ಬೆಂಗಳೂರು: ಮುಸ್ಲಿಂ ಬಾಂಧವರ ಪವಿತ್ರ ಹಬ್ಬ ಬಕ್ರೀದ್ ಹತ್ತಿರ ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ತ್ಯಾಜ್ಯ ನಿರ್ವಹಣೆ, ಜಲ ಹಾಗೂ ವಾಯು ಮಾಲಿನ್ಯ ತಗ್ಗಿಸಲು ತಾತ್ಕಾಲಿಕ ಕಸಾಯಿಖಾನೆ ನಿರ್ಮಿಸುವಂತೆ ಸರ್ಕಾರಕ್ಕೆ ತಜ್ಞರು ಒತ್ತಾಯಿಸಿದ್ದಾರೆ.
UVCE ಜಲ ಸಂಸ್ಥೆಯ ನಿರ್ದೇಶಕರಾದ ಇನಾಯುತುಲ್ಲಾ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಅವರಿಗೆ ಈ ಸಬಂಧ ಮನವಿ ಸಲ್ಲಿಸಿದ್ದಾರೆ.
ಬಕ್ರೀದ್ ಹಬ್ಬದ ದಿನ ಸಾಮಾನ್ಯವಾಗಿ ನಗರದಲ್ಲಿ 400 ಟನ್ ಗಳಷ್ಟು ತ್ಯಾಜ್ಯ ಉಂಟಾಗುತ್ತದೆ. ಹಬ್ಬದ ದಿನ 3 ಲಕ್ಷ ಪ್ರಾಣಿಗಳನ್ನು ಬಲಿ ನೀಡಲಾಗುತ್ತದೆ. ಇದರಿದಂ ತ್ಯಾಜ್ಯ ಉಂಟಾಗುತ್ತದೆ. ಸುರಕ್ಷತೆ, ಪ್ರಾಣಿ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ತಾತ್ಕಾಲಿಕ ಕಸಾಯಿಖಾನೆಗಳನ್ನು ಸ್ಥಾಪಿಸಬೇಕು. ಇಲ್ಲಿ ಪ್ರಾಣೆ, ಸಂಸ್ಕರಣೆ ಹಾಗೂ ಪ್ಯಾಕೇಜಿಂಗ್ ವ್ಯವಸ್ಥೆ ಇರುವಂತೆ ಮಾಡಬೇಕು ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಎದುರಾಗಿದ್ದ ನೀರಿನ ಕೊರತೆಯನ್ನು ಗಮನದಲ್ಲಿಟ್ಟುಕೊಂಡು, ನಾವು ವಿವೇಚನೆಯಿಂದ ಬಳಕೆ ಮಾಡಬೇಕು. ನಗರದ ಹಲವೆಡೆ ಒಳಚರಂಡಿ ವ್ಯವಸ್ಥೆಗಳು ಸಂಸ್ಕರಣಾ ಸಂಪರ್ಕಗಳನ್ನು ಹೊಂದಿಲ್ಲ. ಪ್ರಾಣಿಗಳ ಬಲಿದಾನದ ವೇಳೆ ತ್ಯಾಜ್ಯ ಮಳೆನೀರು ಚರಂಡಿಗೆ ಹೋಗುತ್ತವೆ. ಇದರಿಂದ ಜಲಮೂಲಗಳು ಹಾಳಾಗುತ್ತದೆ. ನಮ್ಮ ಒಳಚರಂಡಿ ಸಂಸ್ಕರಣಾ ಘಟಕಗಳು (ಎಸ್‌ಟಿಪಿ) ಪ್ರಾಣಿಗಳ ತ್ಯಾಜ್ಯವನ್ನು ತಡೆಯಲು ಫಿಲ್ಟರ್‌ಗಳನ್ನು ಹೊಂದಿಲ್ಲ, ಹೀಗಾಗಿ ಎಲ್ಲಾ ಮಸೀದಿಗಳಲ್ಲಿ ಶುಕ್ರವಾರದ ಪ್ರಾರ್ಥನೆಯ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ಮಾಡಬೇಕು. ಬಿಬಿಎಂಪಿ ವಾರ್ಡ್ ಎಂಜಿನಿಯರ್‌ಗಳು ಮತ್ತು ಆರೋಗ್ಯ ಅಧಿಕಾರಿಗಳ ಬೆಂಬಲದೊಂದಿಗೆ ತಂತ್ರಗಳನ್ನು ರೂಪಿಸಬೇಕು ಎಂದು ತಿಳಿಸಿದ್ದಾರೆ.