ಬೆಂಗಳೂರು: ಹುಕ್ಕಾ ಬಾರ್'ಗೆ ರಾಜ್ಯ ಸರ್ಕಾರ ಸಂಪೂರ್ಣ ನಿಷೇಧ ಹೇರಿದ್ದರೂ, ಸ್ಥಳೀಯ ಪೊಲೀಸರ ಬೆಂಬಲದೊಂದಿಗೆ ಅನೇಕ ಹುಕ್ಕಾ ಕೆಫೆಗಳು, ವಿಶೇಷವಾಗಿ ನಗರ ವ್ಯಾಪ್ತಿಯ ಹೊರಗಿರುವ ಹುಕ್ಕಾ ಬಾರ್ ಗಳು ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವುದು ಕಂಡು ಬರುತ್ತಿದೆ.
ಮೈಸೂರು ರಸ್ತೆಯಲ್ಲಿರುವ ಬಿಡದಿ, ರಾಮನಗರ, ಏರ್‌ಪೋರ್ಟ್ ರಸ್ತೆ ಮತ್ತು ನಂದಿ ಬೆಟ್ಟಗಳಲ್ಲಿರುವ ಹುಕ್ಕಾ ಕೆಫೆಗಳಿಗೆ ನೂರಾರು ಯುವಕರು ವಾರಾಂತ್ಯ ಮತ್ತು ರಜಾದಿನಗಳಲ್ಲಿ ಭೇಟಿ ನೀಡುತ್ತಿದ್ದಾರೆ.
ಈ ಕೆಫೆಗಳು ವಾರದ ದಿನಗಳಲ್ಲಿ ದಿನಕ್ಕೆ 6 ಲಕ್ಷ ರೂ.ಗೂ ಅಧಿಕ ವ್ಯವಹಾರ ನಡೆಸುತ್ತಿದ್ದು, ವಾರಾಂತ್ಯದಲ್ಲಿ 10 ಲಕ್ಷ ರೂ ಗಳಿಸುತ್ತಿವೆ ಎಂದು ತಿಳಿದುಬಂದಿದೆ.
ಈ ನಡುವೆ ಅಕ್ರಮ ಹುಕ್ಕಾ ಬಾರ್‌ಗಳ ಬಗ್ಗೆ ಪೊಲೀಸರಿಗೆ ದೂರು ನೀಡುವಂತೆ ತಂಬಾಕು ನಿಯಂತ್ರಣ ತಜ್ಞರು ಜನರಿಗೆ ಮನವಿ ಮಾಡಿಕೊಂಡಿದ್ದಾರೆ.
ನಿಷೇಧವನ್ನು ಕೇವಲ ಬೆಂಗಳೂರು ಅಷ್ಟೇ ಅಲ್ಲದೆ, ರಾಜ್ಯದಾದ್ಯಂತ ಜಾರಿಗೊಳಿಸಬೇಕು. ಪೊಲೀಸರಿಗೆ ಲಂಚ ನೀಡುವ ಮೂಲಕ ಕೆಲ ಹುಬ್ಬಾ ಬಾರ್ ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೆಸರು ಹೇಳಲಿಚ್ಛಿಸದ ಕೆಫೆ ಮಾಲೀಕರೊಬ್ಬರು ಹೇಳಿದ್ದಾರೆ.
ನಗರದ ಹೊರಗಿರುವ ಹುಬ್ಬಾ ಬಾರ್ ಗಳು ಕಾರ್ಯಾಚರಿಸುತ್ತಿರುವುದರಿಂದ ನಗರದಲ್ಲೇಕೆ ಸ್ಥಗಿತಗೊಳಿಸಲಾಗಿದೆ ಕೆಲವರು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ಹುಕ್ಕಾ ಬಾರ್ ನಿಷೇಧ ಕೇವಲ ಬೆಂಗಳೂರಿಗೆ ಮಾತ್ರ ಅನ್ವಯಿಸುತ್ತಿದೆಯೇ ಅಥವಾ ರಾಜ್ಯದಾದ್ಯಂತ ಅನ್ವಯಿಸುತ್ತಿದೆಯೇ ಎಂದು ಪ್ರಶ್ನಿಸುತ್ತಿದ್ದಾರೆ. ಕಾನೂನು ಬಾಹಿರವಾಗಿ ಹುಕ್ಕಾ ಬಾರ್ ಗಳು ಕಾರ್ಯನಿರ್ವಹಿಸುತ್ತಿವೆ ಎಂಬುದು ತಿಳಿದಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಎರಡು ದಶಕಗಳಿಂದ ತಂಬಾಕು ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಸಂಸ್ಥೆಯಾದ ತಂಬಾಕು ಮುಕ್ತ ಕರ್ನಾಟಕ (ಸಿಎಫ್‌ಟಿಎಫ್‌ಕೆ) ಒಕ್ಕೂಟದ ಸಂಚಾಲಕ ಎಸ್‌ಜೆ ಚಂದರ್ ಮಾತನಾಡಿ, ಹುಕ್ಕಾದಲ್ಲಿ ಕೊಕೇನ್ ಅಥವಾ ಹೆರಾಯಿನ್‌ಗಿಂತ ಹೆಚ್ಚು ವ್ಯಸನಕಾರಿ ನಿಕೋಟಿನ್ ಇದೆ. ಮಕ್ಕಳು ಮತ್ತು ಯುವಕರನ್ನು ಹುಕ್ಕಾ ಚಟದಿದ ರಕ್ಷಿಸಬೇಕಾಗಿದೆ. ವಿವಿಧ ಸುವಾಸನೆಗಳಿಂದ ಆಮಿಷಕ್ಕೆ ಒಳಗಾಗುತ್ತಿದ್ದಾರೆ ಆದರೆ ಅದರಲ್ಲಿರುವ ನಿಕೋಟಿನ್ ಬಗ್ಗೆ ತಿಳಿದಿರುವುದಿಲ್ಲ ಎಂದು ಹೇಳಿದ್ದಾರೆ.
ಸರ್ಕಾರ ತನ್ನ ಕೈಲಾದಷ್ಟು ಮಾಡುತ್ತಿದೆ, ಜನರು ಕೂಡ ಅಕ್ರಮಗಳ ಕುರಿತು ಹುಕ್ಕಾ ಬಾರ್‌ಗಳ ಕಾರ್ಯನಿರ್ವಹಣೆಯನ್ನು ಜಾರಿಗೊಳಿಸುವ ಪ್ರಾಧಿಕಾರಕ್ಕೆ ದೂರು ನೀಡಬೇಕು. ಹುಕ್ಕಾ ಹೆಚ್ಚು ವ್ಯಸನಕಾರಿ ಮತ್ತು ಯುವಕರ ಭವಿಷ್ಯಕ್ಕೆ ಅಪಾಯವನ್ನುಂಟುಮಾಡುತ್ತದೆ, ನಿಷೇಧದ ಹೊರತಾಗಿಯೂ ಹುಕ್ಕಾ ಬಾರ್‌ಗಳನ್ನು ನಿರ್ವಹಿಸುವವರ ಮೇಲೆ ಪೊಲೀಸರು ನಿಗಾ ಹೆಚ್ಚಿಸಬೇಕು ಎಂದು ತಿಳಿಸಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಅವರು ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರವು ಹುಕ್ಕಾ ಬಾರ್ ಮೇಲೆ ನಿಷೇಧ ಹೇರಿದೆ. ಸರ್ಕಾರದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಹುಕ್ಕಾ ಬಾರ್‌ಗಳ ಕಾರ್ಯನಿರ್ವಹಣೆಯ ಬಗ್ಗೆ ನಮಗೆ ಸಿಗುವ ಮಾಹಿತಿಯ ಆಧಾರದ ಮೇಲೆ ನಾವು ಕಠಿಣ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಲ್ಲದೆ, ಟ್ರೇಡ್ ಲೈಸೆನ್ಸ್ ರದ್ದುಗೊಳಿಸುವ ಕುರಿತು ಚಿಂತನೆಗಳು ನಡೆದಿವೆ ಎಂದು ಹೇಳಿದ್ದಾರೆ.