ಬೆಂಗಳೂರು: ಬೆಂಗಳೂರು ನಿವಾಸಿಗಳ ಬಹುದಿನಗಳ ಬೇಡಿಕೆ ಕೊನೆಗೂ ಈಡೇರುತ್ತಿದ್ದು, ನಗರಕ್ಕೆ ಕುಡಿಯುವ ನೀರು ಒದಗಿಸುವ ಕಾವೇರಿ 5ನೇ ಹಂತದ ಯೋಜನೆಗೆ ಈ ತಿಂಗಳ 16 ರಂದು ಚಾಲನೆ ನೀಡಲಾಗುತ್ತಿದೆ.
ಬೆಂಗಳೂರಿನಲ್ಲಿಂದು ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, 'ಬೆಂಗಳೂರು ನಗರ ಕುಡಿಯುವ ನೀರಿನ ಯೋಜನೆ ಕಾವೇರಿ 5ನೇ ಹಂತಕ್ಕೆ ಇದೇ ಅಕ್ಟೋಬರ್ 16ರಂದು ಚಾಲನೆ ನೀಡಲಾಗುತ್ತದೆ. ಕಾವೇರಿ 5ನೇ ಹಂತದ ಕುಡಿಯುವ ನೀರಿನ ಯೋಜನೆಯಿಂದ ಬೆಂಗಳೂರಿನ 50 ಲಕ್ಷ ನಾಗರೀಕರಿಗೆ ಅನುಕೂಲವಾಗಲಿದೆ.
ಮನೆ ಮನೆಗೂ ಕಾವೇರಿ ನೀರು ತಲುಪಲಿದೆ. ಎಲ್ಲ ಅಡೆತಡೆಗಳನ್ನು ನಿವಾರಿಸಿಕೊಂಡು ಇದೇ ತಿಂಗಳ 16 ರಂದು ತೊರೇಕಾಡನ ಹಳ್ಳಿಯಲ್ಲಿ ಕಾವೇರಿ 5ನೇ ಹಂತದ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಲಾಗುತ್ತಿದೆ ಎಂದು ಹೇಳಿದರು.
ಮೈಸೂರು ದೀಪಾಲಂಕಾರ ಅವಧಿ ವಿಸ್ತರಣೆ
ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆಯಾಗಿದೆ. ಮೈಸೂರು ಸೇರಿದಂತೆ ನಾಡಿನ ವಿವಿಧ ಭಾಗಗಳಲ್ಲಿ ಸಂಭ್ರಮದಿಂದ ದಸರಾ ಆಚರಣೆ ಮಾಡಲಾಗುತ್ತಿದೆ. ಮಡಿಕೇರಿಯಲ್ಲೂ ಮೈಸೂರಿನಷ್ಟೇ ಅದ್ಧೂರಿಯಾಗಿ ದಸರಾ ಮಾಡಿದ್ದಾರೆ. ನಿನ್ನೆ ಅಲ್ಲಿಗೆ ಭೇಟಿ ನೀಡಿದ್ದೆ. ಮೈಸೂರು ದಸರಾಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನ ವಿದ್ಯುತ್ ದೀಪಾಲಂಕಾರವನ್ನು ಇನ್ನು 10-12 ದಿನಗಳವರೆಗೂ ವಿಸ್ತರಣೆ ಮಾಡಲಾಗಿದೆ ಎಂದರು.
ಇದೇ ವೇಳೆ, 'ದುಷ್ಟ ಶಕ್ತಿಯ ಎದುರು ಸತ್ಯದ ಜಯ' ಎಂಬ ಸರ್ಕಾರಿ ಜಾಹೀರಾತಿಗೆ ಬಿಜೆಪಿ ಮತ್ತು ಜೆಡಿಎಸ್ ಟೀಕೆ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ನಮಗೆ ಬಂದಿರುವ ಮಾಹಿತಿಯನ್ನು ನಮ್ಮದೇ ಆದ ಭಾವನೆ ಮೂಲಕ ಜನರಿಗೆ ತಿಳಿಸಿದ್ದೇವೆ. ಉಳಿದ ವಿಚಾರವನ್ನು ವಿಧಾನಸಭೆಯಲ್ಲಿ ಚರ್ಚೆ ಮಾಡೋಣ ಎಂದು ಹೇಳಿದರು. ಅಂತೆಯೇ ರಾಜ್ಯಕ್ಕೆ ತೆರಿಗೆ ಪಾಲು ಹಂಚಿಕೆಯಲ್ಲಿ ಅನ್ಯಾಯವಾಗುತ್ತಿದ್ದು, ಇದರ ವಿರುದ್ಧ ಹೋರಾಟ ನಡೆಸಲಾಗುವುದು ಎಂದರು.
ನಮ್ಮ ತೆರಿಗೆ-ನಮ್ಮ ಹಕ್ಕು
ಉತ್ತರ ಪ್ರದೇಶ, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಂದ ಕೇಂದ್ರಕ್ಕೆ ಕಡಿಮೆ ತೆರಿಗೆ ಹೋಗುತ್ತದೆ. ರಾಜ್ಯದಿಂದ ಕೇಂದ್ರಕ್ಕೆ ಹೆಚ್ಚಿನ ತೆರಿಗೆ ಹೋದರೂ ನಮಗೆ ಕಡಿಮೆ ಪಾಲು ಸಿಗುತ್ತಿದೆ. ಇದರ ವಿರುದ್ಧ ಮುಂದಿನ ದಿನಗಳಲ್ಲಿ ನಮ್ಮ ತೆರಿಗೆ ನಮ್ಮ ಹಕ್ಕು ಹೋರಾಟವನ್ನು ನಡೆಸುತ್ತೇವೆ. ವಿತ್ತ ಸಚಿವೆ ನಿರ್ಮಲಾ ಸೀತಾರಾiನ್ ರಾಜ್ಯದಿಂದ ಆಯ್ಕೆಯಾಗಿದ್ದರೂ ರಾಜ್ಯಕ್ಕೆ ಅನ್ಯಾಯವಾಗುತ್ತಿರುವುದ ಆಘಾತಕಾರಿ. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಸಚಿವರುಗಳು, ಬಿಜೆಪಿ ಸಂಸದರು ದನಿ ಎತ್ತದಿರುವ ಬಗ್ಗೆ ಅಸಮಾಧಾನ ಹೊರ ಹಾಕಿದರು.