ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ online desk
ರಾಜ್ಯ

ಈಶ್ವರಪ್ಪ ಮನವೊಲಿಕೆ ವಿಫಲ, ನಾಳೆ ಶಿವಮೊಗ್ಗಕ್ಕೆ ಮೋದಿ: ಈ ದಿನದ ಸುದ್ದಿ ಮುಖ್ಯಾಂಶಗಳು-17-03-2024

Srinivas Rao BV

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ತಮ್ಮ ಪುತ್ರ ಕಾಂತೇಶ್‌ಗೆ ಟಿಕೆಟ್ ಕೈತಪ್ಪಿದ್ದಕ್ಕೆ, ಶಿವಮೊಗ್ಗದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ಸಿದ್ಧವಾಗಿರುವ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಮನವೊಲಿಕೆಯಲ್ಲಿ ಬಿಜೆಪಿ ನಾಯಕರು ವಿಫಲರಾಗಿದ್ದಾರೆ. ತಮ್ಮ ನಿಲುವಿನಿಂದ ಹಿಂದೆ ಸರಿಯಲು ಈಶ್ವರಪ್ಪ ನಿರಾಕರಿದ್ದಾರೆ. ಬಿಜೆಪಿ ನಾಯಕರೊಂದಿಗಿನ ಸಂಧಾನ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಈಶ್ವರಪ್ಪ, ನಾನು ಮೋದಿ ಪರ ಧ್ವನಿ ಎತ್ತುತ್ತೇನೆ. ಆದರೆ ನಾಳೆ ನಡೆಯುವ ಮೋದಿ ಕಾರ್ಯಕ್ರಮಕ್ಕೆ ನಾನು ಹೋಗುವುದಿಲ್ಲ ಎಂದು ತಿಳಿಸಿದ್ದಾರೆ.

ಯಾವುದೇ ಕಾರಣಕ್ಕೂ ಪಕ್ಷೇತರವಾಗಿ ಸ್ಪರ್ಧಿಸುವ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದು ಹೇಳಿರುವ ಈಶ್ವರಪ್ಪ, ಯಡಿಯೂರಪ್ಪ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದರು. ನನ್ನ ಮಗನಿಗೆ ಟಿಕೆಟ್​ ಕೊಟ್ಟಿಲ್ಲ ಎಂದು ಸ್ಪರ್ಧಿಸುತ್ತಿಲ್ಲ. ಪಕ್ಷದಲ್ಲಿ ಅನೇಕ ಹಿಂದುತ್ವವಾದಿಗಳಿಗೆ ಮೋಸವಾಗಿದೆ. ಯಡಿಯೂರಪ್ಪ ಕುಟುಂಬದ ಹಿಡಿತದಲ್ಲಿ ಬಿಜೆಪಿ ಸಿಲುಕಿದ್ದು, ಯಡಿಯೂರಪ್ಪ ಕಪಿಮುಷ್ಟಿಯಿಂದ ಪಕ್ಷವನ್ನು ಮುಕ್ತಗೊಳಿಸಬೇಕು. ರಾಜ್ಯಾಧ್ಯಕ್ಷರು ಲಿಂಗಾಯತರೇ ಬೇಕು ಅಂದಿದ್ದರೆ ಯತ್ನಾಳ್​ ಅವರನ್ನು ಮಾಡಬೇಕಿತ್ತು. ಯತ್ನಾಳ್ ಅವ​​ರನ್ನ ಯಾಕೆ ಮಾಡಲಿಲ್ಲ? ಲಿಂಗಾಯತರು ಬೆಳೆಯುವುದು ಇವರಿಗೆ ಇಷ್ಟವಿಲ್ಲ. ಒಕ್ಕಲಿಗ ನಾಯಕರನ್ನಾದರೂ ಮಾಡಬಹುದಿತ್ತು. ಯಾಕೆ ಮಾಡಿಲ್ಲ ಎಂದು ಯಡಿಯೂರಪ್ಪ ಅವರನ್ನು ಪ್ರಶ್ನಿಸಿದ್ದಾರೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕಣ ಸಜ್ಜುಗೊಂಡಿದ್ದು, ಮಾ.18 ರಂದು ಪ್ರಧಾನಿ ಮೋದಿ ಶಿವಮೊಗ್ಗದಲ್ಲಿ ನಡೆಯಲಿರುವ ಬೃಹತ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಸಮಾವೇಶಕ್ಕೆ ಶಿವಮೊಗ್ಗದ ಅಲ್ಲಮಪ್ರಭು ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗಿದೆ. ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಂದ ಲಕ್ಷಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ಸಮಾವೇಶದಲ್ಲಿ ಭಾಗಿಯಾಗುತ್ತಿದ್ದಾರೆ. ಲೋಕಸಭಾ ಚುನಾವಣೆಗೆ ದಿನಾಂಕ ಪ್ರಕಟವಾಗಿದ್ದು, ನೀತಿ ಸಂಹಿತೆ ಜಾರಿಯಾಗಿದೆ. ಬೆಂಗಳೂರಿನಲ್ಲಿ 2 ಪ್ರತ್ಯೇಕ ಪ್ರಕರಣಗಳಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಸುಮಾರು 20 ಲಕ್ಷ ರೂ ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಗಳು (Election Officers) ಮತ್ತು ಪೊಲೀಸರು ಅಲರ್ಟ್ ಆಗಿದ್ದು, ಅಕ್ರಮವಾಗಿ ಸಾಗಿಸುವ ಹಣದ ಮೇಲೆ ಕಣ್ಣಿಟ್ಟಿದ್ದಾರೆ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 13 ಲಕ್ಷ ರೂಪಾಯಿಯನ್ನು ಅಶೋಕನಗರ ಪೊಲೀಸರು ವಶಕ್ಕೆ ಪಡೆದಿದ್ದರೆ, 7 ಲಕ್ಷ ರೂಪಾಯಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಟೋಲ್​ನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆಭರಣ ಅಂಗಡಿಗೆ ನುಗ್ಗಿ ದರೋಡೆ ಯತ್ನದ ವೇಳೆ ಅಂಗಡಿ ಮಾಲಿಕನ ಮೇಲೆ ಗುಂಡಿ ಹಾರಿಸಿ ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ಈಶಾನ್ಯ ವಿಭಾಗದ ಪೊಲೀಸರು ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಬಂಧಿಸಿದ್ದಾರೆ. ಖಚಿತ ಮಾಹಿತಿಯನ್ನು ಆಧರಿಸಿ ಕೊಡಿಗೆಹಳ್ಳಿ ಪೊಲೀಸರಿದ್ದ ಈಶಾನ್ಯ ವಿಭಾಗದ ವಿಶೇಷ ತಂಡ, ಆರೋಪಿಗಳನ್ನು ಬಂಧಿಸಿದೆ. ಪೊಲೀಸರ ಮೇಲೆ ಆರೋಪಿಗಳು ದಾಳಿಗೆ ಯತ್ನಿಸಿದ್ದು, ಅಧಿಕಾರಿಗಳು ಆತ್ಮರಕ್ಷಣೆಗೆ ಪ್ರತಿದಾಳಿ ನಡೆಸಿದ್ದಾರೆ. ಬಂಧಿತ ನಾಲ್ವರು ಆರೋಪಿಗಳು ಅಂತಾರಾಜ್ಯ ಕಳ್ಳರಾಗಿದ್ದು, ದೇಶದ ಪ್ರಮುಖ ನಗರಗಳಲ್ಲಿರುವ ಸಣ್ಣಪುಟ್ಟ ಚಿನ್ನದ ಮಳಿಗೆಗಳನ್ನು ಗುರಿಯಾಗಿರಿಸಿಕೊಂಡಿದ್ದರು.

ಟೆಂಡರ್ ಕಾಮಗಾರಿಯಲ್ಲಿನ ಅನ್ಯಾಯ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದು ಕಾಂಗ್ರೆಸ್ ನಾಯಕನ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಮೇಲೆ‌ ತುಮಕೂರಿನ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಕಳೆದ ಗುರುವಾರ ರಾತ್ರಿ PWD ಇಲಾಖೆ ಕಚೇರಿ ಮುಂಭಾಗದಲ್ಲಿ ಕಾಂಗ್ರೆಸ್ ನಾಯಕ ರಾಯಸಂದ್ರ ರವಿಕುಮಾರ್ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ರವಿಕುಮಾರ್ ಮೇಲೆ ಕಾಂಗ್ರೆಸ್ ಶಾಸಕ ಎಸ್ ಆರ್ ಶ್ರೀನಿವಾಸ್ ಹಾಗೂ ಬೆಂಬಲಿಗರು ಏಕಾಏಕಿ ಹಲ್ಲೆ ನಡೆಸಿದ್ದರು. ಹಲ್ಲೆ ಮತ್ತು ಬೆದರಿಕೆ ಹಿನ್ನೆಲೆಯಲ್ಲಿ ರಾಯಸಂದ್ರ ರವಿಕುಮಾರ್ ತುಮಕೂರಿನ ತಿಲಕ್​ ಪಾರ್ಕ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ರಾಜ್ಯ ಸರ್ಕಾರ 19 ವಿವಿಧ ಅಕಾಡೆಮಿ ಹಾಗೂ ಪ್ರಾಧಿಕಾರಗಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಡಾ. ಪುರುಷೋತ್ತಮ ಬಿಳಿಮಲೆ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಉಮರ್ ಯುಎಚ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಡಾ.ಎಲ್.ಎನ್.ಮುಕುಂದರಾಜ್ ಅವರನ್ನು ನೇಮಕ ಮಾಡಲಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಪುರುಷೋತ್ತ ಬಿಳಿಮಲೆ, ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಮುಕುಂದರಾಜ್, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿ ಡಾ.ಚನ್ನಪ್ಪ ಕಟ್ಟಿ ನೇಮಕಗೊಂಡಿದ್ದಾರೆ.

SCROLL FOR NEXT