ಮೈಸೂರು: ಜಾತಿ ಗಣತಿ ವರದಿಯನ್ನು ಜಾರಿ ಮಾಡಿಯೇ ಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಇಂದು ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿಗಳ ಸಂಘದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾತಿಗಣತಿ ವರದಿ ನನ್ನ ಕೈ ಸೇರಿದೆ. ನಾನು ಇನ್ನೂ ಅದನ್ನು ಸಂಪೂರ್ಣವಾಗಿ ನೋಡಿಲ್ಲ. ಮುಂದಿನ ದಿನಗಳಲ್ಲಿ ಅದನ್ನು ಸಂಪುಟ ಸಭೆಯಲ್ಲಿ ಇಟ್ಟು ಜಾರಿಗೆ ತರುತ್ತೇನೆ. ಜಾತಿ ಗಣತಿ ಜಾರಿ ನಮ್ಮ ಪಕ್ಷದ ಅಜೆಂಡಾ ಆಗಿದೆ. ಹೀಗಾಗಿ ಜಾರಿ ಮಾಡಿಯೇ ಮಾಡುತ್ತೇವೆ ಎಂದು ಘೋಷಿಸಿದರು.
ಕರ್ನಾಟಕ ಜಾತಿ ಗಣತಿ ವರದಿ ಎಂದೇ ಜನಪ್ರಿಯವಾಗಿರುವ ಸಾಮಾಜಿಕ ಆರ್ಥಿಕ ಮತ್ತು ಶಿಕ್ಷಣ ಸಮೀಕ್ಷೆಯ ಬಹು ನಿರೀಕ್ಷಿತ ವರದಿಯನ್ನು ಈಗಾಗಲೇ ಕೆಎಸ್‌ಸಿಬಿಸಿ ಅಧ್ಯಕ್ಷರಾಗಿದ್ದ ಕೆ.ಜಯಪ್ರಕಾಶ್ ಹೆಗ್ಡೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ್ದಾರೆ.
ಈ ಬಗ್ಗೆ ಪರ-ವಿರೋಧಗಳು ಕೇಳಿಬರುತ್ತಲೇ ಇದೆ. ಕೆಲವರು ಜಾರಿ ಮಾಡಬೇಕೆಂದು ಪಟ್ಟು ಹಿಡಿದಿದ್ದರೆ, ಇನ್ನೂ ಕೆಲವರು ಇದನ್ನು ತಿರಸ್ಕೃತ ಮಾಡಬೇಕೆಂದು ಆಗ್ರಹಿಸಿದ್ದಾರೆ. ಇವೆಲ್ಲದರ ನಡುವೆ ಸಿಎಂ ಸಿದ್ದರಾಮಯ್ಯನವರು ವರದಿಯನ್ನು ಜಾರಿ ಮಾಡುತ್ತೇನೆ ಎಂದು ಘೋಷಣೆ ಮಾಡಿದ್ದಾರೆ.