ಕಳೆದ ಲೋಕಸಭೆ ಚುನಾವಣೆ ವೇಳೆ ಟಿಕೆಟ್ ಕೊಡಿಸುವುದಾಗಿ 2 ಕೋಟಿ ರೂಪಾಯಿ ಪಡೆದು ವಂಚಿಸಿರುವ ಆರೋಪದಡಿ ದಾಖಲಾಗಿದ್ದ ಪ್ರಕರಣದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಸಹೋದರ ಗೋಪಾಲ ಜೋಶಿ ಹಾಗೂ ಅವರ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ. ಬಿಜೆಪಿ ಮಾಜಿ ಶಾಸಕ ದೇವಾನಂದ್ ಫುಲ್ಸಿಂಗ್ ಚವ್ಹಾಣ್ ಅವರ ಪತ್ನಿ ಸುನಿತಾ ಚವ್ಹಾಣ್ ಅವರ ದೂರಿನ ಆಧಾರದ ಮೇಲೆ ಬೆಂಗಳೂರಿನ ಬಸವೇಶ್ವರನಗರ ಠಾಣೆ ಪೊಲೀಸರು ಗೋಪಾಲ ಜೋಶಿ ಅವರನ್ನು ಕೊಲ್ಲಾಪುರದಲ್ಲಿ ಹಾಗೂ ಅವರ ಪುತ್ರ ಅಜಯ್ ಜೋಶಿ ಅವರನ್ನು ಪುಣೆಯಲ್ಲಿ ಬಂಧಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಗೋಪಾಲ್ ಜೋಶಿ ತಲೆಮರೆಸಿಕೊಂಡಿದ್ದರು. ತನಿಖೆ ಕೈಗೊಂಡಿದ್ದ ಪೊಲೀಸರು ಅವರಿರುವ ಜಾಗವನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣ ಸಂಬಂಧ ಇಲ್ಲಿಯವರೆಗೂ ಮೂವರನ್ನು ಬಂಧಿಸಲಾಗಿದೆ.
ಸಾರ್ವಜನಿಕ ಸಭೆಯೊಂದರಲ್ಲಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ನಿಂದಿಸಿದ ಆರೋಪದ ಮೇಲೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕಾಂಗ್ರೆಸ್ ನಗರಸಭಾ ಸದಸ್ಯ ಪರಶುರಾಮ ಹೊಸಮನಿ ಅವರ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಅಕ್ಟೋಬರ್ 15ರಂದು ನಡೆದ ಕಾರ್ಯಕ್ರಮವೊಂದರಲ್ಲಿ ಯತ್ನಾಳ್ ಅವರು ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಹೊಸಮನಿ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಯತ್ನಾಳ್ ವಿರುದ್ಧ ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಶಾಂತಿ ಕದಡುವ ಉದ್ದೇಶಪೂರ್ವಕ ಅವಮಾನ ಮತ್ತು ಸುಳ್ಳು ಮತ್ತು ತಪ್ಪು ಮಾಹಿತಿ ಹರಡಿದ ಪ್ರಕರಣ ದಾಖಲಿಸಲಾಗಿದೆ.
ಮುಡಾ ಅಕ್ರಮ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಮುಡಾ ಕಚೇರಿಯಲ್ಲಿ ಇಡಿ ಅಧಿಕಾರಿಗಳು 2ನೇ ದಿನವಾದ ಶನಿವಾರವೂ ತಪಾಸಣೆ ಮುಂದುವರೆಸಿದ್ದಾರೆ. ಮುಡಾದಲ್ಲಿ 5 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂಬ ಆರೋಪವಿದೆ. 50:50 ಅನುಪಾತದಡಿ ಮುಖ್ಯಮತ್ರಿ ಸಿದ್ದರಾಯ್ಯನವರ ಪತ್ನಿ ಪಾರ್ವತಿ ಹೆಸರಿಗೂ ನಿವೇಶನ ಮಂಜೂರಾಗಿದ್ದು, ಈ ಪ್ರಕರಣದಲ್ಲಿ ಸಿದ್ದರಾಮಯ್ಯ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆಂದು ಆರೋಪಿಸಿ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರು ಇಡಿಗೆ ದೂರು ನೀಡಿದ್ದರು. ಅಧಿಕಾರಿಗಳು ಮೈಸೂರಿನ ಜೆಎಲ್'ಬಿ ರಸ್ತೆಯಲ್ಲಿರುವ ಮುಡಾ ಕಚೇರಿಗೆ ಭೇಟಿ ನೀಡಿದ್ದು, ಪಾರ್ವತಿ ಸಿದ್ದರಾಮಯ್ಯಗೆ ನಿವೇಶನ ಹಂಚಿಕೆ ಮಾಡಿದ ಬಗ್ಗೆ ಮೂಲ ದಾಖಲಾತಿ ಕೊಡಿ ಎಂದು ಮುಡಾ ಆಯುಕ್ತರ ಬಳಿ ಕೇಳಿದ್ದಾರೆ. ಅಲ್ಲದೆ, ಪಾರ್ವತಿ ಸಿದ್ದರಾಮಯ್ಯ ಅವರು ಬದಲಿ ನಿವೇಶನ ಕೋರಿ ಬರೆದ ಪತ್ರದಲ್ಲಿ ಕೆಲ ಪದಗಳನ್ನು ವೈಟ್ನರ್ ಹಾಕಿ ಅಳಿಸಿದ್ದು ಯಾರು? ಯಾವ ಪದಗಳನ್ನು ಅಳಿಸಲಾಗಿದೆ ಎಂದೂ ಇಡಿ ಅಧಿಕಾರಿಗಳು ಮಾಹಿತಿ ಕೋರಿದ್ದಾರೆ ಎಂದು ತಿಳಿದುಬಂದಿದೆ.
ಮಹಾರಾಷ್ಟ್ರದ ಸಾಂಗಲಿಯಿಂದ ಹುಬ್ಬಳ್ಳಿಗೆ ಅಕ್ರಮವಾಗಿ ಗೂಡ್ಸ್ ವಾಹನದಲ್ಲಿ ಸಾಗಿಸುತ್ತಿದ್ದ 2.73 ಕೋಟಿ ರೂ. ನಗದು ಹಣವನ್ನು ಬೆಳಗಾವಿ ನಗರ ಪೊಲೀಸರು ಇಂದು ವಶಕ್ಕೆ ಪಡೆದಿದ್ದಾರೆ. ಮಹಾರಾಷ್ಟ್ರದ ಸಾಂಗಲಿಯ ಸಚಿನ್ ಮೇನದುಕಳಿ ಹಾಗೂ ಮಾರುತಿ ಮಾರಗುಡೆ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ. ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನ ಕ್ಯಾಬಿನ್ ಮಾರ್ಪಾಡು ಮಾಡಿ ಅದರಲ್ಲಿ 2.73 ಕೋಟಿ ರೂ.ಹಣವನ್ನು ಸಾಗಿಸಲಾಗುತ್ತಿತ್ತು. ಸಿಸಿಬಿ ಇನ್ಸ್ಪೆಕ್ಟರ್ ನಂದೀಶ್ವರ ಕುಂಬಾರ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಹಣದ ಮೂಲದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸ್ವಿಗ್ಗಿ, ಜೊಮಾಟೊ, ಡಂಜೊ ಮತ್ತು ಓಲಾ ಮುಂತಾದ ಅಗ್ರಿಗೇಟರ್ ಪ್ಲಾಟ್‌ಫಾರ್ಮ್‌ಗಳ ಪ್ರತಿಯೊಂದು ವಹಿವಾಟಿನ ಟ್ರ್ಯಾನ್ಸ್ ಪೋರ್ಟ್ ಚಾರ್ಜ್ ಮೇಲೆ ಸೆಸ್ ವಿಧಿಸಲು ರಾಜ್ಯ ಸರ್ಕಾರ ಪ್ರಸ್ತಾಪಿಸಿದ್ದು, ಗಿಗ್ ಕಾರ್ಮಿಕರಿಗಾಗಿ ಕಲ್ಯಾಣ ನಿಧಿ ರಚಿಸಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಕರ್ನಾಟಕ ಗಿಗ್ ವರ್ಕರ್ಸ್ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) 2024 ಮಸೂದೆಯನ್ನು ಸರ್ಕಾರವು ಮಂಡಿಸುವ ನಿರೀಕ್ಷೆಯಿದೆ. ಮುಂದಿನ ವಾರ ನಡೆಯಲಿರುವ ಸಂಪುಟ ಸಭೆಯಲ್ಲಿ ಕರಡು ಮಸೂದೆ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ ಎಂದು ಸಂತೋಷ್ ಲಾಡ್ ತಿಳಿಸಿದ್ದಾರೆ.