ಬೆಳಗಾವಿ: ಪಂಚಮಸಾಲಿ ಸಮುದಾಯಕ್ಕೆ ‘2ಎ ಮೀಸಲಾತಿ’ ವಿಚಾರ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಲಿಂಗಾಯತ ಮುಖಂಡರೊಂದಿಗೆ ಅಕ್ಟೋಬರ್ 15ರಂದು ಸಭೆ ನಡೆಸಿ, ಮಾತುಕತೆ ನಡೆಸಲಿದ್ದಾರೆಂದು ತಿಳಿದುಬಂದಿದೆ.
ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ‘2ಎ ಮೀಸಲಾತಿ’ ವಿಳಂಬವಾಗುತ್ತಿರುವ ಕುರಿತು ಚರ್ಚಿಸಲು ಬೆಳಗಾವಿಯಲ್ಲಿ ಭಾನುವಾರ ಲಿಂಗಾಯತ ವಕೀಲರ ರಾಜ್ಯಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.
ಈ ಸಮಾವೇಶದಲ್ಲಿ ಮಾತನಾಡಿದ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ, , ಸರ್ಕಾರದಲ್ಲಿ ಯಾರಿದ್ದಾರೆಂದು ನೋಡಿಕೊಂಡು ನಾವು ಪ್ರತಿಭಟನೆ ಮಾಡುವುದಿಲ್ಲ. ರಾಜಕೀಯ ಹೋರಾಟವನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಿ. ಮೀಸಲಾತಿಗಾಗಿ ಹೋರಾಟ ಮಾಡುವಾಗ ರಾಜಕೀಯವನ್ನು ತರಬೇಡಿ. ನಾವು ಸಾಮಾನ್ಯವಾಗಿ ಕೋರ್ಟ್ ಕಟ್ಟೆ ಹತ್ತುವುದಿಲ್ಲ. ಒಮ್ಮೆ ಹತ್ತಿದರೆ ಸರಕಾರವನ್ನು ಸೋಲಿಸುವವರೆಗೆ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.
ಹೋರಾಟಕ್ಕಾಗಿ ಸಮುದಾಯದ ಪ್ರತಿಯೊಬ್ಬರಿಂದಲೂ ಸಹಾಯವನ್ನು ಕೇಳಿದ್ದೇನೆ. ಈಗ ವಕೀಲರ ಬಳಿಗೆ ಬಂದಿದ್ದೇನೆ. ನಾವು ಒಗ್ಗಟ್ಟಾಗಿದ್ದೇವೆ, ಮೀಸಲಾತಿ ನೀಡುವವರೆಗೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂಬ ಸಂದೇಶವನ್ನು ಸರಕಾರಕ್ಕೆ ರವಾನಿಸಬೇಕು. ಸಮುದಾಯದ ಶಾಸಕರು ಮತ್ತು ಸಚಿವರು ನಮ್ಮ ಬೇಡಿಕೆಗಳನ್ನು ನಿರ್ಲಕ್ಷಿಸಬಾರದು. ಶಾಸಕರಾದ ವಿನಯ್ ಕುಲಕರ್ಣಿ, ಶಿವಶಂಕರ್, ಯತ್ನಾಳ್ ಕೂಡ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ಮೀಸಲಾತಿ ನೀಡಿದ್ದರೆ ಈಗಿನ ಪರಿಸ್ಥಿತಿ ಎದುರಿಸಬೇಕಾಗುತ್ತಿರಲಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ಸಮುದಾಯದವರ ಪ್ರತಿಭಟನೆಯೇ ಪ್ರಮುಖ ಕಾರಣ. ಬೊಮ್ಮಾಯಿ ಅವರ ತಪ್ಪಿನಿಂದಾಗಿ ಸಿದ್ದರಾಮಯ್ಯ ಸಿಎಂ ಆದರು ಎಂದು ತಿಳಿಸಿದರು.
ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮಾತನಾಡಿ, ‘ಪಂಚಮಸಾಲಿ ಲಿಂಗಾಯತರಿಗೆ 2ಎ ಮೀಸಲಾತಿ ನೀಡುವ ಕುರಿತು ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ತೀರ್ಮಾನಿಸಬೇಕು. ಇಲ್ಲವಾದಲ್ಲಿ ಸುವರ್ಣಸೌಧ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ನಮ್ಮ ಮನವಿಗೆ ಸಿಎಂ ಸ್ಪಂದಿಸದಿದ್ದರೆ ಮುಂದಿನ ಹೋರಾಟ ಉಗ್ರವಾಗಲಿದೆ. ಬೆಳಗಾವಿ ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯ ಸುವರ್ಣ ವಿಧಾನಸೌಧದ ಒಳಗೆ ಬರದಂತೆ ನೋಡಿಕೊಳ್ಳೋಣ. ಮೀಸಲಾತಿ ಕೊಡಲು ಸಾಧ್ಯವೋ ಅಥವಾ ಇಲ್ಲವೋ ಎಂಬುದನ್ನು ಸಿಎಂ ಸಿದ್ದರಾಮಯ್ಯ ನೇರವಾಗಿ ಹೇಳಲಿ. ನಮ್ಮ ಸಮಾಜದ ಬಗ್ಗೆ ಸಿಎಂಗೆ ಅಲರ್ಜಿ ಇದೆ. ಮೀಸಲಾತಿ ಕೊಡುವುದು ಅನುಮಾನ. ಅವರು ಮೀಸಲಾತಿ ಕೊಡದೇ ಇದ್ದರೆ ಮಹಾರಾಷ್ಟ್ರದಲ್ಲಿ ನಡೆದ ಮಾದರಿಯಲ್ಲಿ ಇಲ್ಲೂ ಹೋರಾಟ ಮಾಡೋಣ ಎಂದು ಕರೆ ನೀಡಿದರು.
ಕಳೆದ ಅಧಿವೇಶನದಲ್ಲಿ ದೊಡ್ಡ ಷಡ್ಯಂತ್ರ ನಡೆಸಲಾಗಿತ್ತು. ಲಿಂಗಾಯತ ಮೀಸಲಾತಿ ಕುರಿತು ಮಾತನಾಡಲು ಶಾಸಕರಿಗೆ ಅವಕಾಶ ನೀಡದಂತೆ ಮಾಡಲಾಗಿತ್ತು. ಆದರೆ, ಸ್ಪೀಕರ್ ಅನುಮತಿ ನೀಡಿದಂತೆ ನಾನು ಮಾತನಾಡಿದ್ದೇನೆ. ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಉನ್ನತ ನಾಯಕರು ಲಿಂಗಾಯತರಿಗೆ ‘2ಎ ಮೀಸಲಾತಿ’ಗೆ ಅಡ್ಡಿಯಾಗಿದ್ದಾರೆ, ಆದರೆ ಕೇಂದ್ರ ಸಚಿವ ಅಮಿತ್ ಶಾ ಗ್ರೀನ್ ಸಿಗ್ನಲ್ ನೀಡಿದ್ದರು ಎಂದು ಹೇಳಿದರು.
ಸಭೆ ನಡುವಲ್ಲೇ ಸಿಎಂ ಕರೆ
ಈ ನಡುವೆ ಸಭೆ ನಡುವಲ್ಲೇ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರಿಗೆಗೆ ಕರೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮೀಸಲಾತಿ ಕುರಿತು ಚರ್ಚಿಸಲು ಅ.15ರಂದು ಪಂಚಮಸಾಲಿ ಮುಖಂಡರೊಂದಿಗೆ ಸಭೆ ನಡೆಸುವುದಾಗಿ ಭರವಸೆ ನೀಡಿದರು.
ಮೆರವಣಿಗೆಯಲ್ಲಿ ಪಾಲ್ಗೊಳ್ಳದಂತೆ ಯತ್ನಾಳ್‌ಗೆ ನಿಷೇಧ
ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಲು ಭಾನುವಾರ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ವಕೀಲರ ಪರಿಷತ್ ಸಭೆ ನಂತರ ನಡೆಯುವ ಮೆರವಣಿಗೆಯಲ್ಲಿ ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಪಾಲ್ಗೊಳ್ಳುವಿಕೆಗೆ ಜಿಲ್ಲಾಡಳಿತ ನಿಷೇಧಿಸಿತ್ತು.
ನಗರದಲ್ಲಿ ಭಾನುವಾರ ಈದ್-ಮಿಲಾದ್ ಮೆರವಣಿಗೆ ನಡೆಯುವ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಈ ಆದೇಶ ಹೊರಡಿಸಿದ್ದರು.