ಬೆಂಗಳೂರು: ನಗರದ ವೈಯಾಲಿಕಾವಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರನ್ನು ಕೊಂದು 50 ತುಂಡುಗಳಾಗಿ ಕತ್ತರಿಸಿ ಫ್ರೀಡ್ಜ್ ನಲ್ಲಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ಪರ ಪುರುಷರೊಂದಿಗೆ ಆಕೆ ಹೊಂದಿದ್ದ ಅಕ್ರಮ ಸಂಬಂಧದಿಂದಲೇ ಕೊಲೆಯಾಗಿರಬಹುದು ಎಂದು ಮಹಾಲಕ್ಷ್ಮಿ ವಿಚ್ಚೇದಿತ ಗಂಡ ಹೇಮಂತ್ ದಾಸ್ ಹೇಳಿದ್ದಾರೆ.
ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಶವಾಗಾರದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸುಮಾರು 25 ದಿನಗಳ ಹಿಂದೆ ಕೊನೆಯದಾಗಿ ಆಕೆಯನ್ನು ನೋಡಿದ್ದೆ. ಮಗಳನ್ನು ನೋಡಲು ಆಕೆ ನನ್ನ ಅಂಗಡಿಗೆ ಬಂದಿದ್ದಳು. ನಾನು ಮತ್ತು ಮಹಾಲಕ್ಷ್ಮಿ ಆರು ವರ್ಷದ ಹಿಂದೆ ವಿವಾಹವಾಗಿದ್ದೇವು. ಆದರೆ ಭಿನ್ನಾಭಿಪ್ರಾಯದಿಂದ 9 ತಿಂಗಳಿನಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ ಎಂದು ತಿಳಿಸಿದರು.
ವಿವಾದದ ಹಿನ್ನೆಲೆಯಲ್ಲಿ ಮಹಾಲಕ್ಷ್ಮಿ ಡಿಸೆಂಬರ್ ನಲ್ಲಿ ನೆಲಮಂಗಲ ಪೊಲೀಸ್ ಠಾಣೆಯಲ್ಲಿ ನನ್ನ ವಿರುದ್ಧ ಕೇಸ್ ದಾಖಲಿಸಿದ್ದಳು. ನಾವು ಪ್ರತ್ಯೇಕಗೊಂಡಾಗ ಆಕೆ ವೈಯಾಲಿಕಾವ್ ನಲ್ಲಿ ಒಬ್ಬಳೇ ವಾಸಿಸುತ್ತಿದ್ದಳು. ಶುಕ್ರವಾರ ಮನೆ ಮಾಲೀಕರು ಕರೆ ಮಾಡಿ, ಆಕೆ ವಾಸಿಸುತ್ತಿದ್ದ ಮೊದಲ ಮಹಡಿಯಿಂದ ಕೆಟ್ಟ ವಾಸನೆ ಬರುತ್ತಿರುವುದಾಗಿ ಹೇಳಿದರು. ಮಹಾಲಕ್ಷ್ಮಿ ತಾಯಿಗೆ ನಾನು ಮಾಹಿತಿ ನೀಡಿದ್ದೆ. ಅವರು ಶನಿವಾರ ಮನೆ ಬಳಿಗೆ ಬಂದಾಗ ಆಕೆಯ ದೇಹವನ್ನು ತುಂಡಾಗಿ ಕತ್ತರಿಸಿ ಫ್ರೀಡ್ಜ್ ನಲ್ಲಿ ಇಟ್ಟಿರುವುದು ಕಂಡುಬಂದಿತು ಎಂದು ಹೇಳಿದರು.
ನೆಲಮಂಗಲದ ಸಲೂನ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಉತ್ತರಕನ್ನಡ ಮೂಲದ ಅಶ್ರಫ್ ಎಂಬಾತನ ಜತೆ ಮಹಾಲಕ್ಷ್ಮಿ ಅಕ್ರಮ ಸಂಬಂಧ ಹೊಂದಿದ್ದಳು. ಕೊಲೆಯ ಹಿಂದೆ ಅಶ್ರಫ್ ಪಾತ್ರವಿದೆ ಎಂದು ದಾಸ್ ಆರೋಪಿಸಿದ್ದಾರೆ. ಕೆಲ ತಿಂಗಳ ಹಿಂದೆ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಅಶ್ರಫ್ ವಿರುದ್ಧ ಮಹಾಲಕ್ಷ್ಮಿ ಬೆದರಿಕೆ ದೂರು ದಾಖಲಿಸಿದ್ದರು.
ಸೆಪ್ಟೆಂಬರ್ 4 ರಂದು ಕೊನೆಯದಾಗಿ ವಾಟ್ಸಾಪ್ ನಲ್ಲಿ ಮಾತುಕತೆ ನಡೆಸಿದ್ದಾಗಿ ಆಕೆಯ ಕಿರಿಯ ಸಹೋದರ ಹೇಳಿದರು.. ಸುಮಾರು ಒಂದು ವರ್ಷದಿಂದ ಮಹಾಲಕ್ಷ್ಮಿಯೊಂದಿಗೆ ಮಾತನಾಡುತ್ತಿರಲಿಲ್ಲ ಎಂದು ಹೇಳಿದ ಆಕೆಯ ಸಹೋದರಿ ಸಯೀದಾ, ನ್ಯಾಯಕ್ಕಾಗಿ ಕುಟುಂಬ ಒತ್ತಾಯಿಸುತ್ತಿರುವುದಾಗಿ ಹೇಳಿದರು.
ಪ್ರಕರಣದ ತನಿಖೆಗಾಗಿ ಪೊಲೀಸರು ಐದು ತಂಡಗಳನ್ನು ರಚಿಸಿದ್ದಾರೆ. ಅವರು ಸಂತ್ರಸ್ತೆಗೆ ಹತ್ತಿರವಾಗಿದ್ದವರನ್ನು ಪ್ರಶ್ನಿಸುತ್ತಿದ್ದಾರೆ ಮತ್ತು 150 ಕ್ಕೂ ಹೆಚ್ಚು ಸಿಸಿಟಿವಿಗಳಲ್ಲಿ ಸೆರೆಹಿಡಿಯಲಾದ ದೃಶ್ಯಗಳನ್ನು ವಿಶ್ಲೇಷಿಸುತ್ತಿದ್ದಾರೆ. ಮಹಾಲಕ್ಷ್ಮಿ ಅವರ ಮೊಬೈಲ್ ಫೋನ್ ಇನ್ನೂ ಪೊಲೀಸರಿಗೆ ಪತ್ತೆಯಾಗಿಲ್ಲ, ಇದನ್ನು ಹಂತಕ ತೆಗೆದುಕೊಂಡು ಹೋಗಿರುವ ಸಾಧ್ಯತೆಯಿದೆ. ಅಲ್ಲದೆ, ಕೊಲೆ ಮಾಡಿ ಶವವನ್ನು ಮತ್ತಷ್ಟು ವಿರೂಪಗೊಳಿಸಲು ಬಳಸಿದ ಆಯುಧ ಕೂಡ ಇನ್ನೂ ಪತ್ತೆಯಾಗಿಲ್ಲ. ಪೊಲೀಸರು ಭಾನುವಾರ ಕುಟುಂಬ ಸದಸ್ಯರ ಹೇಳಿಕೆ ದಾಖಲಿಸಿಕೊಂಡಿದ್ದಾರೆ.