ಬೆಂಗಳೂರು: ಕರ್ನಾಟಕ ಅರಣ್ಯ ಇಲಾಖೆಯು ಮಲೆ ಮಹದೇಶ್ವರ ಬೆಟ್ಟದಲ್ಲಿ ಪರಿಚಯಿಸಿದ ಸಫಾರಿ ರಾಜ್ಯ ಮಾತ್ರವಲ್ಲದೆ ನೆರೆಯ ತಮಿಳುನಾಡಿನ ಪ್ರವಾಸಿಗರಲ್ಲಿ ದೊಡ್ಡಮಟ್ಟದಲ್ಲಿ ಆಕರ್ಷಿಸುತ್ತಿದೆ.
ಬಿಳಿಗಿರಿ ರಂಗಸ್ವಾಮಿ ದೇವಸ್ಥಾನ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಮಲೆ ಮಹದೇಶ್ವರ ಬೆಟ್ಟಗಳ ವನ್ಯಜೀವಿ ಅಭಯಾರಣ್ಯದ ಟಿಜಿ ಪಾಳ್ಯ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯು ಕಳೆದ ವರ್ಷ ಸಫಾರಿ ಆರಂಭಿಸಿದೆ. ಈ ಪ್ರದೇಶವು ತಮಿಳುನಾಡಿನಲ್ಲಿ ಹೊಸದಾಗಿ ಘೋಷಿಸಲಾದ ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿದೆ. ಸಫಾರಿ ಮಾರ್ಗವು 18 ಕಿ.ಮೀ. ವ್ಯಾಪ್ತಿಯಲ್ಲಿದೆ.
ಕರ್ನಾಟಕ ಅರಣ್ಯ ಇಲಾಖೆಯು ಎಂಎಂ ಹಿಲ್ಸ್ ಮತ್ತು ಕುದುರೆಮುಖವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸುವ ಪ್ರಸ್ತಾವನೆಯನ್ನು ಕೈಬಿಟ್ಟಿದ್ದರೂ ಸಹ, ಸಫಾರಿ ಭಾರೀ ಪ್ರಮಾಣದಲ್ಲಿ ಹಿಟ್ ಆಗಿದ್ದು ಪ್ರವಾಸಿಗರನ್ನು ಸೆಳೆಯುತ್ತಿದೆ. ಎಂಎಂ ಹಿಲ್ಸ್ ಅನ್ನು 2013 ರಲ್ಲಿ ವನ್ಯಜೀವಿ ಅಭಯಾರಣ್ಯವೆಂದು ಘೋಷಿಸಲಾಯಿತು ಮತ್ತು ಪರಿಸರ-ಪ್ರವಾಸೋದ್ಯಮವನ್ನು ಸುಧಾರಿಸುವ ಕ್ರಿಯಾ ನಿರ್ವಹಣಾ ಯೋಜನೆಯನ್ನು 2019 ರಲ್ಲಿ ಅಂತಿಮಗೊಳಿಸಲಾಯಿತು. ಅಕ್ಟೋಬರ್ 2023 ರವರೆಗೆ ಪ್ರಯೋಗಗಳು ನಡೆಯುತ್ತಿದ್ದವು, ನಂತರ ಆರು ತಿಂಗಳವರೆಗೆ ಹೆಚ್ಚುವರಿ ಪ್ರಯೋಗಗಳಿಗೆ ಅನುಮತಿ ನೀಡಲಾಯಿತು. ಇಲ್ಲಿಯವರೆಗೆ, 10,000 ಕ್ಕೂ ಹೆಚ್ಚು ಜನರು ಸಫಾರಿಗೆ ಭೇಟಿ ನೀಡಿದ್ದಾರೆ.
ಸತ್ಯಮಂಗಲದಲ್ಲಿ ಸಫಾರಿಗೆ ಯಾವುದೇ ಆಯ್ಕೆ ಇಲ್ಲದ ಕಾರಣ ಅಲ್ಲಿಂದ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಯಾವುದೇ ಒಪ್ಪಂದಕ್ಕೆ ಸಹಿ ಹಾಕದಿದ್ದರೂ, ಎಂಎಂ ಹಿಲ್ಸ್‌ನಲ್ಲಿ ಸಫಾರಿ ಮಾಡುವ ಬಗ್ಗೆ ತಮಿಳುನಾಡಿನ ಅಧಿಕಾರಿಗಳಿಗೆ ತಿಳಿಸಲಾಗಿದೆ. ತಮಿಳುನಾಡಿನಲ್ಲಿ ಹುಲಿ ಸಂರಕ್ಷಿತ ಪ್ರದೇಶ ಘೋಷಣೆ ಮಾಡಿರುವುದು ನಮಗೆ ಸಹಾಯ ಮಾಡುತ್ತಿದೆ ಎಂದು ಕರ್ನಾಟಕ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಂ.ಎಂ.ಹಿಲ್ಸ್‌ನ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಸಂತೋಷ್‌ಕುಮಾರ್ ಜಿ ಮಾತನಾಡಿ, ಸತ್ಯಮಂಗಲದಲ್ಲಿ ಹೋಮ್‌ಸ್ಟೇಗಳಿದ್ದು, ಪ್ರವಾಸಿಗರು ಎಂಎಂ ಹಿಲ್ಸ್‌ಗೆ ಸಫಾರಿಗಾಗಿ ಬರುತ್ತಾರೆ. ಕೊಳ್ಳೇಗಾಲ ಮತ್ತು ಟಿಬೆಟಿಯನ್ ವಸಾಹತುಗಳಿಗೆ ಭೇಟಿ ನೀಡುವವರು ಎಂಎಂ ಹಿಲ್ಸ್‌ಗೆ ಬರುತ್ತಾರೆ ಎಂದು ಮಾಹಿತಿ ನೀಡಿದ್ದಾರೆ. ಇಲ್ಲಿ ಒಟ್ಟು ಮೂರು ಸಫಾರಿ ವಾಹನಗಳು ಪ್ರತಿದಿನ ನಾಲ್ಕು ಟ್ರಿಪ್‌ಗಳನ್ನು ಮಾಡುತ್ತವೆ. ಮುಂದಿನ ದಿನಗಳಲ್ಲಿ ಕರ್ನಾಟಕ ಅರಣ್ಯ ಇಲಾಖೆಯು ಪ್ರವಾಸಿಗರಿಗಾಗಿ ಉಡುತೊರೆ ಅಣೆಕಟ್ಟಿನ ಬಳಿ ಅತಿಥಿಗೃಹವನ್ನು ನಿರ್ಮಿಸುವ ಕೆಲಸ ಮಾಡುತ್ತಿದೆ.
ಎಂಎಂ ಹಿಲ್ಸ್ ಆರೋಗ್ಯಕರ ವನ್ಯಜೀವಿ ಜನಸಂಖ್ಯೆಗೆ ನೆಲೆಯಾಗಿದೆ ಮತ್ತು ಪ್ರವಾಸಿಗರು ಮಚ್ಚೆಯುಳ್ಳ ಜಿಂಕೆ, ಸಾಂಬಾರ್, ಸೀಳು ನಾಯಿ ಆನೆಗಳು, ಚಿರತೆಗಳು ಮತ್ತು ಹುಲಿಗಳನ್ನು ನೋಡಬಹುದಾಗಿದೆ. ಈ ಪ್ರದೇಶವು ಮಾನವ ವಸತಿಯಿಂದ ಮುಕ್ತವಾಗಿದೆ, ಪ್ರಾಣಿಗಳು ಯತೇಚ್ಛವಾಗಿ ಕಂಡು ಬರುತ್ತವೆ.