ತಗಡಿನ ಶೀಟ್‌ಗಳಿಂದ ಚೆಕ್ ಪೋಸ್ಟ್‌ ನಿರ್ಮಾಣ
ತಗಡಿನ ಶೀಟ್‌ಗಳಿಂದ ಚೆಕ್ ಪೋಸ್ಟ್‌ ನಿರ್ಮಾಣ 
ರಾಜ್ಯ

ತಗಡಿನ ಶೀಟ್‌ಗಳಿಂದ ಚೆಕ್ ಪೋಸ್ಟ್‌ ನಿರ್ಮಾಣ; ಕರ್ತವ್ಯಕ್ಕೆ ಹಾಜರಾಗಲು ಚುನಾವಣಾ ಸಿಬ್ಬಂದಿ ಹಿಂದೇಟು

Lingaraj Badiger

ಬೆಂಗಳೂರು: ಬೆಂಗಳೂರು ನಗರದಲ್ಲಿ ತಾಪಮಾನ ಹೆಚ್ಚಾಗುತ್ತಿದ್ದು, ಚೆಕ್ ಪೋಸ್ಟ್ ಗಳಲ್ಲಿ ಚುನಾವಣಾ ಕರ್ತವ್ಯದಲ್ಲಿರುವ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗಲು ಹಿಂದೇಟು ಹಾಕುತ್ತಿದ್ದಾರೆ. ಕಾರಣ, ನಗರದ ಬಹುತೇಕ ಭಾಗಗಳಲ್ಲಿ ತಗಡಿನ ಮತ್ತು ಕಲ್ನಾರಿನ ಶೀಟ್‌ಗಳಿಂದ ನಿರ್ಮಾಣ ಮಾಡಿದ ಶೆಡ್‌ಗಳಲ್ಲಿ ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಇದೆ.

ಬೂತ್ ಮಟ್ಟದ ಅಧಿಕಾರಿಗಳು(ಬಿಎಲ್‌ಒ) ಮತ್ತು ಚುನಾವಣಾಧಿಕಾರಿಗಳಿಗೆ(ಆರ್‌ಒ) ಕುಳಿತುಕೊಳ್ಳಲು ಶೀಟ್‌ಗಳಿಂದ ಚೆಕ್ ಪೋಸ್ಟ್‌ ನಿರ್ಮಾಣ ಮಾಡಲಾಗಿದೆ. ಆದರೆ ಇದು ತುಂಬಾ ಬಿಸಿಯಾಗಿರುತ್ತದೆ ಮತ್ತು ಮೂಲಭೂತ ಸೌಕರ್ಯಗಳ ಕೊರತೆಯಿದೆ ಎಂದು ಚುನಾವಣಾ ಅಧಿಕಾರಿಗಳು ದೂರಿದ್ದಾರೆ. ಇದರಿಂದ ಸಿಟ್ಟಿಗೆದ್ದ ಕೆಲ ಸಿಬ್ಬಂದಿ, ಪರಿಸ್ಥಿತಿ ಬದಲಾಯಿಸದಿದ್ದರೆ ಚುನಾವಣಾ ಕರ್ತವ್ಯ ನಿರ್ವಹಿಸಲು ನಿರಾಕರಿಸುವುದಾಗಿ ಮೇಲಧಿಕಾರಿಗಳಿಗೆ ಸಂದೇಶ ಕಳುಹಿಸಲು ಮುಂದಾಗಿದ್ದಾರೆ.

ಕಳೆದ ಎರಡು ದಿನಗಳಿಂದ ಚೆಕ್ ಪೋಸ್ಟ್ ಗಳು ಖಾಲಿ ಖಾಲಿಯಾಗಿವೆ. ಸಿಬ್ಬಂದಿ ಹಗಲಿನಲ್ಲಿ ಫುಟ್‌ಪಾತ್‌ಗಳಲ್ಲಿ ಅಥವಾ ಸುತ್ತಮುತ್ತಲಿನ ವಾಣಿಜ್ಯ ಸಂಸ್ಥೆಗಳಲ್ಲಿ ಕುಳಿತಿರುವುದು ಕಂಡುಬರುತ್ತಿದೆ.

"ಪ್ರತಿ ವರ್ಷವೂ ನಾವು ತಾತ್ಕಾಲಿಕ ಶೌಚಾಲಯ ಸೌಲಭ್ಯವಿಲ್ಲ ಮತ್ತು ವಾಹನ ಮಾಲಿನ್ಯ ತುಂಬಾ ಹೆಚ್ಚಾಗಿದೆ ಎಂದು ದೂರುತ್ತೇವೆ. ಆದರೆ ನಂತರ ನಾವು ಟೆಂಟ್ ಜಾಗದಲ್ಲಿ ಕುಳಿತುಕೊಳ್ಳುತ್ತೇವೆ. ಆದರೆ ಈ ಬಾರಿ ಬೇಸಿಗೆ ಬಿಸಿಲು ಹೆಚ್ಚಾಗಿದ್ದು, ತಗಡಿನ ಶೀಟ್‌ಗಳಿಂದ ಮಾಡಿದ ಶೆಡ್‌ಗಳಲ್ಲಿ ಕುಳಿತುಕೊಳ್ಳುವುದು ಅಸಾಧ್ಯ. ಬದಲಾವಣೆ ಮಾಡದಿದ್ದರೆ ಕರ್ತವ್ಯಕ್ಕೆ ಬರುವುದಿಲ್ಲ ಎಂದು ಆರ್‌ಒಗಳಿಗೆ ತಿಳಿಸಿದ್ದೇವೆ ಎಂದು ಬೆಂಗಳೂರು ಉತ್ತರ ಕ್ಷೇತ್ರದ ಚುನಾವಣಾಧಿಕಾರಿಯೊಬ್ಬರು ಹೇಳಿದ್ದಾರೆ.

ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಮತ್ತೊಬ್ಬ ಸಿಬ್ಬಂದಿ ಮಾತನಾಡಿ, ಈ ಶೆಡ್ ಗಳಲ್ಲಿ ರಾತ್ರಿಯಲ್ಲಿ ಲೈಟ್ ಇರುವುದಿಲ್ಲ. ನಾವು ಬೀದಿ ದೀಪಗಳು ಅಥವಾ ವಾಹನಗಳ ಬೆಳಕಿನಲ್ಲಿ ಕೆಲಸ ಮಾಡುತ್ತಿದ್ದೇವೆ. ರಾತ್ರಿಯಾಗುತ್ತಿದ್ದಂತೆ ಮತ್ತು ವಾಹನಗಳು ಕಡಿಮೆಯಾಗುವುದರಿಂದ ಟಾರ್ಚ್‌ಗಳನ್ನು ಬಳಸುತ್ತೇವೆ. ಆದರೆ ಟಾರ್ಚ್ ಅಥವಾ ಮೊಬೈಲ್ ಫೋನ್ ಗಳನ್ನು ರೀಚಾರ್ಜ್ ಮಾಡಲು ಚೆಕ್ ಪೋಸ್ಟ್ ನಲ್ಲಿ ಚಾರ್ಜಿಂಗ್ ಪಾಯಿಂಟ್ ಸಹ ಇಲ್ಲ. ಅವರು ಸಿಸಿಟಿವಿ ಅಳವಡಿಸಿದ್ದಾರೆ ಆದರೆ ಅದು ಕೆಲಸ ಮಾಡುವುದಿಲ್ಲ ಎಂದಿದ್ದಾರೆ.

“ಒಳಗೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ತುಂಬಾ ಬಿಸಿಯಾಗಿರುತ್ತದೆ. ಯಾವುದೇ ಮೂಲಭೂತ ಸೌಕರ್ಯವಿಲ್ಲ. ಕೇವಲ ಟೇಬಲ್ ಮತ್ತು ಕುರ್ಚಿಗಳಿವೆ. ಕುಡಿಯುವ ನೀರಿನ ಸೌಲಭ್ಯವಿಲ್ಲ. ಮೊಬೈಲ್ ಫೋನ್ ಚಾರ್ಜಿಂಗ್ ಸೌಲಭ್ಯ ಅಥವಾ ಯಾವುದೇ ಮೂಲಭೂತ ಸೌಲಭ್ಯ ಇಲ್ಲ. ನಾವು ಪದೇ ಪದೇ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೆಂಗಳೂರು ದಕ್ಷಿಣದ ಎಸ್‌ಎಸ್‌ಟಿ ಚೆಕ್ ಪೋಸ್ಟ್‌ನಲ್ಲಿ ಕುಳಿತಿದ್ದ ಇನ್ನೊಬ್ಬ ಸಿಬ್ಬಂದಿ ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ, ಚುನಾವಣಾ ಸಿಬ್ಬಂದಿಗೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಅವರು ಆರಾಮದಾಯಕವಾಗುವಂತೆ ನೋಡಿಕೊಳ್ಳುವುದು ಸ್ಥಳೀಯ ಚುನಾವಣಾ ಅಧಿಕಾರಿಗಳ ಕರ್ತವ್ಯವಾಗಿದೆ. ಕೂಡಲೇ ಈ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

SCROLL FOR NEXT