ಸಿಎಂ ಸಿದ್ದರಾಮಯ್ಯ 
ರಾಜ್ಯ

ರಾಜ್ಯದ ಜನತೆಯ ಆಶೀರ್ವಾದ ನನ್ನ ಮೇಲಿರುವವರೆಗೂ ರಾಜೀನಾಮೆ ಕೊಡಲ್ಲ: ಸಿಎಂ ಸಿದ್ದರಾಮಯ್ಯ

ಬಡವರು ಹಾಗೂ ರೈತಾಪಿ ವರ್ಗದವರು ಹೆಚ್ಚು ಭೇಟಿ ನೀಡುವ ಸವದತ್ತಿಯ ಶ್ರೀರೇಣುಕಾ ಯಲ್ಲಮ್ಮ ದೇವಸ್ಥಾನ ಕ್ಷೇತ್ರದಲ್ಲಿ ಗುಣಮಟ್ಟದ ಮೂಲಸೌಕರ್ಯಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ.

ಬೆಳಗಾವಿ: ರಾಜ್ಯದ ಜನತೆಯ ಆಶೀರ್ವಾದ ನನ್ನ ಮೇಲಿರುವವರೆಗೂ ರಾಜೀನಾಮೆ ನೀಡುವುದಿಲ್ಲ. ಮುಂದಿನ ಮೂರೂವರೆ ವರ್ಷಗಳ ಕಾಲ ನಮ್ಮ ಸರ್ಕಾರ ರಾಜ್ಯದಲ್ಲಿ ಅಧಿಕಾರ ನಡೆಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಹೇಳಿದರು.

ಬೆಳಗಾವಿಯ ಸವದತ್ತಿಯ ಯಲ್ಲಮ್ಮ ದೇವಸ್ಥಾನದ 31.75 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ ಸಿದ್ದರಾಮಯ್ಯ ಅವರು, ಸಭೆಯನ್ನುದ್ದೇಶಿಸಿ ಮಾತನಾಡಿದರು.

ಬಡವರು ಹಾಗೂ ರೈತಾಪಿ ವರ್ಗದವರು ಹೆಚ್ಚು ಭೇಟಿ ನೀಡುವ ಸವದತ್ತಿಯ ಶ್ರೀರೇಣುಕಾ ಯಲ್ಲಮ್ಮ ದೇವಸ್ಥಾನ ಕ್ಷೇತ್ರದಲ್ಲಿ ಗುಣಮಟ್ಟದ ಮೂಲಸೌಕರ್ಯಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ. ಪ್ರವಾಸೋದ್ಯಮ ಮಂಡಳಿ ಹಾಗೂ ಶ್ರೀರೇಣುಕಾ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಸಭೆ ನಡೆಸಲಾಗಿದೆ. ಈ ಕ್ಷೇತ್ರಕ್ಕೆ ಸುಮಾರು ಎರಡು ಕೋಟಿ ಭಕ್ತಾದಿಗಳು ವರ್ಷಕ್ಕೆ ಭೇಟಿ ನೀಡುತ್ತಿದ್ದು, ಪ್ರವಾಸಿಗರ ಅನುಕೂಲಕ್ಕಾಗಿ ಕುಡಿಯುವ ನೀರು, ಶೌಚಾಲಯ, ಪಾರ್ಕಿಂಗ್, ತಂಗುದಾಣದ ವ್ಯವಸ್ಥೆಯನ್ನು ಮಾಡಬೇಕಾಗಿದೆ.

ಬಡವರು ಹಾಗೂ ರೈತಾಪಿ ವರ್ಗದವರು ಹೆಚ್ಚು ಭೇಟಿ ನೀಡುವ ಈ ಕ್ಷೇತ್ರದಲ್ಲಿ ಗುಣಮಟ್ಟದ ಮೂಲಸೌಕರ್ಯಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ. ಕ್ಷೇತ್ರದಲ್ಲಿ 1,087ಎಕರೆ ಪ್ರದೇಶ ಲಭ್ಯವಿದ್ದು, ಮೂಲಸೌಕರ್ಯ ವ್ಯವಸ್ಥೆ ಕಲ್ಪಿಸುವ ಉದ್ದೇಶಕ್ಕೆ ಈ ಪ್ರದೇಶವನ್ನು ಬಳಸಿಕೊಳ್ಳಲಾಗುವುದು.ಭ ಕ್ತಾದಿಗಳಿಗೆ ದಾಸೋಹ ವ್ಯವಸ್ಥೆಯಿರುವಂತೆ ರಾಸುಗಳಿಗೂ ಮೇವು ಒದಗಿಸುವ ವ್ಯವಸ್ಥೆಯನ್ನು ಕಲ್ಪಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಇದೇ ವೇಳೆ ಬಿಜೆಪಿ ವಿರುದ್ಧ ಕಿಡಿಕಾರಿದ ಸಿಎಂ, ಮುಂದಿನ ವರ್ಷದ ವೇಳೆಗೆ 6 ಸಾವಿರ ಭಕ್ತರು ಉಳಿಯಲು ರೇಣುಕಾ ಯಲ್ಲಮ್ಮ ಸನ್ನಿಧಿಯಲ್ಲಿ ವ್ಯವಸ್ಥೆ ರೂಪಿಸಲಾಗುತ್ತದೆ. ಶಕ್ತಿ ಯೋಜನೆಯಿಂದಾಗಿ ಇದುವರೆಗೂ ರಾಜ್ಯದಲ್ಲಿ ಮಹಿಳೆಯರು 300 ಕೋಟಿ ಉಚಿತ ಟ್ರಿಪ್ ಮಾಡಿದ್ದಾರೆ. ಇವರಲ್ಲಿ ಲಕ್ಷಾಂತರ ಮಂದಿ ತಾಯಿ ರೇಣುಕಾ ಯಲ್ಲಮ್ಮನ ದರ್ಶನ ಕೂಡ ಪಡೆದಿದ್ದಾರೆ. ದೇವರು-ಧರ್ಮ ತಮಗೆ ಮಾತ್ರ ಸೇರಿದ್ದು ಎಂದು ಬಿಜೆಪಿಯವರು ಭಯಂಕರ ಮಾತನಾಡ್ತಾರಲ್ಲಾ, ಆದರೆ, ಇದುವರೆಗೂ ದೇವಿಯ ಭಕ್ತರಿಗೆ ನಾವು ಮಾಡಿದಂಥಾ ಕಾರ್ಯಕ್ರಮವನ್ನು ಬಿಜೆಪಿಯವರು ಏಕೆ ಮಾಡಲಿಲ್ಲ? ದೇವರು-ಧರ್ಮದ ಹೆಸರಲ್ಲಿ ದೇಶವನ್ನು - ರಾಜ್ಯವನ್ನು ಒಡೆಯುವ ಬಿಜೆಪಿಯನ್ನು ಮೊದಲು ದೂರ ಇಡಿ. ಇಲ್ಲದಿದ್ದರೆ ನಮ್ಮ ನಾಡೂ ಉಳಿಯಲ್ಲ, ದೇಶವೂ ಉಳಿಯಲ್ಲ.

ತಾಯಿ ಯಲ್ಲಮ್ಮ ಶಕ್ತಿ ದೇವತೆ. ಯಾವ ದೇವರೂ ಕೂಡ ಮನುಷ್ಯರನ್ನು ಧರ್ಮದ ಕಾರಣಕ್ಕೆ ದ್ವೇಷಿಸಿ ಎಂದು ಹೇಳುವುದಿಲ್ಲ. ದೇವರ ಹೆಸರಲ್ಲಿ ದ್ವೇಷ ಮಾಡಿ ಎಂದು ಹೇಳುವುದು ಬಿಜೆಪಿ ಮಾತ್ರ. ತಾಯಿ ರೇಣುಕಾ ಯಲ್ಲಮ್ಮ ಯಾವ ಮನುಷ್ಯರನ್ನು ದ್ವೇಷಿಸಿ ಎಂದು ಹೇಳುವುದಿಲ್ಲ ತಾನೆ? ಗೃಹಲಕ್ಷ್ಮಿ ಯೋಜನೆ ಜಾರಿಯಾದರೆ ಅತ್ತೆ ಸೊಸೆ ಜಗಳ ಆಗ್ತದೆ ಎಂದು ಬಿಜೆಪಿಯವರು ಬೊಬ್ಬೆ ಹೊಡೆದರು. ಆದರೆ, ಗೃಹಲಕ್ಷ್ಮಿ ಹಣವನ್ನು ಕೂಡಿಸಿಟ್ಟು ಅತ್ತೆಯರು ಸೊಸೆಯರಿಗೆ ಬಳೆ ಅಂಗಡಿ ಹಾಕಿಕೊಟ್ಟಿದ್ದಾರೆ, ಟೈಲರಿಂಗ್ ಮೆಷಿನ್ ಕೊಡಿಸಿದ್ದಾರೆ. ಇಂಥವು ನೂರಾರು ಉದಾಹರಣೆಗಳಿವೆ. ತಾಯಿ ರೇಣುಕಾ ಯಲ್ಲಮ್ಮ ಕ್ಷೇತ್ರದ ಅಭಿವೃದ್ಧಿಗೆ ನಾವು ರೆಡಿ. ನಿಮ್ಮ ಸಹಕಾರ ಅಗತ್ಯ. ಕ್ಷೇತ್ರದಲ್ಲಿ ಅನಧಿಕೃತವಾಗಿ ಮಳಿಗೆಗಳನ್ನು ಹಾಕಬೇಡಿ. ಅನಧಿಕೃತವಾಗಿ ಇರುವವರಿಗೆ ಬೇರೆ ವ್ಯವಸ್ಥೆ ಮಾಡೋಣ. ಆದರೆ ಅಕ್ರಮವಾಗಿ ಯಾರೂ ಮಳಿಗೆ ಹಾಕದೆ ಸಹಕರಿಸಿ ಎಂದು ಮನವಿ ಮಾಡುತ್ತೇನೆಂದು ಹೇಳಿದರು.

ಇದೇ ವೇಳೆ ಅಧಿಕಾರಿಗಳಿಗೆ ಸೂಚನೆ ನೀಡಿದ ಸಿಎಂ, ಯಲ್ಲಮ್ಮ ದೇವಿ ಸನ್ನಿದಿಗೆ ಬರುವ ಭಕ್ತರೆಲ್ಲರಿಗೂ ತಾಯಿಯ ದರ್ಶನ ಕಡ್ಡಾಯವಾಗಿ ಸಿಗುವ ವ್ಯವಸ್ಥೆಯನ್ನು ಪ್ರಥಮ ಆಧ್ಯತೆಯಲ್ಲಿ ಒದಗಿಸಬೇಕು. ಭಕ್ತಾದಿಗಳ ಆರೋಗ್ಯಕ್ಕೆ ಪೂರಕವಾದ ವ್ಯವಸ್ಥೆಗಳನ್ನು ಕಲ್ಪಿಸಬೇಕು. ಶೌಚಾಲಯ, ಕುಡಿಯುವ ನೀರು, ವಿದ್ಯುತ್, ಉಳಿಯಲು ಅಚ್ಚುಕಟ್ಟಾದ ವ್ಯವಸ್ಥೆಯನ್ನು ಕಲ್ಪಿಸಬೇಕು. ತಿರುಪತಿ ಮಾದರಿಯಲ್ಲಿ ವ್ಯವಸ್ಥೆಗಳನ್ನು ಕಲ್ಪಿಸಬೇಕು. ಸಮರ್ಪಕ ವ್ಯವಸ್ಥೆ ಕಲ್ಪಿಸಿ ದೇವಿಯ ದರ್ಶನದ ಖಾತ್ರಿ ಆದರೆ ಭಕ್ತರು ಮತ್ತು ಪ್ರವಾಸಿಗರ ಪ್ರಮಾಣ ಇನ್ನೂ ಹೆಚ್ಚಾಗುತ್ತದೆ. ಆದ್ದರಿಂದ ಸಮರ್ಪಕ ವ್ಯವಸ್ಥೆ ಕಲ್ಪಿಸಬೇಕು.

ಬಡವರು, ಶ್ರಮಿಕರು, ತಳ ಸಮುದಾಯದವರು, ಮಹಿಳೆಯರು ಮತ್ತು ದುಡಿಯುವ ವರ್ಗದವರೇ ಹೆಚ್ಚಾಗಿ ಬರುವ ಕ್ಷೇತ್ರ ಇದು. ಸೌಕರ್ಯ ಅಚ್ಚುಕಟ್ಟಾಗಿದ್ದರೆ ಕ್ಷೇತ್ರದ ಆದಾಯವೂ ಹೆಚ್ಚಾಗುತ್ತದೆ. ಈ ಆದಾಯದಿಂದ ಭಕ್ತರಿಗೆ ಇನ್ನೂ ಹೆಚ್ಚಿನ ಮೂಲಭೂತ ಸವಲತ್ತು ಒದಗಿಸಬಹುದು. ಒಟ್ಟಾರೆ ಕ್ಷೇತ್ರ ಆಕರ್ಷಣೀಯವಾಗಿರಬೇಕು. ಎತ್ತಿನಗಾಡಿಯಲ್ಲಿ ಅತಿ ಹೆಚ್ಚು ಪ್ರಮಾಣದ ಭಕ್ತರು ಆಗಮಿಸುವುದರಿಂದ ಕಾರು, ಬೈಕುಗಳ ಜೊತೆಗೆ ಎತ್ತಿನಗಾಡಿ ನಿಲ್ಲಿಸಲು ವ್ಯವಸ್ಥೆ ಕಲ್ಪಿಸಬೇಕು. ಎತ್ತು, ಹಸುಗಳಿಗೆ ಉತ್ತಮ ಮೇವು-ನೀರು-ನೆರಳಿನ ವ್ಯವಸ್ಥೆ ಕಲ್ಪಿಸಬೇಕು. ಇದಕ್ಕೆ ಪೂರಕವಾಗಿ ಕಾರ್ಯಯೋಜನೆ ರೂಪಿಸಬೇಕು. ಪ್ರತೀ ವರ್ಷ 1.5 ರಿಂದ 2 ಕೋಟಿ ಭಕ್ತರು ಬರುವುದರಿಂದ ಆರೋಗ್ಯಕರ ದಾಸೋಹ ವ್ಯವಸ್ಥೆ ಮತ್ತು ವೈಜ್ಞಾನಿಕ ಪದ್ಧತಿಯ ಕಸ ವಿಲೇವಾರಿ ವ್ಯವಸ್ಥೆಯನ್ನು ರೂಪಿಸಬೇಕು.

ಕ್ಷೇತ್ರಕ್ಕೆ ಸೇರಿದ ಜಾಗ, ಜಮೀನನ್ನು ಮೊದಲು ಗುರುತಿಸಿ, ಒತ್ತುವರಿ ಆಗಿದ್ದರೆ ಬಿಡಿಸಿಕೊಳ್ಳಬೇಕು. ಸ್ಥಳದ ಸುತ್ತ ಕಾಂಪೌಂಡ್, ಫೆನ್ಸಿಂಗ್ ಹಾಕಿ ಜಾಗದ ಭದ್ರತೆ ಮಾಡಿಕೊಳ್ಳಬೇಕು. ಭಕ್ತರು ಬರುವ ದೇವಸ್ಥಾನದ ಮಾರ್ಗ ಮತ್ತು ಸುತ್ತಲ ಪ್ರದೇಶಗಳಲ್ಲಿ ಹಾಗೂ ಭಕ್ತರು ಉಳಿಯುವ ಜಾಗದಲ್ಲಿ ಬೀದಿ ದೀಪ, ವಿದ್ಯುತ್ ಸೌಲಭ್ಯ ಒದಗಿಸಬೇಕು. ರೋಪ್ ವೇ ಸವಲತ್ತು ಕಲ್ಪಿಸುವುದರಿಂದ ಅನುಕೂಲ ಆಗುತ್ತದೆಯೇ ಎನ್ನುವ ಬಗ್ಗೆ ಪರಿಶೀಲನೆ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.

ಈ ವೇಳೆ ಉಪಸ್ಥಿತರಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಮಾಜ ಕಲ್ಯಾಣ ಯೋಜನೆಗಳ ನೆರವಿನಿಂದ ಜನಸೇವೆಗೆ ಒತ್ತು ನೀಡಿದೆ. ಬಿಜೆಪಿಯವರು ಧರ್ಮ ರಾಜಕಾರಣ ಮಾಡುತ್ತಿದ್ದಾರೆ, ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ಲಕ್ಷಿಸಿದ್ದಾರೆ ಎಂದು ಟೀಕಿಸಿದರು.

ಶಾಸಕ ವಿಶ್ವಾಸ ವೈದ್ಯ ಮಾತನಾಡಿ, ಯಲ್ಲಮ್ಮ ದೇವಸ್ಥಾನಕ್ಕೆ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿರುವ ಸಿಎಂ ಅವರ ಭಕ್ತಿಗೆ ಶ್ಲಾಘನೆ ವ್ಯಕ್ತಪಡಿಸಿದರು.

ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ 68 ಕೋಟಿ ಅಭಿವೃದ್ಧಿ ಕಾಮಗಾರಿಗೆ ಈಗಾಗಲೇ 165 ಕೋಟಿ ಅನುದಾನ ಮಂಜೂರು ಮಾಡಿದ್ದು, ಮುಂದಿನ ವರ್ಷದೊಳಗೆ 3,000 ಭಕ್ತರಿಗೆ ಮಹಾಪ್ರಸಾದ ವಿತರಿಸಲು ಸಭಾಂಗಣವನ್ನು ನಿರ್ಮಿಸುವ ಯೋಜನೆಗಳೂ ಕೂಡ ಇದೆ ಎಂದರು.

ಕಾರ್ಯಕ್ರಮದಲ್ಲಿ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿದರು.

ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್, ಪ್ರವಾಸೋದ್ಯಮ ಸಚಿವ ಹೆಚ್'ಕೆ. ಪಾಟೀಲ್, ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ, ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಕ್ಷೇತ್ರದ ಶಾಸಕರಾದ ವಿಶ್ವಾಸ್ ವೈದ್ಯ ಮತ್ತು ಜಿಲ್ಲೆಯ ಶಾಸಕರುಗಳು ಮತ್ತು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ನಾಯಕತ್ವ ಬದಲಾವಣೆ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ ನೆರವೇರಿಸಿದ್ದು ಹೇಗೆ?: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ; ಈ ಅದ್ಭುತ Video ನೋಡಿ..

SCROLL FOR NEXT