ಸಂಗ್ರಹ ಚಿತ್ರ 
ರಾಜ್ಯ

ಮುಡಾ ಹಗರಣ: ದಶಕಗಳಿಂದ ಬೆಳೆದು ಬಂದ ಹಾದಿ, ಕೆದಕಿದಷ್ಟು ಆಳ!

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಅವರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಪ್ರಕರಣಕ್ಕೆ ಮೂರು ದಶಕಗಳ ಇತಿಹಾಸವಿದೆ.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಅವರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಪ್ರಕರಣಕ್ಕೆ ಮೂರು ದಶಕಗಳ ಇತಿಹಾಸವಿದೆ.

ಮುಡಾದಿಂದ ಸ್ವಾಧೀನಪಡಿಸಿಕೊಂಡಿರುವ ಅವರ ಜಮೀನಿಗೆ ಹೋಲಿಸಿದರೆ ಸಿದ್ದರಾಮಯ್ಯ ಅವರ ಪತ್ನಿ ಬಿಎಂ ಪಾರ್ವತಿ ಅವರಿಗೆ ಮೈಸೂರಿನ ಹೆಚ್ಚು ಮೌಲ್ಯ ಹೊಂದಿರುವ ಪ್ರದೇಶದಲ್ಲಿ ಪರಿಹಾರದ ನಿವೇಶನಗಳನ್ನು ಹಂಚಿಕೆ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಮುಡಾ ಪಾರ್ವತಿ ಅವರಿಗೆ 50:50 ಅನುಪಾತದಡಿ ಅವರ 3.16 ಎಕರೆ ಜಮೀನು ಬದಲಿಗೆ 14 ನಿವೇಶನಗಳನ್ನು ಮಂಜೂರು ಮಾಡಿತ್ತು.

ಆದರೆ, ಮೈಸೂರು ತಾಲೂಕಿನ ಕಸಬಾ ಹೋಬಳಿಯ ಕಾಸರೆ ಗ್ರಾಮದ ಸರ್ವೆ ನಂಬರ್ 464ರಲ್ಲಿನ ಈ 3.16 ಎಕರೆ ಜಮೀನಿನ ಮೇಲೆ ಪಾರ್ವತಿ ಅವರಿಗೆ ಯಾವುದೇ ಕಾನೂನು ಹಕ್ಕು ಇಲ್ಲ ಎಂದು ಆರೋಪಿಸಲಾಗಿದೆ.

31-10-1992ರಲ್ಲಿ ಈ ಗ್ರಾಮದಲ್ಲಿ 3 ಎಕರೆ 16 ಗುಂಟೆ ಜಾಗದ ಮಾಲೀಕರು ಜವರಯ್ಯ. ಇವರ ಜಮೀನನ್ನು ಮೈಸೂರು ನಗರಾಭಿದ್ಧಿ ಪ್ರಾಧಿಕಾರ ನೋಟಿಫೈ ಮಾಡಿ ವಶಪಡಿಸಿಕೊಳ್ಳುತ್ತಾರೆ. 18-05-1998ರಲ್ಲಿ ಈ ಜಮೀನನ್ನು ಡಿನೋಟಿಫಿಕೇಷನ್ ಆದಾಗ ಈ ಜಾಗ ಜವರಯ್ಯ ಅವರ ಹೆಸರಿನಲ್ಲೇ ಇರುತ್ತದೆ.

ಸಿದ್ದರಾಮಯ್ಯ ಅವರ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಅವರು 2004ರ ಆಗಸ್ಟ್‌ನಲ್ಲಿ ಈ 3.16 ಎಕರೆ 'ಕೃಷಿ' ಭೂಮಿಯನ್ನು ಮೂಲ ಜಮೀನು ಮಾಲೀಕನ ಪುತ್ರರಿಂದ ಖರೀದಿಸಿ, ಜುಲೈ 2005ರಲ್ಲಿ ಕೃಷಿಯೇತರ ಉದ್ದೇಶಕ್ಕೆ ಪರಿವರ್ತಿಸಿದ್ದರು. ಮಲ್ಲಿಕಾರ್ಜುನ ಸ್ವಾಮಿ ಅವರು ಸಿದ್ದರಾಮಯ್ಯ ಅವರ ಬಾಮೈದ. ಅಂದರೆ ಧರ್ಮಪತ್ನಿಯ ಅಣ್ಣ. ನಂತರ 3ಎಕರೆ 16 ಗುಂಟೆ ಜಾಗವನ್ನು ಪಾರ್ವತಮ್ಮ ಅವರಿಗೆ ದಾನಪತ್ರದ ಮೂಲಕ 2010ರಲ್ಲಿ ಈ ಜಮೀನನ್ನು ನೀಡುತ್ತಾರೆ.

ಆದರೆ 2001ರಲ್ಲಿಯೇ ಬಡಾವಣೆ ರಚನೆಯಾಗಿ ವಿವಿಧ ಜನರಿಗೆ ನಿವೇಶನ ಹಂಚಿಕೆಯಾಗಿರುವ ಜಮೀನನ್ನು 2004ರಲ್ಲಿ ಸಿದ್ದರಾಮಯ್ಯ ಬಾಮೈದ ಜಮೀನು ಖರೀದಿಸಿ ಪಾರ್ವತಿ ಅವರಿಗೆ ಹೇಗೆ ಉಡುಗೊರೆ ನೀಡಿದ್ದಾರೆ. ಹಾಗೆಯೇ 2005ರಲ್ಲಿ ಕೃಷಿಯೇತರವಾಗಿ ಪರಿವರ್ತನೆಯಾಗಲು ಡಿನೋಟಿಫೈ ಮಾಡಿದ ಭೂಮಿ ಹೇಗೆ 'ಕೃಷಿ' ಭೂಮಿಯಾಯಿತು ಎಂಬ ಪ್ರಶ್ನೆಗಳು ಎದ್ದಿದ್ದವು.

2014ರ ಜೂನ್‌ನಲ್ಲಿ ಮುಡಾ ತನ್ನ 3.16 ಎಕರೆ ಭೂಮಿಯನ್ನು ದೇವನೂರು ಲೇಔಟ್‌ ಆಗಿ ಅಭಿವೃದ್ಧಿಪಡಿಸಿ ನಿವೇಶನಗಳನ್ನು ಹಂಚಿರುವ ಕುರಿತು ತಿಳಿದ ಪಾರ್ವತಿ ಅವರು 2017ರಲ್ಲಿ ಮುಡಾಗೆ ಪತ್ರ ಬರೆದು ನಮ್ಮ ಗಮನಕ್ಕೆ ಬಾರದೆ ನಮ್ಮ ಜಮೀನನ್ನು ನಿವೇಶನ ಮಾಡಿ ಹೇಗೆ ಹಂಚಿಕೆ ಮಾಡಿದ್ದೀರಿ ಎಂದು ದೂರು ದಾಖಲಿಸುತ್ತಾರೆ. ಇವರ 3 ಎಕರೆ 16 ಗುಂಟೆ ಜಾಗದಲ್ಲಿ ಮುಡಾ ಅವರು 59 ನಿವೇಶನಗಳನ್ನು ಮಾಡಿ ಹಂಚಲಾಗಿರುತ್ತದೆ.

ಇದರ ಬೆನ್ನಲ್ಲೇ 2017ರ ಡಿಸೆಂಬರ್‌ನಲ್ಲಿ ಡಿನೋಟಿಫೈ ಮಾಡಿದ ಭೂಮಿಯನ್ನು ಲೇಔಟ್ ಮಾಡಲು ಬಳಸಿಕೊಂಡ ತಪ್ಪನ್ನು ಒಪ್ಪಿಕೊಂಡ ಮುಡಾ, ಪಾರ್ವತಿ ಅವರಿಗೆ ಪರ್ಯಾಯ ನಿವೇಶನ ನೀಡಲು ನಿರ್ಧರಿಸಿತು.

ಅದರಂತೆ 2020ರ ನವೆಂಬರ್ ನಲ್ಲಿ ಮುಡಾ ಪಾರ್ವತಿ ಸೇರಿದಂತೆ ಭೂಮಿ ಕಳೆದುಕೊಳ್ಳುವವರಿಗೆ 50:50 ಆಧಾರದ ಮೇಲೆ ಪರ್ಯಾಯ ಸೈಟ್‌ಗಳನ್ನು ನೀಡಲು ಮುಂದಾಯಿತು. ಅಂತೆ 2022ರ ಜನವರಿಯಲ್ಲಿ ಮೈಸೂರಿನಲ್ಲಿ ವಿಜಯನಗರ 3ನೇ ಹಂತದಲ್ಲಿ ಅವರಿಗೆ 14 ನಿವೇಶನಗಳನ್ನು ನೀಡಿತ್ತು.

2023ರ ಅಕ್ಟೋಬರ್ ನಲ್ಲಿ, 50:50 ಅನುಪಾತದ ಬಗ್ಗೆ ಪ್ರಶ್ನೆಗಳು ಉದ್ಭವವಾಗಿದ್ದು ಅಂದಿನ ಸರ್ಕಾರವು ಅದನ್ನು ರದ್ದುಗೊಳಿಸಿತು. ಅಲ್ಲದೆ ಮುಡಾ ನಿವೇಶನ ಹಂಚಿಕೆ ಮೂಲಕ ಸಿಎಂ ಪತ್ನಿ ಲಾಭ ಪಡೆದಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದು, ಮುಂಗಾರು ಅಧಿವೇಶನದ ಒಂದು ದಿನ ಮುಂಚಿತವಾಗಿಯೇ ಅಕ್ರಮಗಳ ತನಿಖೆಗೆ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಪಿ ಎನ್ ದೇಸಾಯಿ ನೇತೃತ್ವದಲ್ಲಿ ತನಿಖಾ ಆಯೋಗವನ್ನು ಸರ್ಕಾರ ರಚಿಸಿತ್ತು.

ವಿವಾದದ ನಡುವೆ, ಸಿದ್ದರಾಮಯ್ಯ ಅವರು ತಮ್ಮ ಭೂಮಿಯನ್ನು ಮುಡಾ ಕಬಳಿಕೆ ಮಾಡಿದೆ ಎಂದು ಆರೋಪಿಸಿದ್ದರು. ಅಲ್ಲದೆ ಮುಡಾ ತಮ್ಮ ಕುಟುಂಬಕ್ಕೆ 62 ಕೋಟಿ ರೂಪಾಯಿ ಪರಿಹಾರವನ್ನು ನೀಡಿ, 14 ಪರ್ಯಾಯ ನಿವೇಶನಗಳನ್ನು ಹಿಂಪಡೆಯಲಿ ಎಂದು ಹೇಳಿದರು. ಈ ವಿಷಯದ ಕುರಿತು ಚರ್ಚೆಗೆ ಅವಕಾಶ ನೀಡದ ಕಾರಣ ಮುಡಾ 'ಹಗರಣ' ಅಧಿವೇಶನದಲ್ಲಿ ಕೋಲಾಹಲ ಸೃಷ್ಟಿಸಿತ್ತು.

ದೂರುದಾರ ಟಿ.ಜೆ.ಅಬ್ರಹಾಂ ಸಲ್ಲಿಸಿದ್ದ ಅರ್ಜಿಯನ್ನು ಆಧರಿಸಿ ರಾಜ್ಯಪಾಲರು ಜುಲೈ 26ರಂದು ಸರ್ಕಾರ 'ಶೋಕಾಸ್ ನೋಟಿಸ್' ಜಾರಿ ಮಾಡಿದ್ದು, ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಏಕೆ ಅನುಮತಿ ನೀಡಬಾರದು ಎಂಬುದಕ್ಕೆ ತಮ್ಮ ವಿರುದ್ಧದ ಆರೋಪಗಳಿಗೆ ಏಳು ದಿನಗಳೊಳಗೆ ಉತ್ತರ ನೀಡುವಂತೆ ಮುಖ್ಯಮಂತ್ರಿಗೆ ಸೂಚಿಸಿದ್ದರು.

ರಾಜ್ಯ ಸರ್ಕಾರವು ಆಗಸ್ಟ್ 1ರಂದು ರಾಜ್ಯಪಾಲರಿಗೆ ಸಿಎಂ ಸಿದ್ದರಾಮಯ್ಯ ವಿರುದ್ಧ ಹೊರಡಿಸಿರುವ ತಮ್ಮ 'ಶೋಕಾಸ್ ನೋಟಿಸ್' ಅನ್ನು ಹಿಂಪಡೆಯುವಂತೆ ಸಲಹೆ ನೀಡಿತ್ತು. ಅಷ್ಟೇ ಅಲ್ಲದೆ ಇದು "ಸಾಂವಿಧಾನಿಕ ಕಚೇರಿಯ ಸಂಪೂರ್ಣ ದುರುಪಯೋಗ" ಎಂದು ಆರೋಪಿಸಿತ್ತು. ತರುವಾಯ ಆಗಸ್ಟ್ 3ರಂದು ರಾಜ್ಯಪಾಲರ ನೋಟಿಸ್‌ಗೆ ಸಿಎಂ ಪ್ರತಿಕ್ರಿಯಿಸಿ, ಆರೋಪಗಳನ್ನು ನಿರಾಕರಿಸಿದರು.

ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಈ ತಿಂಗಳ ಆರಂಭದಲ್ಲಿ ಬೆಂಗಳೂರಿನಿಂದ ಮೈಸೂರಿನವರೆಗೆ ಒಂದು ವಾರದ 'ಪಾದಯಾತ್ರೆ' (ಪಾದಯಾತ್ರೆ) ನಡೆಸಿದ್ದವು.

ದೂರುದಾರರಾದ ಟಿ ಜೆ ಅಬ್ರಹಾಂ, ಸ್ನೇಹಮಯಿ ಕೃಷ್ಣ ಹಾಗೂ ಪ್ರದೀಪ್ ಕುಮಾರ್ ಎಸ್ ಪಿ ನೀಡಿದ ದೂರುಗಳನ್ನು ಉಲ್ಲೇಖಿಸಿ ಆಗಸ್ಟ್ 16ರಂದು ರಾಜ್ಯಪಾಲರು ಭ್ರಷ್ಟಾಚಾರ ತಡೆ ಕಾಯಿದೆ, 1988 ರ ಸೆಕ್ಷನ್ 17A ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (BNSS), 2023ರ ಸೆಕ್ಷನ್ 218ರ ಅಡಿಯಲ್ಲಿ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದರು.

ಆಗಸ್ಟ್ 19ರಂದು ಸಿದ್ದರಾಮಯ್ಯ ರಾಜ್ಯಪಾಲರ ಆದೇಶದ ಕಾನೂನುಬದ್ಧತೆಯನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆಗಸ್ಟ್ 19ರಿಂದ ವಿಚಾರಣೆ ನಡೆಸಿದ್ದು ಕೋರ್ಟ್ ಸೆಪ್ಟೆಂಬರ್ 12ಕ್ಕೆ ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಿತ್ತು. ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಇಂದು ಪ್ರಕರಣದಲ್ಲಿ ತಮ್ಮ ವಿರುದ್ಧದ ತನಿಖೆಗೆ ರಾಜ್ಯಪಾಲರ ಅನುಮೋದನೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

ಉಚ್ಚಾಟಿತ AIADMK ಹಿರಿಯ ನಾಯಕ ಸೆಂಗೊಟ್ಟೈಯನ್ ನಾಳೆ ವಿಜಯ್ ಭೇಟಿ; TVK ಸೇರುವ ಸಾಧ್ಯತೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

SCROLL FOR NEXT