ಸಚಿವ ಎಂಬಿ ಪಾಟೀಲ್ ಸಭೆ 
ರಾಜ್ಯ

ಬೆಂಗಳೂರು 2ನೇ ವಿಮಾನ ನಿಲ್ದಾಣ: ಅಂತಿಮ ಸುತ್ತಿನಲ್ಲಿ 5 ಸ್ಥಳ, ವಾರದಲ್ಲಿ ತೀರ್ಮಾನ ಎಂದ ಸರ್ಕಾರ

ಬೆಂಗಳೂರಿನ ಉದ್ದೇಶಿತ 2ನೇ ವಿಮಾನ ನಿಲ್ದಾಣಕ್ಕಾಗಿ ಅಂತಿಮ ಸುತ್ತಿನಲ್ಲಿ 5 ಸ್ಥಳಗಳನ್ನು ಗುರುತಿಸಲಾಗಿದ್ದು, ಒಂದು ವಾರದಲ್ಲಿ ತೀರ್ಮಾನಿಸಲಾಗುತ್ತದೆ.

ಬೆಂಗಳೂರು: ಬೆಂಗಳೂರಿನ ಉದ್ದೇಶಿತ 2ನೇ ವಿಮಾನ ನಿಲ್ದಾಣಕ್ಕಾಗಿ ಅಂತಿಮ ಸುತ್ತಿನಲ್ಲಿ 5 ಸ್ಥಳಗಳನ್ನು ಗುರುತಿಸಲಾಗಿದ್ದು, ಒಂದು ವಾರದಲ್ಲಿ ತೀರ್ಮಾನಿಸಲಾಗುತ್ತದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ.

ಶುಕ್ರವಾರ ಅವರು ತಮ್ಮ ಕಚೇರಿಯಲ್ಲಿ ಕರೆದಿದ್ದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ದು, 'ಜಾಗತಿಕ ಮಟ್ಟದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಮಹಾನಗರದ ಸಾರ್ವಜನಿಕರು ಮತ್ತು ಉದ್ಯಮಗಳಿಗೆ ಇನ್ನೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅತ್ಯಗತ್ಯವಾಗಿದೆ.

ಇದಕ್ಕಾಗಿ ಸರಕಾರವು ಐದು ಸ್ಥಳಗಳನ್ನು ಗುರುತಿಸಿದೆ. ಆದರೆ ಇವುಗಳ ಪೈಕಿ ಯಾವುದನ್ನೂ ಆಖೈರು ಮಾಡಿಲ್ಲ. ಈ ಸಂಬಂಧ ಇನ್ನೊಂದು ವಾರದಲ್ಲಿ ಸಭೆ ಸೇರಿ, ಅಂತಿಮ ತೀರ್ಮಾನಕ್ಕೆ ಬರಲಾಗುವುದು' ಎಂದು ತಿಳಿಸಿದ್ದಾರೆ.

'ಎರಡನೆಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ಥಳವನ್ನು ಈಗಾಗಲೇ ತೀರ್ಮಾನಿಸಲಾಗಿದೆ ಎನ್ನುವ ವರದಿಗಳಿಗೆ ಆಧಾರವಿಲ್ಲ. ಡಾಬಸ್ ಪೇಟೆ, ನೆಲಮಂಗಲ, ಬಿಡದಿ, ಹಾರೋಹಳ್ಳಿ ಸೇರಿದಂತೆ ಒಟ್ಟು ಐದು ಸ್ಥಳಗಳನ್ನು ನಾವು ಮುಕ್ತವಾಗಿ ಇಟ್ಟುಕೊಂಡಿದ್ದೇವೆ. ಇವತ್ತು ಇನ್ನೂ ಒಂದು ಸ್ಥಳದ ಬಗ್ಗೆಯೂ ಚರ್ಚೆ ಆಗಿದೆ. ಇವುಗಳ ಬಗ್ಗೆ ವಸ್ತುಸ್ಥಿತಿ ಆಧರಿಸಿ ಮತ್ತು ಸಾಧಕ-ಬಾಧಕಗಳನ್ನು ಗಮನಿಸಿ, ವರದಿ ಕೊಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇನ್ನೊಂದು ವಾರದಲ್ಲಿ ಮತ್ತೊಂದು ಸುತ್ತು ಸಭೆ ಸೇರಿ, ಸ್ಥಳವನ್ನು ಆಖೈರುಗೊಳಿಸಲಾಗುವುದು’ ಎಂದು ಸಚಿವರು ವಿವರಿಸಿದರು.

ರಾಜಕೀಯ ಹಿತಾಸಕ್ತಿ ಇಲ್ಲ

ಇದೇ ವೇಳೆ ವಿಮಾನ ನಿಲ್ದಾಣಕ್ಕೆ ಸ್ಥಳ ಆಯ್ಕೆ ಮಾಡುವಲ್ಲಿ ಯಾರಿಗೂ ರಾಜಕೀಯ ಹಿತಾಸಕ್ತಿಗಳೇನಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, 'ಬೆಂಗಳೂರಿನ ಜನತೆಗೆ ಮತ್ತು ಉದ್ಯಮಿಗಳ ಅನುಕೂಲವಷ್ಟೇ ಇಲ್ಲಿ ಮುಖ್ಯ. ಇದರಿಂದ ನಮ್ಮ ಆರ್ಥಿಕ ಬೆಳವಣಿಗೆಗೆ ಒಳ್ಳೆಯ ಕೊಡುಗೆ ಬರಬೇಕು. ಇದರ ಜೊತೆ ನಾವು ರಾಜಿ ಮಾಡಿಕೊಳ್ಳುವುದಿಲ್ಲ. ಅಂತಿಮವಾಗಿ ಬೆಂಗಳೂರು ನಗರವು ಇನ್ನೊಂದು ಸ್ತರಕ್ಕೆ ಏರಬೇಕು ಎನ್ನುವುದಷ್ಟೇ ಸರ್ಕಾರದ ಗುರಿಯಾಗಿದೆ. ಎರಡನೆಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಮಗೆ ಸ್ಥಳಾವಕಾಶಕ್ಕೇನೂ ಕೊರತೆ ಇಲ್ಲ. ಬೆಂಗಳೂರಿನ ಸುತ್ತಮುತ್ತಲೂ ಜಾಗವಿದ್ದು, ಇದರಲ್ಲಿ ಸೂಕ್ತವಾದುದನ್ನು ಆಯ್ಕೆ ಮಾಡಲಾಗುವುದು ಎಂದು ಅವರು ಹೇಳಿದರು.

ಮೆಟ್ರೋ ಕೇಳಿರುವ ಜಾಗ ನಮ್ಮದಲ್ಲ

ಇನ್ನು ಮೆಟ್ರೋ ರೈಲು ಸಂಸ್ಥೆಯವರು (ಬಿಎಂಆರ್ಸಿಎಲ್) ಹೆಬ್ಬಾಳದ ಬಳಿ ಬಹುಮಾದರಿ ಸಾರಿಗೆ ಜಂಕ್ಷನ್ ರೂಪಿಸಲು 45 ಎಕರೆ ಜಾಗ ಕೇಳಿದ್ದಾರೆ. ಆದರೆ, ಆ ಜಾಗ ಕೆಐಎಡಿಬಿ ವಶದಲ್ಲಿಲ್ಲ. ಅದನ್ನು 2001ರಲ್ಲಿಯೇ `ಸಿಂಗಲ್ ಯೂನಿಟ್ ಕಾಂಪ್ಲೆಕ್ಸ್’ ಪರಿಕಲ್ಪನೆಯಡಿ ಖಾಸಗಿ ಸಂಸ್ಥೆಗೆ ಸ್ವಾಧೀನಪಡಿಸಿ ಕೊಡಲಾಗಿದೆ. ಆದ್ದರಿಂದ ಮೆಟ್ರೋ ನಿಗಮಕ್ಕೆ ಆ ಸಂಸ್ಥೆಯೊಂದಿಗೆ ಮಾತುಕತೆ ನಡೆಸಲು ತಿಳಿಸಲಾಗಿದೆ ಎಂದು ಸಚಿವ ಎಂಬಿ ಪಾಟೀಲ್ ತಿಳಿಸಿದರು.

ಬೆಂಗಳೂರಿನಲ್ಲಿ ಸುಗಮ ಸಂಚಾರ ವ್ಯವಸ್ಥೆ ಬರಬೇಕು ಎನ್ನುವುದು ಸರ್ಕಾರದ ಆಶಯವಾಗಿದೆ. ಆದರೆ, ಮೆಟ್ರೋದವರು ಕೇಳಿರುವ ಜಾಗ ಖಾಸಗಿಯವರ ಸ್ವತ್ತಾಗಿದೆ. ಇದರಲ್ಲಿ ಕೆಐಎಡಿಬಿ ಪಾತ್ರವೇನೂ ಇಲ್ಲ. ಬಹುಮಾದರಿ ಸಾರಿಗೆ ಸಂಕೀರ್ಣವು ಒಂದೇ ಕಡೆ ಬಂದರೆ ಜನರಿಗೂ ಅನುಕೂಲವಾಗಲಿದೆ. ಇದರಿಂದ ವಾಹನ ದಟ್ಟಣೆಯೂ ಕಡಿಮೆಯಾಗುವ ಸಂಭವವಿದೆ ಎಂದು ಅವರು ಹೇಳಿದರು.

ಶುಕ್ರವಾರ ನಡೆದ ಈ ಮಹತ್ವದ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿಗಳ ಹೆಚ್ಚುವರಿ ಕಾರ್ಯದರ್ಶಿ ಎಲ್ ಕೆ ಅತೀಕ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್ ಸೆಲ್ವಕುಮಾರ್, ನಮ್ಮ ಮೆಟ್ರೊ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್, ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ.ಎನ್ ಮಂಜುಳಾ, ಕೆಐಎಡಿಬಿ ಸಿಇಒ ಡಾ.ಮಹೇಶ, ಸೇರಿದಂತೆ ಮತ್ತಿತರರು ಇದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

H1B ವೀಸಾ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಯಾಗುತ್ತದೆ: ಅಮೆರಿಕ ವಾಣಿಜ್ಯ ಕಾರ್ಯದರ್ಶಿ ಲುಟ್ನಿಕ್

ಗಾಜಾ ಸಂಘರ್ಷ ಕೊನೆಗೆ ಡೊನಾಲ್ಡ್ ಟ್ರಂಪ್ 20 ಅಂಶಗಳ ಯೋಜನೆ: ಪ್ರಧಾನಿ ಮೋದಿ ಸ್ವಾಗತ

ಪುರುಷರ Asia Cup ಹೈಡ್ರಾಮಾ: ಮಹಿಳಾ ವಿಶ್ವಕಪ್ ನಲ್ಲಿ ಏನಾಗುತ್ತದೆ,ಅ.5ರ ಪಂದ್ಯ ಮೇಲೆ ಎಲ್ಲರ ಚಿತ್ತ

ನೆತನ್ಯಾಹು-ಟ್ರಂಪ್ ಗಾಜಾ ಶಾಂತಿ ಒಪ್ಪಂದ ಘೋಷಣೆ: ಹಂತ ಹಂತವಾಗಿ ಹಿಂದೆ ಸರಿಯಲಿರುವ ಇಸ್ರೇಲ್

ಕಲ್ಯಾಣ ಕರ್ನಾಟಕದಲ್ಲಿ ಭಾರೀ ಪ್ರವಾಹ: ಹಾನಿ ಬಗ್ಗೆ ಕುರಿತು ಇಂದು ಸಿಎಂ ವೈಮಾನಿಕ ಸಮೀಕ್ಷೆ

SCROLL FOR NEXT