ಬೆಂಗಳೂರು: ಹುಬ್ಬಳ್ಳಿಯಲ್ಲಿ 2022ರ ಏಪ್ರಿಲ್ 16ರಂದು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಗುಂಪೊಂದರ ವಿರುದ್ಧ ದಾಖಲಿಸಲಾಗಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ಹಿಂಪಡೆಯಲು ಕರ್ನಾಟಕದ ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ.
ಈ ಸಂಬಂಧ ಅಂಜುಮನ್-ಎ-ಇಸ್ಲಾಂ ಗೃಹ ಸಚಿವ ಜಿ ಪರಮೇಶ್ವರ ಅವರಿಗೆ ಮನವಿ ಸಲ್ಲಿಸಿತ್ತು. ಬಳಿಕ ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಹಿಂಪಡೆಯಲು ನಿರ್ಧರಿಸಿದ 43 ಪ್ರಕರಣಗಳಲ್ಲಿ ಇದೂ ಒಂದು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಾಮಾಜಿಕ ಮಾಧ್ಯಮದಲ್ಲಿ ಆರೋಪಿಯೊಬ್ಬ ಮಾಡಿದ್ದ ಅವಹೇಳನಕಾರಿ ಪೋಸ್ಟ್ ನಿಂದ ಅಸಮಾಧಾನಗೊಂಡ ಅಲ್ಪಸಂಖ್ಯಾತ ಸಮುದಾಯದ ಸುಮಾರು 150 ಜನರು ಕಲ್ಲು ಮತ್ತು ದೊಣ್ಣೆಗಳೊಂದಿಗೆ ಹಳೆ ಹುಬ್ಬಳ್ಳಿ ಟೌನ್ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಬಯಸಿತ್ತು. ಬಳಿಕ ಉದ್ರಿಕ್ತ ಗುಂಪು ಕಲ್ಲು ತೂರಾಟ ನಡೆಸಿದ್ದರಿಂದ ಕರ್ತವ್ಯದಲ್ಲಿದ್ದ ಹಲವರು ಗಾಯಗೊಂಡಿದ್ದರು. ಅಲ್ಲಿದ್ದ ಹಲವಾರು ಸರ್ಕಾರಿ ಮತ್ತು ಖಾಸಗಿ ವಾಹನಗಳು ಜಖಂಗೊಂಡಿದ್ದವು.
ಅದರಂತೆ, ಹಳೇ ಹುಬ್ಬಳ್ಳಿ ಟೌನ್ ಪೊಲೀಸರು ಆರೋಪಿಗಳ ವಿರುದ್ಧ ಗಲಭೆ, ಕೊಲೆ ಯತ್ನ, ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ, ಸರ್ಕಾರಿ ಮತ್ತು ಸಾರ್ವಜನಿಕ ಆಸ್ತಿಗಳಿಗೆ ಹಾನಿ ಮತ್ತು ಕಾನೂನುಬಾಹಿರ ಚಟುವಟಿಕೆ (ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿ ಹೇಳಿದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸರ್ಕಾರದ ನಿರ್ಧಾರವನ್ನು ತುಷ್ಟೀಕರಣದ ಪರಮಾವಧಿ ಎಂದು ಬಣ್ಣಿಸಿದ್ದಾರೆ. ಪ್ರಕರಣವು ಎನ್‌ಐಎ ನ್ಯಾಯಾಲಯದ ಮುಂದಿರುವಾಗ ಅವರು ಯುಎಪಿಎ ಪ್ರಕರಣದ ಅಡಿಯಲ್ಲಿ ಪ್ರಕರಣವನ್ನು ಹಿಂಪಡೆದಿದ್ದು, ಕಾಂಗ್ರೆಸ್ ಭಯೋತ್ಪಾದಕರ ಪರ ಎಂದು ಟೀಕಿಸಿದ್ದಾರೆ.