಲಿ ನಷ್ಟ ಅನುಭವಿಸಿದ್ದಾರೆ ಎನ್ನುತ್ತಾರೆ.

ಗದಗದ ಕೃಷಿ ಇಲಾಖೆಯ ಅಧಿಕಾರಿಯೊಬ್ಬರು ಮಾತನಾಡಿ, 'ರೈತರು ತಮ್ಮ ಹತ್ತಿರದ ಕೃಷಿ ಇಲಾಖೆಗೆ ಭೇಟಿ ನೀಡಿ ಉತ್ತಮ ಗುಣಮಟ್ಟದ ಬೆಳೆಗಳನ್ನು ಪಡೆಯಲು ಮುಂದಾಗಬೇಕು. ಇದರಿಂದ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯನ್ನು ಪಡೆಯಬಹುದು. ಬರ ಪರಿಸ್ಥಿತಿಗಳು ಅನಿವಾರ್ಯ, ಆದರೆ ಬಿತ್ತನೆ ಮಾಡುವ ಮೊದಲು ರೈತರು ನಮ್ಮನ್ನು ಭೇಟಿ ಮಾಡಿದರೆ ನಾವು ಅವರಿಗೆ ಸಹಾಯ ಮಾಡುತ್ತೇವೆ ಎನ್ನುತ್ತಾರೆ.

SCROLL FOR NEXT