ಬೆಂಗಳೂರು: ಮೇ 30ರಂದು ಕರ್ನಾಟಕ ಹೈಕೋರ್ಟ್ ಡಾ.ಶಿವರಾಮ ಕಾರಂತ ಬಡಾವಣೆ ನಿವೇಶನ ಹಂಚಿಕೆಗೆ ಹಸಿರು ನಿಶಾನೆ ತೋರುವ ನಿರೀಕ್ಷೆಯಲ್ಲಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಆನ್‌ಲೈನ್‌ನಲ್ಲಿ ಸಾರ್ವಜನಿಕರಿಗೆ ನಿವೇಶನ ಹಂಚಿಕೆ ಮಾಡಲು ಸಿದ್ಧತೆ ನಡೆಸಿದೆ. ಇದು ಸಾಧ್ಯವಾದರೆ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಂಗ್ರಹಿಸುವ ಮೊದಲ ಬಿಡಿಎ ಲೇಔಟ್ ಇದಾಗಲಿದೆ. ಯಾವುದೇ ಬಿಡಿಎ ಕಚೇರಿಗೆ ಭೌತಿಕ ಭೇಟಿ ಅಗತ್ಯವಿಲ್ಲದೇ ಆನ್‌ಲೈನ್‌ನಲ್ಲಿ ಹಂಚಿಕೆಯನ್ನು ಮಾಡಲಾಗುತ್ತದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ಈ ಲೇಔಟ್‌ನಲ್ಲಿ ಹಂಚಿಕೆಯ ಅಧಿಸೂಚನೆಯನ್ನು ಸಾರ್ವಜನಿಕರು ತೀವ್ರವಾಗಿ ನಿರೀಕ್ಷಿಸುತ್ತಿದ್ದಾರೆ. 34,000 ಸೈಟ್‌ಗಳ ಪೈಕಿ 10,000 ಸೈಟ್‌ಗಳನ್ನು ಮಾತ್ರ ಸಾರ್ವಜನಿಕರಿಗೆ ಹಂಚಿಕೆ ಮಾಡಲಾಗುತ್ತದೆ. ಇನ್ನುಳಿದ ಸೈಟ್‌ಗಳನ್ನು ಲೇಔಟ್ ಗೆ ಜಮೀನು ನೀಡಿದವರಿಗೆ ನೀಡಲಾಗುತ್ತದೆ. ಕೆಲವು ವರ್ಷಗಳ ನಂತರ ಕಾರ್ನರ್ ನಿವೇಶನಗಳನ್ನು ಹರಾಜು ಮಾಡಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಸೈಟ್ ಅನ್ನು ಬುಕ್ ಮಾಡಲು ಆರಂಭಿಕ ಠೇವಣಿ ಹಣವನ್ನು ಶೇಕಡ 12.5ರಷ್ಟು ಇಂಟರ್ನೆಟ್ ಬ್ಯಾಂಕಿಂಗ್ ಅಥವಾ ಯುಪಿಐ ಮೂಲಕ ಮಾತ್ರ ಪಾವತಿಸಬೇಕಾಗುತ್ತದೆ ಎಂದು ಬಿಡಿಎ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ. ನಾವು ಹಿಂದಿನಂತೆ ಡಿಡಿ ಅಥವಾ ಚೆಕ್ ಅನ್ನು ಸ್ವೀಕರಿಸುವುದಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದರು.
ಆನ್‌ಲೈನ್‌ನಲ್ಲಿ ಪಾವತಿಸಲು ಸಾಧ್ಯವಾಗದವರು ಯಾವುದೇ ಬೆಂಗಳೂರು ಒನ್ ಕೇಂದ್ರ ಅಥವಾ ನಾವು ವ್ಯವಸ್ಥೆ ಹೊಂದಿರುವ ನಗರದ ಒಂಬತ್ತು ಬ್ಯಾಂಕ್‌ಗಳಲ್ಲಿ ಯಾವುದಾದರೂ ಒಂದನ್ನು ಸಂಪರ್ಕಿಸಬಹುದು. ಅಲ್ಲಿ ಸಾರ್ವಜನಿಕರಿಗೆ ಸಹಾಯ ಮಾಡಲು ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯುತ್ತಾರೆ ಎಂದು ಇನ್ನೊಬ್ಬ ಅಧಿಕಾರಿ ಹೇಳಿದರು. ಕೆನರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಸೌತ್ ಇಂಡಿಯನ್ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಬಿಡಿಎ ಜೊತೆ ಪಾಲುದಾರಿಕೆ ಹೊಂದಿವೆ.
ಬಡಾವಣೆಯನ್ನು ಅಭಿವೃದ್ಧಿಪಡಿಸಲು ಬಿಡಿಎ 5,000 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ನಿವೇಶನಗಳನ್ನು ಚದರ ಅಡಿಗೆ 4,900 ರೂ. ಫಿಕ್ಸ್ ಮಾಡಲಾಗಿದೆ. ಇದರ ಪ್ರಕಾರ, 30x40 ಚದರ ಅಡಿ 57 ಲಕ್ಷ ರೂ. 40x60 ಚದರ ಅಡಿ ರೂ 1.14 ಕೋಟಿ ಮತ್ತು 50x80 ಚದರ ಅಡಿ ರೂ 1.89 ಕೋಟಿ ರೂಪಾಯಿ ಆಗಲಿದೆ.