ರಾಜ್ಯ

2010 ಡಿನೋಟಿಫಿಕೇಷನ್ ಪ್ರಕರಣ: BSY-HDK ವಿರುದ್ಧ ದಾಖಲೆ ಬಿಡುಗಡೆ, ಕೇಂದ್ರ ಸಚಿವರ ರಾಜೀನಾಮೆಗೆ ಕಾಂಗ್ರೆಸ್ ಪಟ್ಟು

ತಪ್ಪು ಮಾಡಿದವರಿಗೆ ರಾಜ್ಯಪಾಲರು ರಕ್ಷಣೆ ನೀಡುತ್ತಿದ್ದಾರೆ. ಇವರು ಮಾಡಿದ ಅಕ್ರಮ ಒಂದೆರಡಲ್ಲ, ಇವರ ಹಲವಾರು ಅಕ್ರಮಗಳಲ್ಲಿ ಮತ್ತೊಂದು ದಾಖಲೆ ಇದು.

ಬೆಂಗಳೂರು: ವಾಲ್ಮೀಕಿ ನಿಗಮ ಹಾಗೂ ಮುಡಾ ಹಗರಣ ಪ್ರಕರಣವನ್ನಿಟ್ಟುಕೊಂಡು ಸರ್ಕಾರದ ವಿರುದ್ಧ ಹರಿಹಾಯುತ್ತಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್ ಡಿನೋಟಿಫಿಕೇಶನ್ ಪ್ರಕರಣದ ಆಸ್ತ್ರವನ್ನು ಪ್ರಯೋಗಿಸಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಹೆಚ್'ಡಿ.ಕುಮಾರಸ್ವಾಮಿ ವಿರುದ್ಧ ಶುಕ್ರವಾರ ದಾಖಲೆಗಳನ್ನು ಬಿಡುಗಡೆ ಮಾಡಿದೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಸಚಿವರಾದ ಕೃಷ್ಣ ಭೈರೇಗೌಡ, ದಿನೇಶ್ ಗುಂಡೂರಾವ್ ಮತ್ತು ಸಚಿವ ಸಂತೋಷ್ ಲಾಡ್ ಅವರು ಬಿಎಸ್​ವೈ ಹಾಗೂ ಎಚ್​ಡಿಕೆ ವಿರುದ್ಧದ ಅಕ್ರಮ ಡಿನೋಟಿಫಿಕೇಷನ್​ಗೆ ಸಂಬಂಧಿಸಿದಂತೆ ಕೆಲ ದಾಖಲೆಗಳನ್ನು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಕೃಷ್ಣಬೈರೇಗೌಡ ಅವರು, ಕೆಲವು ಪ್ರಕರಣಗಳಲ್ಲಿ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ತಪ್ಪು ಮಾಡಿದವರಿಗೆ ರಾಜ್ಯಪಾಲರು ರಕ್ಷಣೆ ನೀಡುತ್ತಿದ್ದಾರೆ. ಇವರು ಮಾಡಿದ ಅಕ್ರಮ ಒಂದೆರಡಲ್ಲ, ಇವರ ಹಲವಾರು ಅಕ್ರಮಗಳಲ್ಲಿ ಮತ್ತೊಂದು ದಾಖಲೆ ಇದು. ಆಸ್ತಿ ಇರುವುದು ಮಠದ ಹಳ್ಳಿ ಗಂಗೇನಹಳ್ಳಿ ಬಡಾವಣೆ 7/1ಬಿ, ಸಿ ಹಾಗೂ ಡಿ ಸರ್ವೆ ನಂಬರ್ ನಲ್ಲಿ 1.11 ಎಕರೆ ಜಮೀನು ಬಿಡಿಎಗೆ ಭೂಸ್ವಾಧಿನಗೊಂಡಿರುತ್ತದೆ. ಇದನ್ನು ಡಿನೋಟಿಫೈ ಮಾಡಬೇಕು ಅಂತ ಯಾರೋ ರಾಜಶೇಖರಯ್ಯ ಅನ್ನೋರು ಅರ್ಜಿ ಕೊಡುತ್ತಾರೆ. ದಾರಿಯಲ್ಲಿ ಹೋಗುವ ಯಾರೋ ದಾಸಯ್ಯ ಜಮೀನಿಗೆ ಸಂಬಂಧವೇ ಇಲ್ಲದ ರಾಜಶೇಖರಯ್ಯ ಅನ್ನುವವರ ಅರ್ಜಿ ಕೊಡುತ್ತಾರೆ. 22.08.2007 ರಲ್ಲಿ ಅರ್ಜಿ ಬಂದ ಅದೇ ದಿನ ಸಿಎಂ ಆಗಿದ್ದ ಎಚ್ಡಿಕೆ ಡಿನೋಟಿಫೈ ಮಾಡಲು ಸೂಚಿಸುತ್ತಾರೆ ಎಂದು ಗಂಭೀರ ಆರೋಪ ಮಾಡಿದರು.

ಜಮೀನಿನ ಅಸಲಿ ಮಾಲೀಕರು 21 ಜನರಿದ್ದಾರೆ. 30 ವರ್ಷಗಳ ಹಿಂದೆಯೇ ಈ ಜಮೀನೂ ಭೂಸ್ವಾಧೀನ ಆಗಿತ್ತು. ಯಾವುದು ಭೂ ಸ್ವಾಧೀನ ಆಗಿತ್ತೋ ಆ ಜಮೀನಿಗೆ ಕುಮಾರಸ್ವಾಮಿ ಅತ್ತೆ ಅನಿತಾ ಕುಮಾರಸ್ವಾಮಿ ತಾಯಿ ಜಿಪಿಎ ಮಾಡಿಕೊಳ್ಳುತ್ತಾರೆ. ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಡಿನೋಟಿಫೈ ಮಾಡಲು ಬರುವುದಿಲ್ಲ ಎಂದು ಫೈಲ್ ತಿರಸ್ಕಾರ ಮಾಡುತ್ತಾರೆ. ಆದರೂ ಅಂದಿನ ಸಿಎಂ ಕುಮಾರಸ್ವಾಮಿ ಡಿನೋಟಿಫೈ ಮಾಡುವಂತೆ ಸೂಚಿಸುತ್ತಾರೆ. ಬಳಿಕ ಸರ್ಕಾರ ಬದಲಾಗಿ ಯಡಿಯೂರಪ್ಪ ಸಿಎಂ ಆಗುತ್ತಾರೆ. ಆಗ ಮತ್ತೆ ಅದೇ ಫೈಲ್ ಸಿಎಂ ಯಡಿಯೂರಪ್ಪ ಕೈಗೆ ಬರುತ್ತದೆ. ಕಾನೂನು ಗಾಳಿಗೆ ತೂರಿ ಯಡಿಯೂರಪ್ಪ 2010 ಜೂನ್ 5ರಂದು ರಂದು ಭೂಸ್ವಾಧೀನದಿಂದ ಕೈ ಬಿಡುತ್ತಾರೆ ಎಂದು ಹೇಳಿದರು.

ಡಿ ನೋಟಿಫಿಕೇಷನ್ ಆದ ಒಂದೇ ತಿಂಗಳಿಗೆ ಕುಮಾರಸ್ವಾಮಿ ಬಾಮೈದ ಚನ್ನಪ್ಪ ಎಂಬುವವರಿಗೆ ಶುದ್ದ ಕ್ರಯಪತ್ರ ಆಗುತ್ತದೆ. ಹೀಗೆ ಅಕ್ರಮವಾಗಿ ಡಿನೋಟಿಫೈ ಆದ ಜಮೀನು ಕುಮಾರಸ್ವಾಮಿ ಕುಟುಂಬಕ್ಕೆ ಸೇರಿದೆ. ಇದು ವ್ಯವಸ್ಥಿತ ವಂಚನೆ ಹೌದೋ ಅಲ್ವೋ? ಇದು ನೇರವಾಗಿ ಕುಮಾರಸ್ವಾಮಿ ಆದೇಶದಿಂದಲೇ ಆಗಿದೆ. ಕುಮಾರಸ್ವಾಮಿ ಪುಟಫ್ ಮಾಡಿದ ಫೈಲ್ ಗೆ ಯಡಿಯೂರಪ್ಪ ಸಹಿ ಮಾಡಿದ್ದಾರೆ. ಸಾರ್ವಜನಿಕ ಸ್ವತ್ತನ್ನು ತಂತ್ರಗಾರಿಕೆ ಮಾಡಿ ಲೂಟಿ ಮಾಡಿದ್ದೀರ ಕುಮಾರಸ್ವಾಮಿಯವರೇ ಎಂದು ಆರೋಪಿಸಿದರು.

ಲೋಕಾಯುಕ್ತದವರು ಈ ಪ್ರಕರಣ ತನಿಖೆ ನಡೆಸುತ್ತಿದ್ದಾರೆ. ಲೋಕಾಯುಕ್ತ ತಕ್ಷಣ ಪ್ರಕರಣದ ತನಿಖೆ ಶೀಘ್ರ ಮಾಡಬೇಕು. ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ವಿರುದ್ದ ಎಫ್​ಐಆರ್ ದಾಖಲಾಗಿ ಒಂಭತ್ತು ವರ್ಷಗಳಾಗಿದೆ. ಹೈ ಕೋರ್ಟ್ ತನಿಖೆಗೆ ಸೂಚನೆ ನೀಡಿದ್ದರೂ ಲೋಕಾಯುಕ್ತ ಯಾಕೆಸುಮ್ಮನೇ ಇದೆ? ಎಂದರು.

ಬಳಿಕ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್ ಅವರು, 100 ಕೋಟಿ ಮೌಲ್ಯದ ಆಸ್ತಿ (ಮಾರುಕಟ್ಟೆ ಮೌಲ್ಯ) ಲೂಟಿಯಾಗಿದೆ, ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ನಡುವಿನ ಪಾಲು ಎಷ್ಟು ಎಂದು ಪ್ರಶ್ನಿಸಿದರು.

ಇದು ಹಳೆಯ ಕೇಸ್ ಅಲ್ಲ, ಹಾಲಿ ಪ್ರಕರಣ. ನಾವೇನೋ ಸೃಷ್ಟಿ ಮಾಡಿ ಹುಡುಕಾಡಿ ದಾಖಲೆ ಮಾಡಿಲ್ಲ. ಯಡಿಯೂರಪ್ಪಗೆ ಹೈಕೋರ್ಟ್ 25 ಸಾವಿರ ರೂಪಾಯಿ ದಂಡ ವಿಧಿಸಿದೆ. ನಿಮ್ಮ ಬಾಮೈದಗೆ ಹೇಗೆ ಜಮೀನು ಸಿಕ್ತು ಅದಕ್ಕೆ ಕುಮಾರಸ್ವಾಮಿ ಉತ್ತರ ನೀಡಬೇಕು. 60 ಲಕ್ಷಕ್ಕೆ ಹೇಗೆ ಕುಮಾರಸ್ವಾಮಿ ಅತ್ತೆ ಜಮೀನು ಖರೀದಿ ಮಾಡಿದ್ರಿ? ಜಮೀನು ನಿಮ್ಮ ಬಾಮೈದನ ಹೆಸರಲ್ಲಿ ಇದೆ ಹೇಗೆ? ಎಂದು ಪ್ರಶ್ನಿಸಿದರು.

ಸಚಿವ ಸಂತೋಷ್ ಲಾಡ್ ಅವರು ಮಾತನಾಡಿ, ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲದಿದ್ದರೂ ವಿರೋಧ ಪಕ್ಷಗಳು ಸಿಎಂ ರಾಜೀನಾಮೆಗೆ ಒತ್ತಾಯಿಸುತ್ತಿವೆ. ಕುಮಾರಸ್ವಾಮಿ ಅವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು. ಇದೇ ವೇಳೆ ಈ ಪ್ರಕರಣದಲ್ಲಿ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ರಾಜ್ಯಪಾಲರಿಗೆ ಪತ್ರ ಬರೆದು ತನಿಖೆ ನಡೆಸುವಂತೆ ಸೂಚಿಸಬೇಕು ಎಂದು ಆಗ್ರಹಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

BMTC ಬಸ್ ಚಾಲಕನಿಗೆ ಫಿಡ್ಸ್, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆಯಲ್ಲಿ ಸರಣಿ ಅಪಘಾತ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

SCROLL FOR NEXT