ಬೆಂಗಳೂರು: ಪರಿಶಿಷ್ಟ ಜಾತಿಗೆ (ಎಸ್‌ಸಿ) ಒಳ ಮೀಸಲಾತಿ ಕಲ್ಪಿಸುವ ವಿಚಾರ ಕುರಿತು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.
ಸಚಿವರಾದ ಕೆ.ಎಚ್.ಮುನಿಯಪ್ಪ, ಆರ್.ಬಿ.ತಿಮ್ಮಾಪುರ್ ಸೇರಿದಂತೆ ಪರಿಶಿಷ್ಟ ಜಾತಿ (ಎಸ್‌ಸಿ) ಮುಖಂಡರು ಶನಿವಾರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದರು. ಈ ವೇಳೆ ಒಳಮೀಸಲಾತಿ ಜಾರಿ ಮಾಡುವವರೆಗೆ ನೇಮಕಾತಿ ಪ್ರಕ್ರಿಯೆಗಳನ್ನು ಮುಂದೂಡುವಂತೆ ಆಗ್ರಹಿಸಿದರು.
ಈ ವೇಳೆ ಮುಖ್ಯಮಂತ್ರಿಗಳು ಎಸ್‌ಸಿ ಮೀಸಲಾತಿ ವರ್ಗೀಕರಣ ಪಟ್ಟಿ ನೀಡುವಂತೆ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರಿಗೆ ಸೂಚನೆ ನೀಡಿದರು.
ಮುಖ್ಯಮಂತ್ರಿಗಳ ಸೂಚನೆ ಬೆನ್ನಲ್ಲೇ ಶಾಲಿನ ರಜನೀಶ್ ಅವರು, ತಮಿಳುನಾಡು ಮತ್ತು ಹರಿಯಾಣ ಮಾದರಿಯನ್ನು ಅಧ್ಯಯನ ನಡೆಸಲಿದ್ದು ಬಳಿಕ ಮುಖ್ಯಮಂತ್ರಿಗಳಿಗೆ ವರದಿ ನೀಡಲಿದ್ದರೆ.
ಶಾಲಿನಿ ರಜನೀಶ್ ಅವರು ವರದಿ ಸಲ್ಲಿಸಿದ ಬಳಿಕ ಅಕ್ಟೋಬರ್ 24 ರಂದು ನಡೆಯುವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳು ವಿಚಾರ ಪ್ರಸ್ತಾಪಿಸಿ, ಚರ್ಚೆ ನಡೆಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಎಸ್‌ಸಿ ಮೀಸಲಾತಿ ವರ್ಗೀಕರಣವನ್ನು ಆಯಾ ರಾಜ್ಯ ಸರ್ಕಾರಗಳು ನಿರ್ಧರಿಸಬಹುದು ಎಂದು ಸುಪ್ರೀಂ ಕೋರ್ಟ್ 2024ರ ಆಗಸ್ಟ್ 1 ರಂದು ತೀರ್ಪು ನೀಡಿತ್ತು. ಕ್ಯಾಬಿನೆಟ್ ಉಪಸಮಿತಿಯ ಕೂಡ ಎಸ್‌ಸಿ ವರ್ಗದೊಳಗಿನ 101 ವಿವಿಧ ಜಾತಿಗಳನ್ನು ಅದರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡುವಂತೆ ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಈ ನಡುವೆ ಮೀಸಲಾತಿ ವಿಚಾರವಾಗಿ ರಾಜ್ಯ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಭೇಟಿಗೆ ನಿರ್ಧರಿಸಿದ್ದು, ಈ ವೇಳೆ ಬಸವರಾಜ ಬೊಮ್ಮಾಯಿ ಸರಕಾರ ತಿರಸ್ಕರಿಸಿದ್ದ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಕುರಿತು ಮಾತುಕತೆ ನಡೆಸುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.
ಅಂದಿನ ಬಿಜೆಪಿ ಸರ್ಕಾರವು ಆಗಿನ ಕಾನೂನು ಸಚಿವ ಜೆಸಿ ಮಾಧು ಸ್ವಾಮಿ ನೇತೃತ್ವದ ಉಪಸಮಿತಿ ಸಲ್ಲಿಸಿದ ವರದಿಯನ್ನು ಅಂಗೀಕರಿಸಿತ್ತು. ಹೀಗಾಗಿ ಕಾಂಗ್ರೆಸ್ ಸರ್ಕಾರವು ಮಧು ಸ್ವಾಮಿ ವರದಿಯನ್ನು ರದ್ದುಗೊಳಿಸಿ, ನ್ಯಾಯಮೂರ್ತಿ ಸದಾಶಿವ ಆಯೋಗದ ಶಿಫಾರಸುಗಳನ್ನು ಮರುಪರಿಶೀಲಿಸಬಹುದು ಎಂದು ನಾಯಕರೊಬ್ಬರು ಹೇಳಿದ್ದಾರೆ.
ಸರ್ಕಾರ 30,000 ಕ್ಕೂ ಹೆಚ್ಚು ಉದ್ಯೋಗಗಳಿಗೆ ಅಧಿಸೂಚನೆಗಳನ್ನು ಹೊರಡಿಸಿದ್ದು, ಮೀಸಲಾತಿ ವರ್ಗೀಕರಣವನ್ನು ಸಾಧ್ಯವಾದಷ್ಟು ಬೇಗ ಜಾರಿಗೊಳಿಸದಿದ್ದರೆ, ಮತ್ತೆ ಈ ಸಮುದಾಯಗಳಿಗೆ ಅನ್ಯಾಯಕ್ಕೆ ಕಾರಣವಾಗುತ್ತದೆ ಎಂದು ನಾಯಕರೊಬ್ಬರು ತಿಳಿಸಿದ್ದಾರೆ.
ಏತನ್ಮಧ್ಯೆ ಅಕ್ಟೋಬರ್ 24ರ ಸಂಪುಟ ಸಭೆಗೂ ಮುನ್ನ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಅಕ್ಟೋಬರ್ 21 ರಂದು ಎಸ್‌ಸಿ (ಬಲ), ಭೋವಿಗಳು ಮತ್ತು ಲಂಬಾಣಿಗಳನ್ನು ಪ್ರತಿನಿಧಿಸುವ ಎಲ್ಲಾ ಎಸ್‌ಸಿ ಸಮುದಾಯದ ಶಾಸಕರ ಸಮಿತಿಯ ಸಭೆಯನ್ನು ನಡೆಸಲಿದ್ದಾರೆ. ಸಭೆಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಮ್ಮತಕ್ಕೆ ಬರುವ ಸಾಧ್ಯತೆಯಿದ್ದು, ಇದರಿಂದ ಮುಖ್ಯಮಂತ್ರಿಗಳು ನಿರ್ಧಾರ ತೆಗೆದುಕೊಳ್ಳಲು ಸುಲಭವಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಮಾಜಿ ಸಚಿವ ಹಾಗೂ ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಸಚಿವ ಶಿವರಾಜ್ ತಂಗಡಗಿ ಹಾಗೂ ಎಂಎಲ್ಸಿ ಡಾ.ಸುಧಾಮದಾಸ್ ಅವರನ್ನೊಳಗೊಂಡ ಸಮಿತಿಯು ಹಲವು ಸುತ್ತಿನ ಚರ್ಚೆ ನಡೆಸಿದ್ದಾರೆಂದು ತಿಳಿದುಬಂದಿದೆ.