ಸಿಎಂ ಸಿದ್ದರಾಮಯ್ಯ 
ರಾಜ್ಯ

ಮುಡಾ ಸೈಟ್ ಕೇಸಿಗೂ ಮನಿ ಲಾಂಡ್ರಿಂಗ್ ಗೂ ಏನು ಸಂಬಂಧ, ಇದರಲ್ಲಿ ನನ್ನ ಪಾತ್ರವೇನಿದೆ?: ಸಿಎಂ ಸಿದ್ದರಾಮಯ್ಯ

ಇದು ಯಾವ ಆಧಾರದ ಮೇಲೆ ಅಕ್ರಮ ಹಣ ವರ್ಗಾವಣೆ ಪ್ರಕರಣ ಎಂಬುದು ನನಗೆ ಗೊತ್ತಿಲ್ಲ. ಬಹುಶಃ ನಿಮಗೂ ಹಾಗೆಯೇ ಅನಿಸುತ್ತಿರಬಹುದು.

ಬೆಂಗಳೂರು: ಮುಡಾ ಸೈಟ್ ಕೇಸಿನಲ್ಲಿ ತಮ್ಮ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಪ್ರಕರಣ ದಾಖಲಾಗಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಇದು ಯಾವ ಆಧಾರದ ಮೇಲೆ ಅಕ್ರಮ ಹಣ ವರ್ಗಾವಣೆ ಪ್ರಕರಣ ಎಂಬುದು ನನಗೆ ಗೊತ್ತಿಲ್ಲ. ಬಹುಶಃ ನಿಮಗೂ ಹಾಗೆಯೇ ಅನಿಸುತ್ತಿರಬಹುದು. ನನ್ನ ಪ್ರಕಾರ, ಪರಿಹಾರದ ಸೈಟ್‌ಗಳನ್ನು ನೀಡಿದ್ದರಿಂದ ಅದು ಮನಿ ಲಾಂಡ್ರಿಂಗ್ ಕೇಸು ಆಗುವುದಿಲ್ಲ, ಇದರಲ್ಲಿ ನನ್ನ ಪಾತ್ರ ಏನಿದೆ ಎಂದು ಇಂದು ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.

ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ದಿಂದ ಸಿಎಂ ಸಿದ್ದರಾಮಯ್ಯನವರ ಪತ್ನಿ ಪಾರ್ವತಿಯವರಿಗೆ 14 ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ವಿರುದ್ಧ ಪೊಲೀಸರು ಎಫ್‌ಐಆರ್‌ಗೆ ಸಮನಾದ ಎನ್‌ಫೋರ್ಸ್‌ಮೆಂಟ್ ಕೇಸ್ ಮಾಹಿತಿ ವರದಿಯನ್ನು (ECIR) ಇಡಿ ದಾಖಲಿಸಿದೆ.

ಇಸಿಐಆರ್‌ನಲ್ಲಿ ಮುಖ್ಯಮಂತ್ರಿ ಮತ್ತು ಇತರರ ವಿರುದ್ಧ ಇಡಿ ಪಿಎಂಎಲ್‌ಎಯ ಸಂಬಂಧಿತ ವಿಭಾಗಗಳನ್ನು ಅನ್ವಯಿಸಿದೆ.

ರಾಜೀನಾಮೆ ನೀಡುವುದಿಲ್ಲ: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೀನಾಮೆ ನೀಡುವ ಸಾಧ್ಯತೆಯನ್ನೂ ಮುಖ್ಯಮಂತ್ರಿ ಇದೇ ಸಂದರ್ಭದಲ್ಲಿ ತಳ್ಳಿ ಹಾಕಿದ್ದಾರೆ. ನಾನು ಆತ್ಮಸಾಕ್ಷಿಯೊಂದಿಗೆ ಕೆಲಸ ಮಾಡುತ್ತೇನೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ನನ್ನ ಆತ್ಮಸಾಕ್ಷಿ ಹೇಳುತ್ತಿದೆ. ಹಾಗಾಗಿ ನಾನು ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದರು.

ಇದಕ್ಕೂ ಮುನ್ನ ಮಾತನಾಡಿದ ರಾಜ್ಯ ಬಿಜೆಪಿ ಮುಖ್ಯಸ್ಥ ಬಿ ವೈ ವಿಜಯೇಂದ್ರ, 2011ರಲ್ಲಿ ಅಂದಿನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧ ಆರೋಪ ಬಂದಾಗ ಸಿದ್ದರಾಮಯ್ಯ ಅವರು ಹೇಳಿದ್ದನ್ನೇ ಮರೆತಂತಿದೆ.

"ನಾನು ಅವರನ್ನು ನೆನಪಿಸಲು ಬಯಸುತ್ತೇನೆ", ಎಂದ ಅವರು ವೀಡಿಯೊ ಕ್ಲಿಪ್ ಪ್ಲೇ ಮಾಡಿದರು. ಯಡಿಯೂರಪ್ಪ ಅವರು ತಮ್ಮ ಮಕ್ಕಳಿಗೆ ಅಕ್ರಮವಾಗಿ ನೀಡಿದ ಸೈಟ್‌ಗಳನ್ನು ಒಪ್ಪಿಸಿದ್ದಾರೆ ಎಂದು ಸಿದ್ದರಾಮಯ್ಯ ಮಾಧ್ಯಮಗಳಿಗೆ ಹೇಳಿಕೆ ನೀಡಿರುವುದು ವಿಡಿಯೋದಲ್ಲಿ ಕೇಳಿಬಂದಿದೆ. ಇದರ ಅರ್ಥವೇನು? ಯಾವುದೇ ತಪ್ಪು ಮಾಡದಿದ್ದರೆ, ಸೈಟ್‌ಗಳನ್ನು ಏಕೆ ಒಪ್ಪಿಸಲಾಯಿತು? ಕಾನೂನು ಬಾಹಿರವಾಗಿ ಮಾಡಿದ್ದರಿಂದ ನಿವೇಶನಗಳನ್ನು ಒಪ್ಪಿಸಲಾಗಿದೆ. ಅವರು ತಪ್ಪನ್ನು ಒಪ್ಪಿಕೊಂಡಿದ್ದಾರೆ... ಎಂದಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಯಡಿಯೂರಪ್ಪ ಅವರ ಪ್ರಕರಣವೇ ಬೇರೆ. ಯಡಿಯೂರಪ್ಪ ಅವರ ಪ್ರಕರಣವು ಜಮೀನು ಡಿನೋಟಿಫಿಕೇಶನ್‌ಗೆ ಸಂಬಂಧಿಸಿದೆ ಆದರೆ ಮುಡಾ ಪ್ರಕರಣದಲ್ಲಿ ನಾನು ಭಾಗಿಯಾಗಿಲ್ಲ. ಈ ಪ್ರಕರಣದಲ್ಲಿ ನನ್ನ ಆದೇಶಗಳಿವೆಯೇ ಅಥವಾ ಪತ್ರಗಳ ವಿನಿಮಯವಿದೆಯೇ (ಮುಡಾದೊಂದಿಗೆ)? ಆ ಪ್ರಕರಣಕ್ಕೂ (ಯಡಿಯೂರಪ್ಪ ಅವರ) ಇದಕ್ಕೂ ಅಗಾಧ ವ್ಯತ್ಯಾಸವಿದೆ ಎಂದು ಹೇಳಿದರು.

ಕಾಂಟ್ರವರ್ಸಿಗೆ ಮನನೊಂದು ನಿವೇಶನ ಹಿಂತಿರುಗಿಸಲು ನಿರ್ಧಾರ: ಮುಡಾ ಸೈಟ್ ಕೇಸಿನಲ್ಲಿ ನನ್ನ ಪಾತ್ರ ಏನೂ ಇಲ್ಲ, ಆದರೂ ಇಷ್ಟೊಂದು ಕಾಂಟ್ರವರ್ಸಿ ಆಗಿದೆ, ಹೀಗಾಗಿ ಮನನೊಂದು ನನ್ನ ಪತ್ನಿ ನಿವೇಶನ ಹಿಂತಿರುಗಿಸುವ ತೀರ್ಮಾನ ಮಾಡಿ ಪತ್ರ ಬರೆದಿದ್ದಾರೆ ಎಂದರು.

ನನ್ನ ಪತ್ನಿ ಸ್ವತಂತ್ರವಾಗಿ ತೀರ್ಮಾನ ತೆಗೆದುಕೊಂಡಿದ್ದು, ನನ್ನ ಜೊತೆ ಚರ್ಚೆ ಮಾಡಿಲ್ಲ, ಮುಡಾದವರಿಗೆ ಪತ್ರ ಕಳುಹಿಸಿದ ನಂತರವೇ ನನಗೆ ಗೊತ್ತಾಗಿದ್ದು. ಅವರ ಅಣ್ಣ ಮಲ್ಲಿಕಾರ್ಜುನ ಸ್ವಾಮಿ 3 ಎಕ್ರೆ 16 ಗುಂಟೆ ಜಮೀನು ನನ್ನ ಪತ್ನಿಗೆ ನೀಡಿದ್ದು, ನಂತರ ಆಕೆ ಮಾಲಿಕಳಾದ್ದಳು. ಮುಡಾದವರು ಜಮೀನು ವಶಪಡಿಸಿಕೊಂಡು ನಿವೇಶನ ಮಾಡಿ ಹಂಚಿದ್ದರು. ಅದಕ್ಕೆ ಬದಲಿ ನಿವೇಶನ ನೀಡಿ ಎಂದು ಕೇಳಿದಾಗ ವಿಜಯನಗರ 3 ಮತ್ತು 4ನೇ ಹಂತದಲ್ಲಿ 14 ಸೈಟ್ ನೀಡಿದರು. ನಾವು ವಿಜಯನಗರದಲ್ಲಿಯೇ ನೀಡಬೇಕೆಂದು ಕೇಳಿರಲಿಲ್ಲ. ನಮಗೆ ಬದಲಿ ನಿವೇಶನ ಕೊಡಿ ಎಂದು ಕೇಳಿದ್ದೆವು ಅಷ್ಟೆ, ಅದೀಗ ದೊಡ್ಡ ವಿವಾದವಾಗಿದೆ ಅಷ್ಟೆ ಎಂದರು.

ಇಷ್ಟೊಂದು ವಿವಾದಗಳಿಂದ, ವಿರೋಧ ಪಕ್ಷಗಳ ಕುತಂತ್ರಗಳಿಗೆ ನನ್ನ ಪತ್ನಿ ಬಲಿಯಾಗಿದ್ದಾಳೆ ಅಷ್ಟೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT