ಬೆಂಗಳೂರು: ಇಬ್ಬರು ಕಾಂಗ್ರೆಸ್ ಶಾಸಕರು ಮತ್ತು ಇತರರ ಚಿತ್ರಹಿಂಸೆ ಹಾಗೂ ಕಿರುಕುಳದಿಂದ ಬೇಸತ್ತು ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಸಹೋದರ ಕೆ.ಎಸ್. ಜೀವನ್ ಅವರು ಆರೋಪಿಸಿದ್ದಾರೆ.
ಬಿಜೆಪಿ ಕಾರ್ಯಕರ್ತ, 40 ವರ್ಷದ ವಿನಯ್ ಸೋಮಯ್ಯ ಅವರು ಇಂದು ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದು, ತಮ್ಮ ಸಾವಿಗೆ ವಿರಾಜಪೇಟೆಯ ಕಾಂಗ್ರೆಸ್ ಶಾಸಕ ಎ.ಎಸ್. ಪೊನ್ನಣ್ಣ ಮತ್ತು ಕಾಂಗ್ರೆಸ್ ಜಿಲ್ಲಾ ವಕ್ತಾರ ತೆನ್ನಿರ ಮೈನಾ ಕಾರಣ ಎಂದು ಡೆತ್ ನೋಟ್ ನಲ್ಲಿ ಆರೋಪಿಸಿದ್ದಾರೆ.
ಇಂದು ಬೆಳಗ್ಗೆ ವಿನಯ್ ಸಾವಿನ ಬಗ್ಗೆ ಬೆಂಗಳೂರಿನ ಹೆಣ್ಣೂರು ಪೊಲೀಸರಿಗೆ ದೂರು ನೀಡಿದ ಅವರ ಸಹೋದರ ಕೆ.ಎಸ್. ಜೀವನ್, ಕಾಂಗ್ರೆಸ್ ಮುಖಂಡ ತೆನ್ನಿರ ಮೈನಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾನೂನು ಸಲಹೆಗಾರ ಪೊನ್ನಣ್ಣ ಮತ್ತು ಕಾಂಗ್ರೆಸ್ ಶಾಸಕ ಮಂಥರ್ ಗೌಡ ಅವರ ಚಿತ್ರಹಿಂಸೆ ಹಾಗೂ ಕಿರುಕುಳ ವಿನಯ್ ಆತ್ಮಹತ್ಯೆಗೆ ಕಾರಣ ಎಂದು ಹೇಳಿದ್ದಾರೆ.
ಆದಾಗ್ಯೂ, ಹೆಣ್ಣೂರು ಪೊಲೀಸರು ದಾಖಲಿಸಿದ ಎಫ್‌ಐಆರ್‌ನಲ್ಲಿ(ಅಪರಾಧ ಸಂಖ್ಯೆ 136/2025), ಇಬ್ಬರು ಶಾಸಕರ (ಪೊನ್ನಣ್ಣ ಮತ್ತು ಮಂಥರ್ ಗೌಡ) ಹೆಸರುಗಳನ್ನು ಉಲ್ಲೇಖಿಸಲಾಗಿಲ್ಲ. ಎಫ್‌ಐಆರ್‌ನಲ್ಲಿ ಮೈನಾ ಮತ್ತು ಇತರರನ್ನು ಆರೋಪಿಗಳೆಂದು ಉಲ್ಲೇಖಿಸಲಾಗಿದೆ.
ವಿನಯ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸ್ಥಳಾಂತರಿಸಿದ ಅಂಬೇಡ್ಕರ್ ಆಸ್ಪತ್ರೆಗೆ ಭೇಟಿ ನೀಡಿದ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಎಫ್‌ಐಆರ್‌ನಲ್ಲಿ ಇಬ್ಬರು ಶಾಸಕರ ಹೆಸರನ್ನು ಕೈಬಿಟ್ಟಿದ್ದಕ್ಕಾಗಿ ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸ್ ಠಾಣೆಗಳು ಕಾಂಗ್ರೆಸ್ ಪಕ್ಷದ ಕಚೇರಿಗಳಾಗಿ ಮಾರ್ಪಟ್ಟಿವೆ. ವಿನಯ್ ಅವರ ಆತ್ಮಹತ್ಯೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಸರಿಯಾದ ತನಿಖೆ ಅಗತ್ಯವಿದೆ. ಕೊಡಗು ಪೊಲೀಸ್ ವರಿಷ್ಠಾಧಿಕಾರಿಯನ್ನು ಅಮಾನತುಗೊಳಿಸಬೇಕು. ನಾವು ಮೈನಾ ಮತ್ತು ಇಬ್ಬರು ಶಾಸಕರ ವಿರುದ್ಧ ದೂರು ದಾಖಲಿಸಿದ್ದೇವೆ" ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಫೆಬ್ರವರಿಯಲ್ಲಿ ವಿನಯ್ ನನಗೆ ಕರೆ ಮಾಡಿ "ಕೊಡಗಿನ ಸಮಸ್ಯೆಗಳು ಮತ್ತು ಪರಿಹಾರ" ದ ಗ್ರೂಪ್ ಅಡ್ಮಿನ್ ಆಗಿದ್ದಕ್ಕಾಗಿ ಮೈನಾ ಅವರು ತಮ್ಮ ವಿರುದ್ಧ ಸುಳ್ಳು ದೂರು ದಾಖಲಿಸಿದ್ದಾರೆ ಎಂದು ಹೇಳಿರುವುದಾಗಿ ಜೀವನ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
"ಎಫ್‌ಐಆರ್‌ಗೆ ಹೈಕೋರ್ಟ್ ತಡೆ ನೀಡಿದೆ. ತಡೆಯಾಜ್ಞೆಯ ಹೊರತಾಗಿಯೂ, ಶಾಸಕರು ಮತ್ತು ಅವರ ಬೆಂಬಲಿಗರು ತಮ್ಮ ಸಹೋದರನಿಗೆ ಕಿರುಕುಳ ಮುಂದುವರಿಸಿದ್ದಾರೆ" ಎಂದು ಜೀವನ್ ದೂರಿನಲ್ಲಿ ಆರೋಪಿಸಿದ್ದಾರೆ.
ಜೀವನ್ ನೀಡಿದ ದೂರಿನ ಆಧಾರದ ಮೇಲೆ ಹೆಣ್ಣೂರು ಪೊಲೀಸರು, ಆತ್ಮಹತ್ಯೆಗೆ ಪ್ರಚೋದನೆ(ಬಿಎನ್‌ಎಸ್ 108), ಕ್ರಿಮಿನಲ್ ಬೆದರಿಕೆ(ಬಿಎನ್‌ಎಸ್ 351(2)) ಮತ್ತು ಉದ್ದೇಶಪೂರ್ವಕ ಅವಮಾನ(ಬಿಎನ್‌ಎಸ್ 352) ಪ್ರಕರಣವನ್ನು ದಾಖಲಿಸಿದ್ದಾರೆ.
ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣವನ್ನು ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ(ಪೂರ್ವ) ವಿಕಾಶ್ ಕುಮಾರ್ ಅವರು ತಿಳಿಸಿದ್ದಾರೆ.