ಹುಬ್ಬಳ್ಳಿ: ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಮೇ 7ರಂದು ಎರಡನೇ ಹಂತದ ಮತದಾನ ನಡೆಯಲಿದ್ದು, ಚುನಾವಣೆ ನಡೆಯಲಿರುವ ವಿವಿಧ ಭಾಗಗಳಲ್ಲಿ ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆಯಲ್ಲಿ ವಿಳಂಬವಾಗಿರುವುದಕ್ಕೆ ಬಿಜೆಪಿ ನಾಯಕರು ಆತಂಕಕ್ಕೊಳಗಾಗಿದ್ದಾರೆ. ಮತದಾನದ ದಿನ ಅಥವಾ ಸ್ವಲ್ಪ ಮುಂಚಿತವಾಗಿ ಸರ್ಕಾರ ಈ ಹಣವನ್ನು ಜಮೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಗೃಹಲಕ್ಷ್ಮಿ ಖಾತರಿ ಯೋಜನೆಯಡಿ ಕಾಂಗ್ರೆಸ್ ಸರ್ಕಾರವು ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ಮಾಸಿಕ 2,000 ರೂ. ನೀಡುತ್ತಿದೆ. ಮತದಾರರ ಮೇಲೆ ಪ್ರಭಾವ ಬೀರಲು ಸರ್ಕಾರ ಉದ್ದೇಶಪೂರ್ವಕವಾಗಿ ಹಣ ಬಿಡುಗಡೆ ಮಾಡುವುದನ್ನು ವಿಳಂಬ ಮಾಡುತ್ತಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ಈ ಆರೋಪವನ್ನು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಅಲ್ಲಗಳೆದಿದ್ದರೂ, ಬಿಜೆಪಿ ಕಾರ್ಯಕರ್ತರು ಇದನ್ನು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ಗಮನಕ್ಕೆ ತರಲು ಮುಂದಾಗಿದ್ದಾರೆ.
ಕರ್ನಾಟಕದಲ್ಲಿ ಏಪ್ರಿಲ್ 26 ರಂದು ನಡೆದ ಮೊದಲನೇ ಹಂತದ ಚುನಾವಣೆ ಸಂದರ್ಭದಲ್ಲಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಅನೇಕ ಫಲಾನುಭವಿಗಳು ಮತದಾನದ ದಿನವೇ ಮೊತ್ತವನ್ನು ಪಡೆದಿದ್ದಾರೆ. ಈ ಬಾರಿಯೂ ಮತದಾನದ ದಿನ ಅಥವಾ ಕೆಲವು ದಿನಗಳ ಮೊದಲು ಯೋಜನೆಯ ಬಾಕಿ ಪಾವತಿಸಲು ಸರ್ಕಾರ ಯೋಜಿಸುತ್ತಿದೆ ಎಂದು ಬಿಜೆಪಿ ಸದಸ್ಯರು ಆರೋಪಿಸಿದ್ದಾರೆ.
ಮತದಾನದ ದಿನ ಸಮೀಪಿಸುತ್ತಿದೆ ಮತ್ತು ಪಕ್ಷದ ಹಿರಿಯ ನಾಯಕರನ್ನು ಈ ಬಗ್ಗೆ ಪರಿಶೀಲಿಸುವಂತೆ ವಿನಂತಿಸಲು ನಾವು ಯೋಜಿಸುತ್ತಿದ್ದೇವೆ. ಇದು ಮತದಾರರ ಮನಸ್ಸಿನ ಮೇಲೆ ಪರಿಣಾಮ ಬೀರಲಿದ್ದು, ರಾಜ್ಯ ಸರ್ಕಾರಕ್ಕೆ ಈ ರೀತಿ ಮಾಡಲು ಅವಕಾಶ ನೀಡುವುದಿಲ್ಲ ಎಂದು ಬಿಜೆಪಿ ಕಾರ್ಯಕರ್ತರೊಬ್ಬರು ಹೇಳಿದರು.
'ಗೃಹಲಕ್ಷ್ಮಿ ಮೊತ್ತವನ್ನು ರಾಜ್ಯ ಸರ್ಕಾರವು ಕಂತುಗಳಲ್ಲಿ ಬಿಡುಗಡೆ ಮಾಡುತ್ತದೆ. ನಾವು ತಿಂಗಳ ಅಂತ್ಯದ ವೇಳೆಗೆ ಫಲಾನುಭವಿಗಳಿಗೆ ಹಣ ಪಾವತಿ ಮಾಡಲು ಪ್ರಾರಂಭಿಸುತ್ತೇವೆ. 28ನೇ ತಾರೀಖಿನಿಂದ ಪಾವತಿಸಲು ಆರಂಭಿಸಿದರೆ ಫಲಾನುಭವಿಗಳಿಗೆ ಹಣ ತಲುಪಲು ಆರು ದಿನ ಬೇಕಾಗುತ್ತದೆ’ ಎಂದು ಬಳ್ಳಾರಿ ಆಡಳಿತದ ಅಧಿಕಾರಿಯೊಬ್ಬರು ವಿವರಿಸಿದರು.
ಬಳ್ಳಾರಿ ಜಿಲ್ಲೆಯಲ್ಲಿ 3.5 ಲಕ್ಷ ಫಲಾನುಭವಿಗಳ ಖಾತೆಗಳಿವೆ. ವರ್ಷಕ್ಕೆ ಒಟ್ಟು 556 ಕೋಟಿ ರೂ. ಹಣವನ್ನು ಪಾವತಿಸಬೇಕಾಗುತ್ತದೆ.
ಈ ತಿಂಗಳು ‘ತಾಂತ್ರಿಕ ಸಮಸ್ಯೆ’ ಇರುವುದರಿಂದ ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಯಲ್ಲಿ ಹಣ ಪಾವತಿಯಾಗಬೇಕಿದೆ. ಸರ್ಕಾರದಿಂದ ಮೊತ್ತ ಬಿಡುಗಡೆಯಾದ ನಂತರ, ನಾವು ಪಾವತಿಗಳನ್ನು ಮಾಡುತ್ತೇವೆ' ಎನ್ನುತ್ತಾರೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯೊಬ್ಬರು.