ಬೆಂಗಳೂರು: ವಕ್ಫ್ (ತಿದ್ದುಪಡಿ) ಮಸೂದೆ 2024 ರ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರು ಕರ್ನಾಟಕದ ವಿಜಯಪುರ ಜಿಲ್ಲೆಯ ರೈತರನ್ನು ವಕ್ಫ್ ಮಂಡಳಿಯೊಂದಿಗೆ ಚರ್ಚಿಸಲು ಆಹ್ವಾನಿಸುವಂತೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮನವಿ ಮಾಡಿದ್ದಾರೆ.
ವಿಜಯಪುರ ಮತ್ತು ಕರ್ನಾಟಕದ ಇತರ ಜಿಲ್ಲೆಗಳ ರೈತರ ಜಮೀನನ್ನು ವಕ್ಫ್ ಆಸ್ತಿಯನ್ನಾಗಿ ಘೋಷಿಸುವ ಕುರಿತು ಬಂದಿರುವ ನೋಟಿಸ್‌ಗಳ ಕುರಿತು, ಜಗದಾಂಬಿಕಾ ಅವರಿಗೆ ಪತ್ರ ಬರೆದಿದ್ದೇನೆ. ನೋಟಿಸ್‌ಗಳ ಹೊರತಾಗಿಯೂ ಹಲವರ ಆರ್ ಟಿ ಸಿ, ಪಹಣಿ ಗಳಲ್ಲಿಯೂ ಯಾವುದೇ ಸಮರ್ಪಕ ಕಾನೂನುಗಳನ್ನು ಪಾಲಿಸದೇ ವಕ್ಫ್ ಆಸ್ತಿಗಳೆಂದು ತಿದ್ದುಪಡಿ ಮಾಡಲಾಗಿದ್ದು, ಈ ರೀತಿ ತೊಂದರೆಗೆ ಒಳಗಾಗಿರುವ ರೈತರ ನಿಯೋಗವನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸುಬೇಕು. ಇದರಿಂದ ವಕ್ಫ್‌ನಿಂದ ಆಗಿರುವ ಭೂಮಿ ಅತಿಕ್ರಮಣದ ನೇರ ಮಾಹಿತಿ ದೊರಕಲಿದೆ’ ಎಂದು ಮನವಿ ಮಾಡಿದ್ದಾರೆ.
ಸಮಿತಿಯ ಸದಸ್ಯರಾಗಿರುವ ಬೆಂಗಳೂರು ದಕ್ಷಿಣದ ಲೋಕಸಭಾ ಸದಸ್ಯರು ಜಿಲ್ಲೆ ಮತ್ತು ಸುತ್ತಮುತ್ತಲಿನ ಇತರ ಪ್ರದೇಶಗಳ ರೈತರ ನಿಯೋಗದೊಂದಿಗೆ ಇತ್ತೀಚೆಗೆ ಭೇಟಿಯಾಗಿದ್ದರು.ಸುಮಾರು ಒಂದು ಶತಮಾನದಿಂದ ತಮ್ಮ ಜಮೀನುಗಳನ್ನು ಸಾಗುವಳಿ ಮಾಡಿರುವ ಈ ರೈತರು 1920 ಮತ್ತು 1930 ರ ದಶಕದ ಹಿಂದಿನ ದಾಖಲೆಗಳನ್ನು ಹೊಂದಿದ್ದಾರೆ. ಆದರೆ, ಇತ್ತೀಚಿನ ತಿಂಗಳುಗಳಲ್ಲಿ, ಅವರಲ್ಲಿ ಅನೇಕರಿಗೆ ಯಾವುದೇ ಸಾಕ್ಷ್ಯ ಅಥವಾ ವಿವರಣೆಯಿಲ್ಲದೆ ತಮ್ಮ ಭೂಮಿಯನ್ನು ವಕ್ಫ್ ಆಸ್ತಿ ಎಂದು ಘೋಷಿಸಲು ನೋಟಿಸ್ ನೀಡಲಾಗಿದೆ. ಸುಮಾರು 1,500 ಎಕರೆಗಳನ್ನು ಅವರ ಹಳ್ಳಿಯಲ್ಲಿಯೇ ವಕ್ಫ್ ಆಸ್ತಿ ಎಂದು ಗೊತ್ತುಪಡಿಸಲಾಗಿದೆ, ”ಎಂದು ಅವರು ಪಾಲ್‌ಗೆ ಬರೆದ ಪತ್ರದಲ್ಲಿ ಆರೋಪಿಸಿದ್ದಾರೆ.ರೈತರಿಗೆ ನೋಟಿಸ್‌ಗಳನ್ನು ನೀಡಿದ್ದರ ಹೊರತಾಗಿ, ಕಾನೂನು ಪ್ರಕ್ರಿಯೆಗಳನ್ನು ಅನುಸರಿಸದೆ ಕೆಲವು ಜಮೀನುಗಳ ಆರ್‌ಟಿಸಿ, ಪಹಣಿ ಮತ್ತು ಮ್ಯುಟೇಶನ್ ರಿಜಿಸ್ಟರ್‌ಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಸಮಿತಿಯ ಮುಂದೆ ಸಾಕ್ಷಿಗಳಾಗಿ ಈ ರೈತರ ನಿಯೋಗವನ್ನು ಆಹ್ವಾನಿಸಲು ಮತ್ತು ಈ ಸಮಸ್ಯೆಯ ಪ್ರಮಾಣವನ್ನು ನೇರವಾಗಿ ಅರ್ಥಮಾಡಿಕೊಳ್ಳಲು ಮನವಿ ಮಾಡಲಾಗಿದೆ. ಅಷ್ಟೇ ಅಲ್ಲದೆ, ಸಾರ್ವಜನಿಕ ವಿಚಾರಣೆಗಾಗಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವಂತೆ ಮನವಿ ಮಾಡಲಾಗಿದೆ ಎಂದು ತೇಜಸ್ವಿ ಸೂರ್ಯ ತಿಳಿಸಿದ್ದಾರೆ.