ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ಮತ್ತು ಇತರ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಕೋರ್ಟ್ ಸೆ.12 ರ ವರೆಗೆ ವಿಸ್ತರಿಸಿದೆ. ವಿಚಾರಣೆಗೆ ನಟ ದರ್ಶನ್ ಅವರು ಬಳ್ಳಾರಿ ಜೈಲಿನಿಂದ, ಪವಿತ್ರಾ ಗೌಡ ಬೆಂಗಳೂರು ಕೇಂದ್ರ ಕಾರಾಗೃಹದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರು. ಈಮಧ್ಯೆ, ಕೊಲೆ ಪ್ರಕರಣದಲ್ಲಿ ತಮ್ಮ ವಿರುದ್ಧದ ಚಾರ್ಜ್ ಶೀಟ್ ವರದಿಯ ಪ್ರಸಾರಕ್ಕೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸುವಂತೆ ಕೋರಿ ಹೈಕೋರ್ಟ್ ಗೆ ನಟ ದರ್ಶನ್ ಅರ್ಜಿ ಸಲ್ಲಿಸಿದ್ದಾರೆ. ಚಾರ್ಜ್ಶೀಟ್ನಲ್ಲಿ ದರ್ಶನ್ ಅವರು ಏನು ಮಾಡಿದ್ದರು ಎಂಬ ಬಗ್ಗೆ ಮಾಹಿತಿ ಇದೆ. ರೇಣುಕಾ ಸ್ವಾಮಿಗೆ ಕೊಟ್ಟ ಚಿತ್ರ ಹಿಂಸೆಗಳ ಬಗ್ಗೆ ಅಲ್ಲಿ ವಿವರಣೆ ನೀಡಲಾಗಿತ್ತು.
ಇನ್ನು ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ತಮ್ಮ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲರ ನಿರ್ಧಾರ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಸೋಮವಾರ ಮತ್ತೆ ಮುಂದೂಡಿದೆ. ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 12ಕ್ಕೆ ನಿಗದಿ ಮಾಡಲಾಗಿದೆ. ಸರ್ಕಾರದ ಪರವಾಗಿ ಹಾಜರಾಗಿದ್ದ ಅಡ್ವೊಕೆಟ್ ಜನರಲ್ ಶಶಿಕಿರಣ್ ಶೆಟ್ಟಿ, 17ಎ ಅಡಿ ಪ್ರಾಸಿಕ್ಯೂಷನ್ ಗೆ ಪೊಲೀಸರು ಅನುಮತಿ ಕೇಳಬಹುದು. ಅದಕ್ಕೂ ಮೊದಲು ತನಿಖಾಧಿಕಾರಿ ಪ್ರಾಥಮಿಕ ತನಿಖೆ ನಡೆಸಬೇಕು. ಪ್ರಾಥಮಿಕ ತನಿಖೆಯ ವಿವರವನ್ನು ಸಕ್ಷಮ ಪ್ರಾಧಿಕಾರಕ್ಕೆ ನೀಡಬೇಕು ಎಂದು ವಾದ ಮಂಡಿಸಿದರು. ರಾಜ್ಯಪಾಲರು ಸರ್ಕಾರಕ್ಕೆ ಶೋಕಾಸ್ ನೋಟಿಸ್ ನೀಡುವ ಬದಲು ತನಿಖಾಧಿಕಾರಿಯಿಂದ ವರದಿ ಪಡೆಯಬೇಕಿತ್ತು. ವರದಿಯ ಬಲವಿಲ್ಲದೇ ರಾಜ್ಯಪಾಲರು ಅನುಮತಿ ನೀಡಿದ್ದಾರೆ ಎಂದು ಕೇಂದ್ರ ಸರ್ಕಾರದ 17ಎ ಮಾರ್ಗಸೂಚಿ ಆಧರಿಸಿ ಅಡ್ವೊಕೆಟ್ ಜನರಲ್ ವಾದ ಮಂಡಿಸಿದರು.
ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ನಾಲ್ವರು ಆರೋಪಿಗಳಾದ ಮುಸ್ಸಾವಿರ್ ಹುಸೇನ್ ಶಾಜಿಬ್, ಅಬ್ದುಲ್ ಮಥೀನ್ ಅಹ್ಮದ್ ತಾಹಾ, ಮಾಜ್ ಮುನೀರ್ ಅಹ್ಮದ್ ಮತ್ತು ಮುಝಮ್ಮಿಲ್ ಶರೀಫ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ. ಆರೋಪಿಗಳ ವಿರುದ್ಧ ಹಿಂದಿನ IPC, UAPA, ESA, PDLP ಕಾಯಿದೆ ಅಡಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. 2024ರ ಜ.22ರಂದು ಅಯೋಧ್ಯೆಯಲ್ಲಿ ನಡೆದಿದ್ದ ಪ್ರಾಣಪ್ರತಿಷ್ಠಾಪನೆ ಸಮಾರಂಭ ದಿನದಂದು ಕರ್ನಾಟಕದ ಬಿಜೆಪಿ ಕಚೇರಿ ಸ್ಫೋಟಗೊಳಿಸುವ ಪ್ಲ್ಯಾನ್ ವಿಫಲವಾದ ಹಿನ್ನೆಲೆ ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಆರೋಪಿಗಳು ಸಂಚು ರೂಪಿಸಿದ್ದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹೆಚ್.ವಿ.ರಾಜೀವ್ ನಡೆಸಿದ್ದಾರೆ ಎನ್ನಲಾಗಿರುವ ದೊಡ್ಡ ಅಕ್ರಮವೊಂದು ಬೆಳಕಿಗೆ ಬಂದಿದೆ. ಆಯುಕ್ತರ ಅನುಮತಿ ಇಲ್ಲದೇ ಹೆಚ್.ವಿ.ರಾಜೀವ್ ಅವರು ಮೈಸೂರಿನ ಜ್ಞಾನಗಂಗ ಗೃಹ ನಿರ್ಮಾಣ ಸಹಕಾರ ಸಂಘದಿಂದ ಒಂದೇ ದಿನದಲ್ಲಿ 848 ನಿವೇಶನಗಳ ಖಾತೆ ಮಾಡಿಸಿಕೊಂಡಿದ್ದಾರೆಂಬ ಗಂಭೀರ ಆರೋಪ ಕೇಳಿಬಂದಿದೆ. ನಗರಾಭಿವೃದ್ಧಿ ಪ್ರಾಧಿಕಾರದ 2018ರ ಆದೇಶದ ವಿರುದ್ಧವಾಗಿ ಬಡಾವಣೆ ನಿರ್ಮಾಣ ಮಾಡಲಾಗಿದೆ. ಜ್ಞಾನಗಂಗಾ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಎಚ್.ವಿ ರಾಜೀವ್ ಅವರೇ ಅಧ್ಯಕ್ಷರಾಗಿದ್ದಾರೆ. 252 ಎಕರೆ ಜಾಗದ ಕೆಲವು ಸರ್ವೆ ನಂಬರ್ಗಳು ವ್ಯಾಜ್ಯ ನ್ಯಾಯಾಲಯದಲ್ಲಿರುತ್ತೆ. ಹೀಗಾಗಿ ಸದರಿ ಬಡವಾಣೆಗಳ ನಿವೇಶನ ಹಕ್ಕುಗಳನ್ನ ಮುಡಾ ವರ್ಗಾವಣೆ ಮಾಡಬಾರದೆಂದು ಆದೇಶವಿದೆ.
ಕನ್ನಡದ ಹಿರಿಯ ಪತ್ರಕರ್ತ ವಸಂತ ನಾಡಿಗೇರ ಸೋಮವಾರ ನಸುಕಿನ ಜಾವ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 59 ವರ್ಷ ವಯಸ್ಸಾಗಿತ್ತು. ವಿಜಯ ಕರ್ನಾಟಕ, ಕನ್ನಡ ಪ್ರಭ, ವಿಶ್ವವಾಣಿ ಪತ್ರಿಕೆಗಳಲ್ಲಿ ಸುದ್ದಿ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದ ವಸಂತ್ ನಾಡಿಗೇರ್ 2 ವರ್ಷಗಳಿಂದ ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕರಾಗಿದ್ದರು. ಮೂರೂವರೆ ದಶಕದಿಂದ ಕನ್ನಡ ಪತ್ರಿಕೋದ್ಯಮದಲ್ಲಿ ಕೆಲಸ ಮಾಡುತ್ತಿದ್ದ ವಸಂತ್ ನಾಡಿಗೇರ, ಪನ್ ಹೆಡ್ಡಿಂಗ್, ಸುದ್ದಿಗಳಿಗೆ ಆಕರ್ಷಕ ತಲೆಬರಹ ನೀಡುವುದರಲ್ಲಿ ಜನಪ್ರಿಯರಾಗಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಕೃತಿ ದಹಿಸಲು ಯತ್ನಿಸಿದ ಆರೋಪದ ಮೇಲೆ ಬಿಜೆಪಿ ಕಾರ್ಯಕರ್ತರ ವಿರುದ್ಧ ಮಣಿಪಾಲ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಕುಂದಾಪುರದ ಪ್ರಾಂಶುಪಾಲರಿಗೆ ಘೋಷಿಸಲಾಗಿದ್ದ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ತಡೆದಿದ್ದನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಸೆ.6 ರಂದು ಸಿಂಡಿಕೇಟ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದ ಬಿಜೆಪಿ ಕಾರ್ಯಕರ್ತರ ಪೈಕಿ ಕೆಲವರು ಸಿಎಂ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಪ್ರತಿಕೃತಿ ದಹಿಸಲು ಮುಂದಾಗಿದ್ದರು. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಪ್ರತಿಭಟನೆ ನಡೆಸದಂತೆ ತಡೆದರು. ಆದಾಗ್ಯೂ, ಕಾರ್ಯಕರ್ತರು ಪ್ರತಿಭಟನೆ ಮುಂದುವರೆಸಿದ ನಂತರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.