ಬೆಂಗಳೂರು: ನಗರದ ಜಾಲಹಳ್ಳಿಯಲ್ಲಿರುವ ಎಚ್‌ಎಂಟಿ ಘಟಕದ ಪುನಶ್ಚೇತನಕ್ಕೆ ಪ್ರಯತ್ನ ನಡೆಸಲಾಗುತ್ತಿದೆ ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು ಶನಿವಾರ ಹೇಳಿದರು.
ನಗರದ ಜಾಲಹಳ್ಳಿಯ ಎಚ್‌ಎಂಟಿ ಟೂಲ್ಸ್ ಮತ್ತು ಮೆಷಿನ್ಸ್ ಘಟಕಕ್ಕೆ ಭೇಟಿ ನೀಡಿದ್ದ ಕುಮಾರಸ್ವಾಮಿಯವರು ಭೇಟಿ ನೀಡಿದ್ದು, ಈ ವೇಳೆ ಕಾರ್ಮಿಕರ ಜೊತೆಗೆ ಕೆಲಕಾಲ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ರೋಬೊಗಳ ಮೂಲಕವೇ ಹೂಗುಚ್ಛ ನೀಡುವ ಮೂಲಕ ಕುಮಾರಸ್ವಾಮಿ ಅವರನ್ನು ಸ್ವಾಗತಿಸಲಾಯಿತು.
ಮೈಸೂರು ಅರಸರು ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಅವರ ದೂರದೃಷ್ಟಿಯಿಂದ ಎಚ್‌ಎಂಟಿ ಕಾರ್ಖಾನೆ ಸ್ಥಾಪನೆಯಾಗಿದೆ. ದೆಹಲಿಯಲ್ಲಿರುವ ಸಚಿವಾಲಯದ ಕಚೇರಿಯಲ್ಲಿ ಈ ಕಾರ್ಖಾನೆಯ ಪುನಶ್ಚೇತನ ಬಗ್ಗೆ ಹಲವು ಸಭೆಗಳು ನಡೆದಿದ್ದು, ಎಲ್ಲ ಸಾಧಕ-ಭಾದಕಗಳ ಬಗ್ಗೆ ಸಮಾಲೋಚನೆ ನಡೆದಿದೆ.
ಕಾರ್ಖಾನೆ ಉಳಿಸುವ ವಿಚಾರದಲ್ಲಿ ನಾನು ರಾಜಿ ಆಗಲ್ಲ, ಅದಕ್ಕೆ ಅಗತ್ಯ ಸಲಹೆ ಪಡೆಯಲು ಒಂದು ಸಲಹಾ ಸಂಸ್ಥೆಯನ್ನು ನೇಮಕ ಮಾಡಿಕೊಳ್ಳುವ ಬಗ್ಗೆ ಚಿಂತನೆ ಮಾಡಲಾಗಿದೆ. ನೀತಿ ಆಯೋಗದ ಜತೆಯೂ ಸಮಾಲೋಚನೆ ನಡೆಸುತ್ತಿದ್ದೇನೆ. ಒಳ್ಳೆಯ ದಿನ ಬರಬಹುದು. ಆಶವಾದಿಗಳಾಗಿ ಇರಿ ಎಂದು ಕಾರ್ಮಿಕರಿಗೆ ಭರವಸೆ ನೀಡಿದರು.
ವಿಶಾಖಪಟ್ಟಣದಲ್ಲಿರುವ ಆರ್‌ಐಎನ್‌ಎಲ್ ಸ್ಟೀಲ್ ಪ್ಲಾಂಟ್‌ಗೂ ಈ ಹಿಂದೆ ಭೇಟಿ ನೀಡಿದ್ದೆ, ಅಲ್ಲಿನ ಅಭಿವೃದ್ಧಿ ಕುರಿತು ಚರ್ಚಿಸಲು 20 ಸಭೆಗಳನ್ನು ನಡೆಸಿದ್ದೇನೆ. ಅಲ್ಲಿನ ಕಾರ್ಖಾನೆ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾಗಿರುವುದು ನನ್ನ ಗಮನಕ್ಕೆ ಬಂದಿತ್ತು. ತಕ್ಷಣ ಅವರನ್ನು ಮರುಸೇರ್ಪಡೆಗೊಳಿಸಲಾಗುವುದನ್ನು ಖಚಿತಪಡಿಸಿದೆ ಎಂದು ಹೇಳಿದರು.
ಇದೇ ವೇಳೆ ಕುಮಾರಸ್ವಾಮಿಯವರು ಕಾರ್ಖಾನೆಯ ಎಚ್‌ಎಂಟಿ ಉಪಕರಣಗಳು ಮತ್ತು ಯಂತ್ರೋಪಕರಣಗಳ ವಿಭಾಗದ ಕಾರ್ಯಾಚರಣೆಯನ್ನು ಪರಿಶೀಲಿಸಿದರು ಮತ್ತು ಮೇಲ್ವಿಚಾರಣೆ ಮಾಡಿದರು.