ಸಂಗ್ರಹ ಚಿತ್ರ
ಸಂಗ್ರಹ ಚಿತ್ರ online desk
ರಾಜ್ಯ

#LokSabhaElection2024 ಗೆ ದಿನಾಂಕ ಪ್ರಕಟ; ರಾಜ್ಯದಿಂದ ಚುನಾವಣಾ ಪ್ರಚಾರ ಆರಂಭಿಸಿದ ಮೋದಿ: ಈ ದಿನದ ಸುದ್ದಿ ಮುಖ್ಯಾಂಶಗಳು-16-03-2024

Srinivas Rao BV

ಬೆಂಗಳೂರು: ಲೋಕಸಭಾ ಚುನಾವಣೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಇಂದು ಪ್ರಕಟಿಸಿದೆ. ದೆಹಲಿಯ ವಿಜ್ಞಾನಭವನದಲ್ಲಿ ಹೊಸದಾಗಿ ನೇಮಕಗೊಂಡ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಿಂಗ್ ಸಂಧು ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಏಪ್ರಿಲ್ 19 ರಿಂದ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ತಿಳಿಸಿದ್ದಾರೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಏ.26, ಮೇ 7 ರಂದು ಮತದಾನ ನಡೆಯಲಿದೆ. ಲೋಕಸಭೆ ಚುನಾವಣೆಯ ಜೊತೆಗೆ ಯಾದಗಿರಿ ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೂ ಆಯೋಗ ದಿನಾಂಕ ಪ್ರಕಟಿಸಿದ್ದು, ಮೇ 7 ರಂದು ಮತದಾನ ನಡೆಯಲಿದೆ. ದೇಶದಲ್ಲಿ 97 ಕೋಟಿ ನೋಂದಾಯಿತ ಮತದಾರರಿದ್ದಾರೆ. 10.5 ಲಕ್ಷಕ್ಕೂ ಹೆಚ್ಚು ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು 1.5 ಕೋಟಿ ಸಿಬ್ಬಂದಿ, 55 ಲಕ್ಷ ಇವಿಎಂಗಳಿಂದ ಚುನಾವಣೆ ನಿರ್ವಹಿಸಲ್ಪಡುತ್ತದೆ ಎಂದು ರಾಜೀವ್ ಕುಮಾರ್ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಇಂದು ಕಲಬುರಗಿಯಿಂದ ಲೋಕಸಭಾ ಚುನಾವಣೆ ಪ್ರಚಾರ ಆರಂಭಿಸಿದ್ದಾರೆ. ರೋಡ್ ಶೋ ಬಳಿಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಜನತೆ ಸಂಕಷ್ಟದಲ್ಲಿ ಎದುರಿಸುತ್ತಿರುವಾಗ ಸರ್ಕಾರ ಲೂಟಿಯಲ್ಲಿ ತೊಡಗಿದೆ ಎಂದು ಮೋದಿ ಆರೋಪಿಸಿದ್ದಾರೆ. ಜನತೆಗೆ ಕಾಂಗ್ರೆಸ್ ಬಗ್ಗೆ ಸತ್ಯ ಅರಿವಾಗಿದ್ದು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ಬೆಂಗಳೂರಿನ ನಮ್ಮ ಮೆಟ್ರೋ ನಿಲ್ಲಾಣದ ಅಧಿಕಾರಿಯೊಬ್ಬರ ವಿರುದ್ಧ ಮಹಿಳಾ ಸೆಕ್ಯೂರಿಟಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದ್ದು, ಸುಬ್ರಮ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ರಾಜಾಜಿನಗರ ಮೆಟ್ರೋ ನಿಲ್ದಾಣದ ಸಹಾಯಕ ಶಾಖಾಧಿಕಾರಿ ಗಜೇಂದ್ರ ಲೈಂಗಿಕ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ಮಹಿಳಾ ಭದ್ರತಾ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದಾರೆ. ಮಹಿಳಾ ಸಿಬ್ಬಂದಿಗಳಿಗೆ ಅಶ್ಲೀಲ ಪದಗಳಿಂದ ನಿಂದಿಸೋದಲ್ಲದೆ, ಮೈಕೈ ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ತಮಗೆ ಸಹಕರಿಸದ ಮಹಿಳೆಯರಿಗೆ ಬೇರೆ ಕಡೆ ವರ್ಗಾವಣೆ ಮಾಡುವುದಾಗಿ ಬೆದರಿಕೆ‌ ಹಾಕಿದ್ದಾರೆ ಎಂದು ಮಹಿಳಾ ಭದ್ರತಾ ಸಿಬ್ಬಂದಿ ಆರೋಪಿಸಿದ್ದಾರೆ. ಈ ಬಗ್ಗೆ ಸೆಕ್ಯೂರಿಟಿ ಏಜೆನ್ಸಿ ಮಾಲೀಕರ ಗಮನಕ್ಕೂ ತರಲಾಗಿದ್ದು, ಅವರು ಸಹ ಸಹಕರಿಸುವಂತೆ ಒತ್ತಾಯ ಮಾಡಿದ್ದಾರೆ. ಸಹಕರಿಸಿ ಇಲ್ಲ ಕೆಲಸದಿಂದ ತೆಗೆಯುತ್ತೇನೆ ಎಂದು ಬೆದರಿಕೆ ಹಾಕುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ ರಾವ್ ಅಧ್ಯಕ್ಷತೆಯ ರಾಜ್ಯದ ಏಳನೇ ವೇತನ ಆಯೋಗ ಸಿಎಂ ಸಿದ್ದರಾಮಯ್ಯಗೆ ತನ್ನ ವರದಿ ಸಲ್ಲಿಕೆ ಮಾಡಿದೆ. ಮೂಲವೇತನದ ಶೇಕಡ 27.5 ರಷ್ಟು ಹೆಚ್ಚಳ ಮಾಡಲು ಶಿಫಾರಸು ಮಾಡಿದೆ. ವರದಿಯನ್ನು ಪರಿಶೀಲಿಸಿ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ವೇತನ ಆಯೋಗದ ಅವಧಿಯನ್ನು ಮೂರು ತಿಂಗಳು ವಿಸ್ತರಿಸಲಾಗಿತ್ತು. ಈ ಅವಧಿಯು ಮಾರ್ಚ್ 15ರಂದು ಮುಕ್ತಾಯಗೊಂಡಿದೆ.

ಉಜ್ಬೇಕಿಸ್ತಾನ್ ಮಹಿಳೆಯ ಕೊಲೆ ಪ್ರಕರಣವನ್ನು ಭೇದಿಸಿರುವ ಶೇಷಾದ್ರಿಪುರಂ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಸ್ಯಾಂಕಿ ರಸ್ತೆಯಲ್ಲಿರುವ ಹೋಟೆಲ್‌ನಲ್ಲಿ ಹೌಸ್‌ಕೀಪಿಂಗ್ ಸಿಬ್ಬಂದಿಗಳಾಗಿದ್ದ ಅಸ್ಸಾಂ ಮೂಲದ ಅಮೃತ್ ಮತ್ತು ರಾಬರ್ಟ್ ಬಂಧಿತ ಆರೋಪಿಗಳಾಗಿದ್ದಾರೆ. ಹೋಟೆಲ್‌ನ ಎರಡನೇ ಮಹಡಿಯ ಕೊಠಡಿಯಲ್ಲಿದ್ದ ಮಹಿಳೆ ಚೆಕ್-ಔಟ್ ಸಮಯದ ನಂತರವೂ ಮಹಿಳೆ ಹೊರಗೆ ಬರದ ಕಾರಣ ಪರಿಶೀಲಿಸಿದಾಗ ಜರೀನಾ ಎಂಬ ಮಹಿಳೆ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಹಣಕ್ಕಾಗಿ ಈ ಹತ್ಯೆ ನಡೆದಿದೆ ಎಂದು ತಿಳಿದುಬಂದಿದೆ.

ಕೋಟಿ ಕೋಟಿ ರೂಪಾಯಿ ತೆರಿಗೆ ಹಣ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಬೆಂಗಳೂರಿನ ಪ್ರತಿಷ್ಠಿತ ಮಂತ್ರಿ ಮಾಲ್​ಗೆ ಬೀಗ ಜಡಿದಿದ್ದಾರೆ. ಮಂತ್ರಿ ಮಾಲ್ 32 ಕೋಟಿ ವರೆಗೂ ತೆರಿಗೆ ಪಾವತಿ ಉಳಿಸಿಕೊಂಡಿದೆ. ಈ ಹಿಂದೆ ಕೂಡ ಅನೇಕ ಬಾರಿ ತೆರಿಗೆ ವಿಚಾರವಾಗಿ ಮಾಲ್ ಗೆ ಬೀಗ ಹಾಕಲಾಗಿತ್ತು. ಇದೀಗ ಮತ್ತೆ ಇಂದು ಮಾಲ್ ಗೆ ಬೀಗ ಹಾಕಲಾಗಿದ್ದು ವ್ಯಾಪಾರ ಪರವಾನಗಿಯನ್ನು ಅಮಾನತುಗೊಳಿಸಲಾಗಿದೆ.

SCROLL FOR NEXT