ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಕುಟುಂಬ ಸದಸ್ಯರು, ಮತ್ತಿತತರ ವಿರುದ್ಧ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಕೋರಿರುವ ಎಲ್ಲಾ ದಾಖಲೆಗಳನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ( ಮುಡಾ) ಸಲ್ಲಿಸಲಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಶುಕ್ರವಾರ ಹೇಳಿದ್ದಾರೆ.
ಮುಡಾ ನಿವೇಶನ ಹಂಚಿಕೆಯಲ್ಲಿ ಅಕ್ರಮಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಶುಕ್ರವಾರ ಅರಸೇನಾ ಪಡೆಯೊಂದಿಗೆ ಮೈಸೂರಿನ ಮುಡಾ ಕಚೇರಿ ಮತ್ತಿತರ ಕಚೇರಿಗಳಲ್ಲಿ ದಾಳಿ ನಡೆಸಿದ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಬೈರತಿ ಸುರೇಶ್, ಯಾವುದೇ ದಾಖಲೆ ಕೋರಿದ್ದರೂ ಮುಡಾ ಸಲ್ಲಿಸಲಿದೆ. ಇಸಿಐಆರ್ (Enforcement Case information report) ದಾಖಲು ಮಾಡಿದ ನಂತರ ಸಿಎಂ ಸಿದ್ದರಾಮಯ್ಯ ವಿರುದ್ಧ ದಾಳಿ ಮಾಡಲು ಇಡಿ ಅಧಿಕಾರ ಪಡೆದಿದೆ ಎಂದು ಹೇಳಲಾಗುತ್ತದೆ. ಅವರು ಯಾವುದೇ ದಾಖಲೆ ಕೇಳಿದ್ದರೂ ಮುಡಾ ನೀಡುತ್ತದೆ. ನಾವು ಅದರಲ್ಲಿ ಭಾಗಿಯಾಗುವ ಪ್ರಶ್ನೆಯೇ ಇಲ್ಲ. ಅಧಿಕಾರಿಗಳು ದಾಖಲೆಗಳನ್ನು ಒದಗಿಸುತ್ತಾರೆ ಎಂದು ಹೇಳಿದರು.
ಇದು ನಮ್ಮ ದೇಶದ ಕಾನೂನು. ಇದು ನಮ್ಮ ಇಡಿ. ಪೊಲೀಸ್ ಮತ್ತು ನ್ಯಾಯಾಲಯಗಳು ತಮ್ಮ ಅಧಿಕಾರ ವ್ಯಾಪ್ತಿಯ ಮಿತಿಗಳನ್ನು ತಿಳಿದಿದ್ದಾರೆ. ಇಡಿ ತನಿಖೆ ಮಾಡಲಿ, ಅಂದು ಆಗಿರುವುದು ದಾಳಿಯಲ್ಲ, ದಾಖಲೆ ಹುಡುಕುತ್ತಿದ್ದಾರೆ. ದಾಖಲೆ ಹುಡುಕುವುದನ್ನು ನೀವು ಹೇಗೆ ದಾಳಿ ಎಂದು ಕರೆಯುತ್ತೀರಿ? ಎಂದು ಪ್ರಶ್ನಿಸಿದ ಸಚಿವರು, ಅಧಿಕಾರಿಗಳು ಕೇಳಿದಷ್ಟು ಕೊಡುತ್ತಾರೆ. 8 ಲಕ್ಷ ಪುಟಗಳ ದಾಖಲೆಗಳಿವೆ. ದೇಸಾಯಿ ಸಮಿತಿಗೆ 8 ಲಕ್ಷ ಪುಟ ನೀಡಿದ್ದು, ಕೇಳಿದರೆ ಇಡಿಗೂ ನೀಡಲಾಗುವುದು, 8 ಲಕ್ಷ ಪುಟಗಳ ಜೆರಾಕ್ಸ್ ತೆಗೆಯಲು ಒಂದು ವಾರ ಬೇಕಾಗಬಹುದಾದ್ದರಿಂದ ಒಂದೇ ದಿನದಲ್ಲಿ ನೀಡಲು ಸಾಧ್ಯವಾಗದೇ ಇರಬುಹುದು ಎಂದರು.
ಮುಡಾ ಹಗರಣ ಕುರಿತು ಲೋಕಾಯುಕ್ತ ದಾಖಲಿಸಿದ FIR ಆಧಾರದ ಮೇಲೆ ಸೆಪ್ಟೆಂಬರ್ 30 ರಂದು ಇಡಿ ಸ್ವಯಂ ಪೇರಿತವಾಗಿ ಸಿಎಂ ಸಿದ್ದರಾಮಯ್ಯ ಮತ್ತಿತರರ ವಿರುದ್ಧ ECIR ದಾಖಲಿಸಿತ್ತು.