ಮೈಸೂರು: ಕಬಿನಿ ಜಲಾಶಯ ಕರ್ನಾಟಕದ ಕೃಷಿ ಭೂದೃಶ್ಯದ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸಿದೆ. ಕಬಿನಿ ಅಣೆಕಟ್ಟು ನಿರ್ಮಾಣ ಮತ್ತು ಕಾರ್ಯಾಚರಣೆ ಆರಂಭವಾಗಿ ಮೇ 20ಕ್ಕೆ 50 ನೇ ವರ್ಷವಾಗಿದೆ. ಆದರೆ, ಈ ಐತಿಹಾಸಿಕ ಸಂದರ್ಭವನ್ನು ಅಧಿಕಾರಿಗಳು ನಿರ್ಲಕ್ಷಿಸಿರುವುದು, ಸ್ಮರಣಾರ್ಥ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ವಿಫಲವಾಗಿರುವುದು ಸ್ಥಳೀಯರಲ್ಲಿ ನಿರಾಶೆ ಮೂಡಿಸಿದೆ.
1959 ರಲ್ಲಿ ಅಣೆಕಟ್ಟನ್ನು ನಿರ್ಮಿಸುವ ಕೆಲಸ ಪ್ರಾರಂಭವಾದರೂ, ಅದು 1974 ರಲ್ಲಿ ಪೂರ್ಣಗೊಂಡಿತು ಮತ್ತು ಮೇ 20, 1974 ರಂದು ಕಬಿನಿ ಎಡದಂಡೆ ಕಾಲುವೆಗೆ ನೀರನ್ನು ಬಿಡುವುದರ ಮೂಲಕ ಈ ಪ್ರದೇಶದ ಕೃಷಿ ಭೂದೃಶ್ಯವನ್ನು ಪರಿವರ್ತಿಸುವಲ್ಲಿ ಕಬಿನಿ ಅಣೆಕಟ್ಟು ತನ್ನ ಪ್ರಮುಖ ಪಾತ್ರವನ್ನು ಪ್ರಾರಂಭಿಸಿತು. ಮೊದಲ ಬಾರಿಗೆ, ರೈತರಿಗೆ ಅಪಾರ ಪರಿಹಾರ ಮತ್ತು ಸಂತೋಷವನ್ನು ತಂದಿತ್ತು. ಹಬ್ಬ ಹರಿದಿನಗಳನ್ನು ಆಚರಿಸುವ ಬದಲು ಅಣೆಕಟ್ಟಿನ ಸುವರ್ಣ ಮಹೋತ್ಸವದಂದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿತ್ತು, ಕಣ್ಮುಚ್ಚಿ ಕುಳಿತಿರುವ ಅಧಿಕಾರಿಗಳ ವಿರುದ್ಧ ಇಲ್ಲಿನ ರೈತರು ಹಾಗೂ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರವು ಕೂಡ ನಿರ್ಲಕ್ಷ್ಯ ತೋರಿರುವುದಕ್ಕೆ ರೈತರು ನಿರಾಶೆಗೊಂಡಿದ್ದಾರೆ.
ಈ ಪ್ರದೇಶದ ಅಭಿವೃದ್ಧಿಯನ್ನಂತೂ ಮಾಡುವುದಿಲ್ಲ, ಕೊನೇ ಪಕ್ಷ ಕಬಿನಿ ಜಲಾಶಯದ ಸುವರ್ಣ ಮಹೋತ್ಸವನ್ನಾದರೂ ಸರ್ಕಾರ ಆಚರಿಸುತ್ತಾದೆ ಎಂಬ ನಿರೀಕ್ಷೆಯಲ್ಲಿದ್ದೇವು, ಈ ಭಾಗದ ಜನರ ಜೀವನಾಡಿಯಾಗಿದೆ ಕಬಿನಿ ಅಣೆಕಟ್ಟು ಎಂದು ಬೀಚನಹಳ್ಳಿ ನಿವಾಸಿ ಕುಮಾರ್ ಎಂಬುವರು ಹೇಳಿದ್ದಾರೆ. ಅಧಿಕಾರಿಗಳಿಂದ ಮನ್ನಣೆಯ ಕೊರತೆಯು ಅಂತಹ ಪ್ರಮುಖ ಮೂಲಸೌಕರ್ಯಗಳನ್ನು ಬೆಂಬಲಿಸುವ ಮತ್ತು ಸಂರಕ್ಷಿಸುವ ಸರ್ಕಾರದ ಬದ್ಧತೆಯನ್ನು ಪ್ರಶ್ನಿಸುವಂತೆ ಮಾಡಿದೆ.
ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸರಕಾರಗಳು ಎಚ್‌ಡಿ ಕೋಟೆ ಪಟ್ಟಣ ಮತ್ತು ಕಬಿನಿ ಪ್ರದೇಶವನ್ನು ವಿಶೇಷ ಅನುದಾನದಲ್ಲಿ ಅಭಿವೃದ್ಧಿಪಡಿಸುವುದಾಗಿ ಘೋಷಿಸಿದ್ದವು. ಬಜೆಟ್‌ನಲ್ಲಿ ಕೆಆರ್‌ಎಸ್‌ನ ಬೃಂದಾವನ ಉದ್ಯಾನವನದ ಮಾದರಿಯಲ್ಲಿ ಕಬಿನಿ ಅಣೆಕಟ್ಟು ಪ್ರದೇಶದಲ್ಲಿ ಸಸ್ಯೋದ್ಯಾನವನ್ನು ಘೋಷಿಸಲಾಯಿತು ಆದರೆ ಅದು ಇಂದಿಗೂ ಅನುಷ್ಠಾನವಾಗದೇ ಕೇವಲ ಕಾಗದದಲ್ಲಿ ಮಾತ್ರ ಉಳಿದಿದೆ.
ಸ್ಥಳೀಯ ಶಾಸಕರಾದ ಅನಿಲ್ ಚಿಕ್ಕಮಾದು ಸುವರ್ಣ ಮಹೋತ್ಸವವನ್ನು ಆಯೋಜಿಸಲಾಗುವುದು, ಅಣೆಕಟ್ಟನ್ನು ಅಭಿವೃದ್ಧಿಪಡಿಸಲಾಗುವುದು ಮತ್ತು ವರ್ಷಪೂರ್ತಿ ಆಚರಿಸಲಾಗುವುದು ಎಂದು ಕಳೆದ ವರ್ಷ ಘೋಷಿಸಿದರು. ಅದು ಕೇವಲ ಭರವಸೆಯಾಗಿಯೇ ಉಳಿದಿದೆ, ಯಾವುದೇ ಪ್ರಗತಿ ಕಾಣಲಿಲ್ಲ ಎನ್ನುತ್ತಾರೆ ಬಿದರಹಳ್ಳಿ ನಿವಾಸಿ ಸುನೀಲ್.
ಏತನ್ಮಧ್ಯೆ, ಅಣೆಕಟ್ಟಿನ ನಿವೃತ್ತ ಸಿಬ್ಬಂದಿಯೊಬ್ಬರು ಈ ಬಗ್ಗೆ ಎಲ್ಲಾ ವಿವರಗಳನ್ನು ಅಧಿಕಾರಿಗಳಿಗೆ ನೀಡಿದ್ದರೂ ಅವರು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಬಹಿರಂಗಪಡಿಸಿದರು. ಈ ಸಂದರ್ಭವನ್ನು ಆಚರಿಸಲು ಯಾವುದೇ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಯೊಬ್ಬರು, ಈ ನಿಟ್ಟಿನಲ್ಲಿ ಸರ್ಕಾರದಿಂದ ಯಾವುದೇ ನಿರ್ದೇಶನ ಬಂದಿಲ್ಲ ಎಂದು ಹೇಳಿದರು. "ನಾನು ನನ್ನ ಹಿರಿಯ ಅಧಿಕಾರಿಗಳನ್ನು ಕೇಳಿದೆ, ಲೋಕಸಭಾ ಚುನಾವಣೆಯ 'ಮಾದರಿ ನೀತಿ ಸಂಹಿತೆ'ಯನ್ನು ಕಾರಣವಾಗಿ ಉಲ್ಲೇಖಿಸುವಂತೆ ಹಿರಿಯ ಅಧಿಕಾರಿಗಳು ಹೇಳಿದರು" ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.