ಹೈಕೋರ್ಟ್ 
ರಾಜ್ಯ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಒಂದೇ ಜೈಲಿನಲ್ಲಿ ಇರಿಸಲು ಹೈಕೋರ್ಟ್ ನಕಾರ, ಉತ್ತಮ ವಿಡಿಯೊ ಕಾನ್ಫರೆನ್ಸಿಂಗ್ ವ್ಯವಸ್ಥೆ ಒದಗಿಸುವಂತೆ ಸೂಚನೆ

ತಮಗೆ ಜೀವಭಯ ಇದೆ ಹಾಗೂ ತಮ್ಮ ವಕೀಲರೊಂದಿಗೆ ಚರ್ಚಿಸಲು ಒಂದೇ ಕಾರಾಗೃಹಕ್ಕೆ ಸ್ಥಳಾಂತರಿಸಬೇಕು ಎಂದು ಕೋರಿ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

ಬೆಂಗಳೂರು: ತಮಗೆ ಜೀವಭಯ ಇದೆ ಹಾಗೂ ತಮ್ಮ ವಕೀಲರೊಂದಿಗೆ ಚರ್ಚಿಸಲು ಒಂದೇ ಕಾರಾಗೃಹಕ್ಕೆ ಸ್ಥಳಾಂತರಿಸಬೇಕು ಎಂದು ಕೋರಿ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

ಬಿಜೆಪಿಯ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಸದ್ಯ ಬಳ್ಳಾರಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಸುಳ್ಯ ತಾಲ್ಲೂಕಿನ ಎತ್ತಿನಹೊಳೆಯ ಅಬ್ದುಲ್‌ ಬಷೀರ್‌ ಸೇರಿದಂತೆ ಬಳ್ಳಾರಿ, ಧಾರವಾಡ, ಶಿವಮೊಗ್ಗ, ಮೈಸೂರು, ವಿಜಯಪುರ ಮತ್ತು ಕಲಬುರಗಿ ಜೈಲುಗಳಲ್ಲಿರುವ ಒಟ್ಟು 11 ಜನ ಆರೋಪಿಗಳು ತಮ್ಮನ್ನು ಒಂದೇ ಕಡೆ ಇರಿಸಲು ಕೋರಿ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ.

ಕರ್ನಾಟಕ ಕಾರಾಗೃಹ ಮತ್ತು ಸುಧಾರಣಾ ಸೇವೆಗಳು ವಿಭಾಗದ ಐಜಿಪಿ ಹಾಗೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರ ಪರ ವಾದಿಸಿದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್ ಶೆಟ್ಟಿ, ಹೆಚ್ಚುವರಿ ಅಡ್ವೊಕೇಟ್ ಜನರಲ್‌ ವಿ ಜಿ ಭಾನುಪ್ರಕಾಶ್‌ ಮತ್ತು ಎನ್‌ಐಎ ಪರವಾಗಿ ವಾದ ಮಂಡಿಸಿದ್ದ ಪಿ ಪ್ರಸನ್ನಕುಮಾರ್ ಅರ್ಜಿದಾರರ ಮನವಿಯನ್ನು ತೀವ್ರವಾಗಿ ಆಕ್ಷೇಪಿಸಿದ್ದರು.

ಅರ್ಜಿದಾರರನ್ನು ಒಂದೇ ಕಡೆ ಇರಿಸಿದಲ್ಲಿ ಅವರೆಲ್ಲಾ ಮತ್ತೊಂದು ಪಿತೂರಿ ನಡೆಸಲು ಸಿದ್ದತೆ ಮಾಡಿಕೊಳ್ಳಬಹುದು. ಅಂತೆಯೇ ಅವರು ಈಗಿರುವ ಜೈಲುಗಳಲ್ಲಿ, ಅವರ ಮೇಲೆ ಯಾವುದೇ ರೀತಿಯ ಹಲ್ಲೆ ನಡೆದಿಲ್ಲ. ಅರ್ಜಿದಾರ ಕತೆಗಳನ್ನೆಲ್ಲಾ ನಂಬಬಾರದು’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದ್ದರು.

ರಾಜ್ಯದ ಎಲ್ಲಾ ಜೈಲುಗಳಲ್ಲಿ ವಿಡಿಯೊ ಕಾನ್ಪೆರೆನ್ಸ್ ವ್ಯವಸ್ಥೆಯಿದೆ. ಅವರಿಗೆ ಅಗತ್ಯವಿದ್ದ ಸಂದರ್ಭದಲ್ಲಿ ಅದನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಬೆಂಗಳೂರಿನ ಕೇಂದ್ರ ಕಾರಾಗೃಹ ಕೇವಲ 4 ಸಾವಿರ ಕೈದಿಗಳ ಸಾಮರ್ಥ್ಯ ಹೊಂದಿದ್ದು ಇಲ್ಲೀಗ 5,200 ಕೈದಿಗಳನ್ನು ಇರಿಸಲಾಗಿದೆ. ಎಲ್ಲ ಅರ್ಜಿದಾರರನ್ನು ಬೆಂಗಳೂರಿನ ಕಾರಾಗೃಹಕ್ಕೆ ಸ್ಥಳಾಂತರ ಮಾಡುವುದು ಉತ್ತಮ ಬೆಳವಣಿಗೆಯಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.

ನಮಗೆಲ್ಲಾ ಜೀವ ಭಯ ಇದೆ. ಹಾಗಾಗಿ, ನಾವೆಲ್ಲಾ ನಮ್ಮ ವಕೀಲರ ಜೊತೆ ಚರ್ಚೆ ನಡೆಸಲು ನಮ್ಮನ್ನೆಲ್ಲಾ ಒಂದೇ ಜೈಲಿಗೆ ಸ್ಥಳಾಂತರ ಮಾಡಲು ನಿರ್ದೇಶಿಸಬೇಕು ಎಂಬ ಅರ್ಜಿದಾರರ ಮನವಿಯನ್ನು ನ್ಯಾಯಪೀಠ ತಿರಸ್ಕರಿಸಿದೆ.

ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಎಲ್ಲ ಆರೋಪಿಗಳು ನಿಷೇಧಿತ ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾದ ಸದಸ್ಯರಾಗಿದ್ದಾರೆ. ಒಬ್ಬ ಕೈದಿ ಈಗಾಗಲೇ ತಪ್ಪು ಒಪ್ಪಿಕೊಂಡಿರುವುದರಿಂದ ಇನ್ನಿತರರನ್ನೂ ಒಂದೇ ಕಡೆ ಇರಿಸುವುದು ಸೂಕ್ತವಲ್ಲ ಎಂದು ನ್ಯಾಯಾಲಯ ತನ್ನ ಅದೇಶದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದೆ.

ವಕೀಲರು ಹಾಗೂ ಕುಟುಂಬದ ಸದಸ್ಯರೊಂದಿಗೆ ನಡೆಸುವ ಸಂಭಾಷಣೆ ಮತ್ತೊಬ್ಬರಿಗೆ ತಿಳಿಯದಂತೆ ಗೌಪ್ಯತೆ ಕಾಪಾಡಬೇಕು. ಇದಕ್ಕಾಗಿ ಅವರಿಗೆ ಹೆಡ್‌ ಫೋನ್‌ಗಳನ್ನು ಒದಗಿಸಬೇಕು. ಇಂತಹ ಸೌಲಭ್ಯಗಳು ಯಾವ ಜೈಲಿನಲ್ಲಿ ಇಲ್ಲವೋ ಅಲ್ಲೆಲ್ಲಾ ಈ ಸೌಲಭ್ಯ ಕಲ್ಪಿಸಲು ಸರ್ಕಾರ ಶೀಘ್ರವೇ ಮುಂದಾಗಬೇಕು. ಎಲ್ಲಿ ಇಂತಹ ವ್ಯವಸ್ಥೆ ಇದೆಯೊ ಅಲ್ಲಿ ದೋಷರಹಿತವಾ ಕಾರ್ಯನಿರ್ವಹಣೆಗೆ ನಿರ್ದೇಶಿಸಬೇಕು ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಏನಿದು ಪ್ರಕರಣ?

ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾದ ಕಾರ್ಯಕಾರಿ ಸಮಿತಿಯ ಸದಸ್ಯನಾಗಿದ್ದ ಪ್ರವೀಣ್‌ ನೆಟ್ಟಾರು, ಸುಳ್ಯ ತಾಲ್ಲೂಕಿನ ಬೆಳ್ಳಾರೆ ಗ್ರಾಮ ಅಕ್ಷಯ ಫ್ರೆಶ್‌ ಚಿಕೆನ್‌ ಫಾರ್ಮ್‌ ಶಾಪ್‌ ಹೊಂದಿದ್ದರು. 2022ರ ಜುಲೈ 26ರಂದು ರಾತ್ರಿ 8.30ರ ವೇಳೆ ಅಂಗಡಿಯನ್ನು ಮುಚ್ಚಿ ಮನೆಗೆ ಮೋಟಾರು ವಾಹನದಲ್ಲಿ ಹೋಗುತ್ತಿದ್ದಾಗ ಕೆಲ ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ನೆಟ್ಟಾರು ಮೇಲೆ ದಾಳಿ ನಡೆಸಿ, ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ನೆಟ್ಟಾರು ಅವರನ್ನು ಪುತ್ತೂರಿನ ಪ್ರಗತಿ ಆಸ್ಪತ್ರೆಗೆ ದಾಖಲಿಸಲು ಆ್ಯಂಬುಲೆನ್ಸ್‌ನಲ್ಲಿ ಕರೆದೊಯ್ಯುವಾಗಲೇ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದರು.

ಘಟನೆ ಕುರಿತು ಪ್ರವೀಣ್‌ ಸ್ನೇಹಿತ ಮಧು ಕುಮಾರ್‌ ಬೆಳ್ಳಾರೆ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಯುತ್ತಿದ್ದ ವೇಳೆ ಪ್ರಕರಣವನ್ನು ಎನ್‌ಐಎಗೆ ವಹಿಸಿ 2022ರ ಆಗಸ್ಟ್‌ 3ರಂದು ಕೇಂದ್ರ ಸರ್ಕಾರ ಆದೇಶಿಸಿತ್ತು. 2022ರ ಆಗಸ್ಟ್‌ 4ರಂದು ಎನ್‌ಐಎ ತನಿಖಾಧಿಕಾರಿಗಳು ಪ್ರಕರಣವನ್ನು ಮತ್ತೆ ದಾಖಲಿಸಿಕೊಂಡಿದ್ದರು. ಬಳಿಕ ತನಿಖೆ ಮುಂದುವರಿಸಿ, ಆರೋಪಿಗಳನ್ನು ಬಂಧಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

SCROLL FOR NEXT