ಬೆಂಗಳೂರು: ಏರೋ ಇಂಡಿಯಾದ 15ನೇ ಆವೃತ್ತಿ ಬೆಂಗಳೂರು ಏರ್ಶೋಗೆ ದಿನಾಂಕ ನಿಗದಿ ಮಾಡಿದೆ. ಕೇಂದ್ರ ರಕ್ಷಣಾ ಸಚಿವಾಲಯವು ಅಧಿಕೃತವಾಗಿ ದಿನಾಂಕ ಪ್ರಕಟಿಸಿದೆ.
ಮುಂದಿನ ವರ್ಷ ಅಂದರೆ 2025ರ ಫೆಬ್ರವರಿ 10ರಿಂದ 14ರವರೆಗೆ ಯಲಹಂಕದ ಏರ್ ಫೋರ್ಸ್ ಸ್ಟೇಷನ್ ನಲ್ಲಿ ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ ಪ್ರದರ್ಶನ ನಡೆಯಲಿದೆ.
ರಕ್ಷಣಾ ಇಲಾಖೆ, ಭಾರತೀಯ ವಾಯು ಸೇನೆ, ಹೆಚ್.ಎ.ಎಲ್, ಡಿ.ಆರ್.ಡಿ.ಒ., ನಾಗರಿಕ ವಿಮಾನಯಾನ ಸಚಿವಾಲಯಗಳು ಜಂಟಿಯಾಗಿ ಆಯೋಜಿಸುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ದೇಶ ವಿದೇಶಗಳ ವೈಮಾನಿಕ ಕ್ಷೇತ್ರದ ನೂರಾರು ಕಂಪನಿಗಳು ಭಾಗವಹಿಸಲಿವೆ.
ಯುದ್ಧವಿಮಾನ, ಹೆಲಿಕಾಪ್ಟರ್, ನಾಗರೀಕ ವಿಮಾನ, ಸಣ್ಣ ವಿಮಾನಗಳು, ಕ್ಷಿಪಣಿಗಳು, ಶಸ್ತ್ರಾಸ್ತ್ರಗಳು, ರಾಡಾರ್ ವ್ಯವಸ್ಥೆ ಸೇರಿದಂತೆ ರಕ್ಷಣಾ ವಲಯ ಮತ್ತು ನಾಗರೀಕ ವಿಮಾನಯಾನಕ್ಕೆ ಸಂಬಂಧಿಸಿದ ಉತ್ಪನ್ನಗಳು, ಬಿಡಿ ಭಾಗಗಳು, ಮಾಹಿತಿ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಉತ್ಪನ್ನಗಳು ಪ್ರದರ್ಶನದಲ್ಲಿರುತ್ತವೆ.
ಏರೋ ಇಂಡಿಯಾ ಕಾರ್ಯಕ್ರಮದ ವೇಳೆ ಭಾರತೀಯ ಏರೋಸ್ಪೇಸ್ ಉದ್ಯಮದ ಹಲವಾರು ತಯಾರಕರು ಮತ್ತು ಸೇವಾ ಪೂರೈಕೆದಾರರು ಭವಿಷ್ಯದ ಗ್ರಾಹಕರನ್ನು ಭೇಟಿ ಮಾಡುತ್ತಾರೆ. ಏರೋಸ್ಪೇಸ್ ಉದ್ಯಮ ಬೆಳೆವಣಿಗೆಗೆ ಈ ಏರೋ ಇಂಡಿಯಾ ಪ್ರದರ್ಶನ ಉತ್ತಮ ವೇದಿಕೆಯೂ ಆಗಿದೆ.
ಯುದ್ಧ ವಿಮಾನಗಳ ಮೈನವಿರೇಳಿಸುವ ಹಲವು ವೈಶಿಷ್ಟ್ಯಗಳೊಂದಿಗೆ ಏರ್ ಶೋ ನಡೆಯಲಿದ್ದು, ಬಾನಂಗಳಲ್ಲಿ ಬಣ್ಣದ ಹಕ್ಕಿಗಳ ಚಿತ್ತಾರ, ಅದ್ಬುತ ದೃಶ್ಯದ ವೈಮಾನಿಕ ಪ್ರದರ್ಶನ ನೋಡಬಹುದಾಗಿದೆ. 2023 ರಲ್ಲಿ ನಡೆದ ವೈಮಾನಿಕ ಪ್ರದರ್ಶನದ 14 ನೇ ಆವೃತ್ತಿಯಲ್ಲಿ 6 ಲಕ್ಷಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು.