ಕೇಂದ್ರ ಸಚಿವ ಸೋಮಣ್ಣ. 
ರಾಜ್ಯ

ಉಪನಗರ ರೈಲು ಯೋಜನೆ: 2026ರ ಡಿಸೆಂಬರ್‌ ವೇಳೆಗೆ ಎರಡು ಕಾರಿಡಾರ್‌ ಕಾಮಗಾರಿ ಪೂರ್ಣ..!

ಉಪನಗರ ರೈಲು ಯೋಜನೆಯ ಒಟ್ಟು ನಾಲ್ಕು ಕಾರಿಡಾರ್‌ಗಳಿಗೆ ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಶಂಕುಸ್ಥಾಪನೆ ನೆರವೇರಿಸಿದ್ದರು. ನಿಗದಿತ ಅವಧಿಯ ಒಳಗೆ 2 ಮತ್ತು 4ನೇ ಕಾರಿಡಾರ್‌ ಯೋಜನೆಗಳನ್ನು ಉದ್ಘಾಟಿಸಲಾಗುವುದು.

ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆಗಳ ಮೊದಲ ಹಂತದ ಕಾಮಗಾರಿ 2026 ಡಿಸೆಂಬರ್‌ನಲ್ಲಿ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಸೋಮವಾರ ಮಾಹಿತಿ ನೀಡಿದರು.

ಉಪನಗರ ರೈಲ್ವೆ ಯೋಜನೆ ಮತ್ತು ರಾಜ್ಯದ ವಿವಿಧ ರೈಲ್ವೆ ಯೋಜನೆಗಳ ಕುರಿತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಜೊತೆ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಕೇಂದ್ರ ಸಚಿವರು, ಚಿಕ್ಕಬಾಣಾವರ- ಬೈಯ್ಯಪ್ಪನಹಳ್ಳಿ (25 ಕಿ.ಮೀ– ಕಾರಿಡಾರ್‌-2 ) ಮತ್ತು ಹೀಲಲಗಿ- ರಾಜಾನುಕುಂಟೆ (46.88 ಕಿ.ಮೀ– ಕಾರಿಡಾರ್‌-4 ) ಉಪನಗರ ರೈಲ್ವೆ ಯೋಜನೆಗಳನ್ನು 2026ರ ಡಿಸೆಂಬರ್‌ ವೇಳೆಗೆ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು ಎಂದು ಹೇಳಿದರು.

ಉಪನಗರ ರೈಲು ಯೋಜನೆಯ ಒಟ್ಟು ನಾಲ್ಕು ಕಾರಿಡಾರ್‌ಗಳಿಗೆ ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಶಂಕುಸ್ಥಾಪನೆ ನೆರವೇರಿಸಿದ್ದರು. ನಿಗದಿತ ಅವಧಿಯ ಒಳಗೆ 2 ಮತ್ತು 4ನೇ ಕಾರಿಡಾರ್‌ ಯೋಜನೆಗಳನ್ನು ಉದ್ಘಾಟಿಸಲಾಗುವುದು. ಬಳಿಕ ಇತರ ಎರಡು ಕಾರಿಡಾರ್‌ಗಳ ಕುರಿತು ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.

ಬೆಂಗಳೂರು ಮೆಟ್ರೊ, ಉಪನಗರ ರೈಲು ಯೋಜನೆ ಮತ್ತು ರೈಲ್ವೆ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕೆಲಸ ಮಾಡಬೇಕಾಗಿದೆ. ಒಂದಕ್ಕೊಂದು ಸ್ಪರ್ಧೆವೊಡ್ಡಿಕೊಳ್ಳುವುದರ ಬದಲು, ಎಲ್ಲಿ ಯಾರ ಸೇವೆ ಇಲ್ಲವೊ ಅಲ್ಲಿ ಮತ್ತೊಬ್ಬರು ಸೇವೆ ನೀಡುವಂತಾಗಲಿ ಎಂದರು.

ಇದೇ ವೇಳೆ ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ರೈಲ್ವೆ ಬೋಗಿಗಳನ್ನು ಉತ್ಪಾದಿಸಿ, ಸರಬರಾಜು ಮಾಡಲು ಕೆ-ರೈಡ್ ಟೆಂಡರ್‌ ಕರೆದಿದ್ದು, ಯಾವ ಸಂಸ್ಥೆಯೂ ಇದರಲ್ಲಿ ಭಾಗವಹಿಸಿಲ್ಲ. ಹೀಗಾಗಿ ಈ ವಿಷಯದಲ್ಲಿ ರೈಲ್ವೆಯ ನೆರವು ನೀಡಬೇಕೆನ್ನುವ ಸಚಿವ ಎಂ.ಬಿ.ಪಾಟೀಲ್ ಅವರ ಮನವಿಗೆ ಸ್ಪಂದಿಸಿದ ಸೋಮಣ್ಣ ಅವರು, ಆದಷ್ಟು ಬೇಗ ದೆಹಲಿಯಲ್ಲಿ ಸಭೆ ಆಯೋಜಿಸಿ, ಈ ಬಗ್ಗೆ ಪರಿಹಾರ ಸೂಚಿಸುವುದಾಗಿ ಅವರು ಭರವಸೆ ನೀಡಿದರು.

2026ರ ಅಂತ್ಯದಲ್ಲಿ ಎರಡೂ ಕಾರಿಡಾರ್ ಕಾಮಗಾರಿ ಮುಗಿಯಲು ಯೋಜನೆ ರೂಪಿಸಲಾಗಿದೆ. ಅದಕ್ಕಿಂತ ಕನಿಷ್ಠ ಆರು ತಿಂಗಳು ಮೊದಲು ರೈಲ್ವೆ ಬೋಗಿಗಳ ಸರಬರಾಜು ಆಗಬೇಕು. ಇಲ್ಲದಿದ್ದರೆ ಆ ವೇಳೆಗೆ ರೈಲ್ವೆ ಸಂಚಾರ ಆರಂಭಿಸಲು ಕಷ್ಟ ಆಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಇದರ ಗಂಭೀರತೆಯನ್ನು ಗಮನಿಸಿ, ತಕ್ಷಣ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಬೆಂಗಳೂರಿನ ನೆರೆಹೊರೆಯ ನಗರ/ಪಟ್ಟಣಗಳಿಗೆ ಸಂಪರ್ಕ ಕಲ್ಪಿಸಲು ಉಪನಗರ ರೈಲ್ವೆ ಯೋಜನೆಯ ವಿಸ್ತರಣೆ ಅಗತ್ಯ ಇದೆ. ಬೆಂಗಳೂರಿನಿಂದ ಸಮೀಪದ ತುಮಕೂರು, ಮೈಸೂರು, ಮಾಗಡಿ, ಗೌರೀಬಿದನೂರು, ಕೋಲಾರ ನಗರಗಳಿಗೆ ಸಂಪರ್ಕ ಕಲ್ಪಿಸುವ ಬಗ್ಗೆಯೂ ಚರ್ಚೆ ಆಗಿದೆ. ಇದನ್ನು ಯಾವ ರೀತಿ ಕೈಗೆತ್ತಿಕೊಳ್ಳಬೇಕು ಎಂಬುದರ ಬಗ್ಗೆಯೂ ಅಧಿಕಾರಿಗಳ ಮಟ್ಟದಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು.

ಬೆಂಗಳೂರು- ಯುಲಂಹಕ- ದೇವನಹಳ್ಳಿ ನಡುವೆ ಸಂಪರ್ಕ ಕಲ್ಪಿಸುವ ಕಾರಿಡಾರ್‌-1 ಉಪನಗರ ರೈಲ್ವೆ ಯೋಜನೆಯನ್ನು ಚಿಕ್ಕಬಳ್ಳಾಪುರ ಮೂಲಕ ಕೋಲಾರಕ್ಕೆ ಸಂಪರ್ಕಿಸುವ ಬದಲು ದೇವನಹಳ್ಳಿಯಿಂದಲೇ ನೇರವಾಗಿ ಕೋಲಾರಕ್ಕೆ ಸಂಪರ್ಕ ಕಲ್ಪಿಸುವ ಸಾಧ್ಯತೆ ಬಗ್ಗೆ ಚಿಂತಿಸಲಾಗುವುದು ಎಂದರು.

ಉಪನಗರ ರೈಲ್ವೆ ಯೋಜನೆಯನ್ನು ಬೆಂಗಳೂರು ಸುತ್ತಲಿನ ವರ್ತುಲ ರೈಲ್ವೆ ಹಳಿಗೆ ಸಂಪರ್ಕ ಕಲ್ಪಿಸುವ ಬಗ್ಗೆಯೂ ಈ ಸಭೆಯಲ್ಲಿ ಚರ್ಚಿಸಲಾಯಿತು. ಇದೊಂದು ಒಳ್ಳೆಯ ಪರಿಕಲ್ಪನೆ ಆಗಿದ್ದು, ಇದರಿಂದ ಜನರಿಗೆ ಹೆಚ್ಚು ಅನುಕೂಲ ಆಗಲಿದೆ ಎಂದು ಹೇಳಿದರು.

ಸುಮಾರು 21,000 ಕೋಟಿ ವೆಚ್ಚದ 281 ಕಿ.ಮೀ ವರ್ತುಲ ರೈಲ್ವೆ ಯೋಜನೆಗೆ ರೈಲ್ವೆ ಮಂಡಳಿ ಒಪ್ಪಿಗೆ ನೀಡಿದ್ದು, ಉಪನಗರ ರೈಲುಗಳನ್ನೂ ಇದರ ಜತೆ ಸಂಪರ್ಕ ಮಾಡುವುದು ಹೆಚ್ಚು ಸೂಕ್ತ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ಈ ವೇಳೆ ಕೆ-ರೈಡ್‌ ಸಂಸ್ಥೆ ಮುಖ್ಯಸ್ಥರು, ಬಿಬಿಎಂಪಿ ಹಾಗೂ ಇಲಾಖೆ ಅಧಿಕಾರಿಗಳೂ ಉಪಸ್ಥಿತರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT