ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತಹಶೀಲ್ದಾರ್ ಜಿ. ಬಿ. ಜಕ್ಕನಗೌಡರ್ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರದ ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಲಾಡ್ಜ್‌ನಲ್ಲಿ ಶವ ಪತ್ತೆಯಾಗಿದೆ.
ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ವೈಭವ್ ಲಾಡ್ಜ್‌ನ ಕೊಠಡಿಯಲ್ಲಿ ಬುಧವಾರ ರಾತ್ರಿ ಮೃತದೇಹ ಪತ್ತೆಯಾಗಿದೆ. ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ನ್ಯಾಯಾಲಯದ ಕೆಲಸ ನಿಮಿತ್ತ ಬೆಂಗಳೂರಿಗೆ ಬಂದಿದ್ದ ಅವರು ವೈಭವ್ ಲಾಡ್ಜ್‌ನಲ್ಲಿ ಉಳಿದಿದ್ದರು. ಮಂಗಳವಾರ ಸಂಜೆಯಿಂದಲೂ ಯಾರ ಸಂಪರ್ಕಕ್ಕೂ ಅವರು ಸಿಕ್ಕಿರಲಿಲ್ಲ.
ನಂತರ ಮೊಬೈಲ್ ಲೊಕೇಶನ್ ಪರಿಶೀಲನೆ ನಡೆಸಿದಾಗ ಮೆಜೆಸ್ಟಿಕ್ ಸಮೀಪ ತೋರಿಸುತ್ತಿತ್ತು. ಅದನ್ನು ಆಧರಿಸಿ ಪರಿಶೀಲನೆ ನಡೆಸಿದಾಗ ವೈಭವ್ ಲಾಡ್ಜ್ ಕೊಠಡಿಯಲ್ಲಿ ಮೃತದೇಹ ಪತ್ತೆಯಾಗಿದೆ. ಕೊಠಡಿ ಬಾಗಿಲು ಹಾಕಿತ್ತು. ಪೊಲೀಸರು ಬಾಗಿಲು ತೆರೆದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಸಾವಿಗೆ ಕಾರಣ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದರು. ಜಿ. ಬಿ. ಜಕ್ಕನಗೌಡರ್ ಮೂಲತಃ ಗದಗ ಮೂಲದವರು ಹಲವು ದಿನಗಳಿಂದ ತೀರ್ಥಹಳ್ಳಿಯಲ್ಲಿ ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ಸರ್ಕಾರಿ ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಾಗ ಲಾಡ್ಜ್‌ನಲ್ಲಿ ಮೃತಪಟ್ಟಿದ್ದಾರೆ. ತೀರ್ಥಹಳ್ಳಿ ತಾಲೂಕು ತಹಶೀಲ್ದಾರ್ ಹಾಗೂ ದಂಡಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಮೃತ್ ಅತ್ರೇಶ್ ಅವರನ್ನು 2023ರಲ್ಲಿ ವರ್ಗಾವಣೆ ಮಾಡಲಾಗಿತ್ತು. ಬಳಿಕ ಹಂಗಾಮಿಯಾಗಿ ಲಿಂಗರಾಜು ಕಾರ್ಯ ನಿರ್ವಹಿಸುತ್ತಿದ್ದರು. ಬಳಿಕ ಸರ್ಕಾರ 2023ರ ಅಕ್ಟೋಬರ್‌ನಲ್ಲಿ ಜಿ. ಬಿ. ಜಕ್ಕನಗೌಡರ್ ಅವರನ್ನು ನೂತನ ತಹಶೀಲ್ದಾರ್ ಆಗಿ ನೇಮಕ ಮಾಡಿತ್ತು.