ಹಾಸನ: ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನಾಂಬೆ ದೇಗುಲಕ್ಕೆ 8ನೇ ದಿನವಾದ ಗುರುವಾರ ರಾಜ್ಯದ ವಿವಿಧೆಡೆಯಿಂದ ಭಾರೀ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು 7-8 ಗಂಟೆಯಾದರೂ ದರ್ಶನ ಸಾಧ್ಯವಾಗದೆ ಜಿಲ್ಲಾಡಳಿತ ಹಾಗೂ ವಿಶೇಷ ಪಾಸುಗಳ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದು, ಭಕ್ತರ ಆಕ್ರೋಶಕ್ಕೆ ಮಣಿದ ಜಿಲ್ಲಾಡಳಿತ ಇದೀಗ ವಿವಿಐಪಿ ಪಾಸ್ ಸೇರಿ ಎಲ್ಲಾ ರೀತಿಯ ಪಾಸುಗಳನ್ನು ರದ್ದುಪಡಿಸಿ, ಧರ್ಮ ದರ್ಶನಕ್ಕಷ್ಟೇ ಅವಕಾಶ ನೀಡಿದೆ.
ಈ ವರ್ಷ ಹಾಸನಾಂಬೆಯ ದರ್ಶನಕ್ಕಾಗಿ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ಸುಗಮ ದರ್ಶನ ಕಲ್ಪಿಸಲು ಜಿಲ್ಲಾಡಳಿತ ಮಂಡಳಿ ಪರದಾಟ ಅನುಭವಿಸಿತು. ಧರ್ಮದರ್ಶನದ ಸಾಲು ಮೂರು ಕಿ.ಮೀಗೂ ಹೆಚ್ಚು ಉದ್ದ ಬೆಳೆದಿದ್ದು, ಇನ್ನು ವಿಐಪಿ, ವಿವಿಐಪಿ, 1000 ರುಪಾಯಿಯ ವಿಶೇಷ ಪಾಸ್. ಮತ್ತಿತರ ಪಾಸ್ ಹೊಂದಿರುವವರ ಸಾಲಿನಲ್ಲೂ ಕ್ಯೂ ಇತ್ತು. ಈ ಬಾರಿ 20 ಲಕ್ಷ ಮಂದಿ ದೇವಿ ದರ್ಶನ ಪಡೆಯಬಹುದೆಂದು ಜಿಲ್ಲಾಡಳಿತ ಅಂದಾಜಿಸಿದ್ದರೂ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಜನರನ್ನು ನಿಯಂತ್ರಿಸುವುದೇ ಅಧಿಕಾರಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸತ್ತು. ಜೊತೆಗೆ ವಿಐಪಿ ಪಾಸ್ ಗಳ ಕುರಿತಂತೆಯೂ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಗುರಿಯಾಗಿತ್ತು.
ಈ ನಡುವೆ ದೇವಸ್ಥಾನದ ಬಳಿಯೇ ಮಾರಾಮಾರಿ ನಡೆದಿತ್ತು. ಕುಟುಂಬದವರನ್ನು ದೇವಾಲಯಕ್ಕೆ ಕರೆದೊಯ್ಯುವ ವಿಚಾರಕ್ಕೆ ಕಂದಾಯ ಇಲಾಖೆ ಸಿಬ್ಬಂದಿ ಮಧ್ಯೆಯೇ ಜಟಾಪಟಿ ಶುರುವಾಗಿತ್ತು. ಇದರ ಬೆನ್ನಲ್ಲೇ ಎಲ್ಲಾ ರೀತಿಯ ಪಾಸ್ ಗಳನ್ನು ಜಿಲ್ಲಾಡಳಿ ಮಂಡಳಿ ರದ್ದು ಮಾಡಿತು.
ಇನ್ನು ಪಾಸ್ ರದ್ದು ಸಂಬಂಧ ಮಾಜಿ ಸಚಿವ ರೇವಣ್ಣ ಕೂಡ ಕೆಂಡಾಮಂಡಲರಾಗಿದ್ದಾರೆ. ಎರಡೂವರೆ ಲಕ್ಷ ವಿಐಪಿ ಪಾಸ್ ಯಾಕೆ ಕೊಟ್ಟಿರಿ? ಯಾರೂ ಪಾಸ್ ಕೊಡಿಸಿ ಎಂದು ಕೇಳಿಲ್ಲ. ನಂದು ದೇವಸ್ಥಾನ ಎಂದು ಡಿಸಿ ಹೇಳಿದರೆ ನಾನೇಕ ದೇವಸ್ಥಾನಕ್ಕೆ ಬರಲಿ? ಡಿಸಿ ವಿರುದ್ಧ ಕ್ರಮಕ್ಕೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯುತ್ತೇನೆಂದು ಹೇಳಿದರು.
ವಿಶೇಷ ಬಸ್ ಸಂಚಾರ ರದ್ದು
ಈ ನಡುವೆ ಹಾಸನಾಂಬೆ ದರ್ಶನಕ್ಕೆ ಬಿಟ್ಟಿದ್ದ 300 ವಿಶೇಷ ಬಸ್ ಸಂಚಾರವನ್ನು ಸರ್ಕಾರ ರದ್ದು ಮಾಡಿದೆ ಎಂದು ತಿಳಿದುಬಂದಿದೆ.
ಭಕ್ತರ ಸಾರಿಗೆ ಸೌಲಭ್ಯಕ್ಕಾಗಿ ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿತ್ತು. ಆದರೆ, ಭಕ್ತರ ಸಂಖ್ಯೆ ಮಿತಿಮೀರಿದ್ದು ನಿಯಂತ್ರಣ ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕಲ್ಪಿಸಿದ್ದ 300 ಕ್ಕೂ ಹೆಚ್ಚು ವಿಶೇಷ ಬಸ್ ಸಂಚಾರವನ್ನು ರದ್ದು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.