ಬೆಂಗಳೂರು: ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪಿಸಲು ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ನಿರ್ಧರಿಸಿದ್ದು, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರೊಂದಿಗೆ ಚರ್ಚೆ ನಡೆಸಿದ್ದಾರೆ.
ನಿನ್ನೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾರ್ಮಿಕ ಸಚಿವ ಸಂತೋಷ್ ಲಾಡ್, ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ದೆಹಲಿ ನಿವಾಸದಲ್ಲಿ ಭೇಟಿಯಾಗಿದ್ದು, ಈ ಬಗ್ಗೆ ಚರ್ಚೆ ನಡೆಸಿದ್ದಾರೆಂದು ತಿಳಿದುಬಂದಿದೆ.
ಅಮೆಜಾನ್, ಫ್ಲಿಪ್ ಕಾರ್ಟ್ ಸೇರಿದಂತೆ ಹತ್ತಾರು ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಅಗತ್ಯ ಕ್ರಮಗಳಿಗಾಗಿ ಮುಂದಾಗಿತ್ತು. ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರೂ ಗಿಗ್ ಕಾರ್ಮಿಕರ ಕಲ್ಯಾಣಕ್ಕಾಗಿ ಅವರ ಪರವಾಗಿ ಧ್ವನಿ ಎತ್ತಿದ್ದರು.
ಇದರ ಬೆನ್ನಲ್ಲೇ ರಾಹುಲ್ ಗಾಂಧಿಯವರನ್ನು ಭೇಟಿಯಾಗಿರುವ ಕೈ ನಾಯಕರು ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ರಾಹುಲ್ ಗಾಂಧಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸಂತೋಷ್ ಲಾಡ್ ಅವರು, ಮಸೂದೆಯನ್ನು ಸಂಪುಟದ ಮುಂದೆ ಇರಿಸಲಾಗುವುದು. ಬಳಿಕ ಸುಗ್ರೀವಾಜ್ಞೆಯ ಮೂಲಕ ಕಾಯ್ದೆಯನ್ನು ಜಾರಿಗೆ ತರಲಾಗುವುದು. ರಾಹುಲ್ ಗಾಂಧಿ ಭೇಟಿ ವೇಳೆ ಐಟಿ/ಬಿಟಿ ಮತ್ತು ಕೈಗಾರಿಕಾ ಸಚಿವರು ಕೂಡ ಹಾಜರಿದ್ದರು. ಹೀಗಾಗಿ ಎದುರಾಗುವ ಸಮಸ್ಯೆಗಳ ಕುರಿತಂತೆಯೂ ಚರ್ಚೆಗಳ ನಡೆಸಲಾಗಿದೆ ಎಂದು ಹೇಳಿದರು.
ಸಭೆ ಫಲಪ್ರದವಾಗಿದ್ದು “ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ” ಸ್ಥಾಪಿಸುವ ತೀರ್ಮಾನಕ್ಕೆ ಬರಲಾಗಿದೆ. ಸಂಬಂಧಿತ ಸಂಸ್ಥೆಗಳಿಂದ ಶೇ5 ರಷ್ಟು ಸೆಸ್ ಸಂಗ್ರಹಿಸುವುದು ಮತ್ತು ಉಳಿದ ಅಗತ್ಯ ಹಣವನ್ನು ಸರ್ಕಾರವೇ ಭರಿಸಿ ಗಿಗ್ ಕಾರ್ಮಿಕರ ಕಲ್ಯಾಣಕ್ಕೆ ಯೋಜನೆಗಳನ್ನು ರೂಪಿಸುವುದು, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಗಿಗ್ ಕಾರ್ಮಿಕರ ಬಗ್ಗೆ ರಾಹುಲ್ ಗಾಂಧಿ ಅವರು ವಿಶೇಷವಾಗಿ ಕಾಳಜಿ ಹೊಂದಿದ್ದಾರೆ. ರಾಜಸ್ಥಾನದಲ್ಲಿ ಬಂದ ಮಸೂದೆಗಿಂತ ಹೆಚ್ಚಿನ ಅಧ್ಯಯನ ಮಾಡಿ ನಾವು ಈವರೆಗೆ ಮೂವತ್ತಕ್ಕೂ ಹೆಚ್ಚು ಸಭೆಗಳನ್ನು ಮಾಡಿದ್ದೇವೆ. ಒಂದು ಅತ್ಯುತ್ತಮವಾದ ಬಿಲ್ ತಂದಿದ್ದೇವೆ. ಗಿಗ್ ಕಾರ್ಮಿಕರಿಗೆ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸುವ ಉದ್ದೇಶ ಇದೆ.
ಈ ಮಸೂದೆ ಬಗ್ಗೆ ಅಂತಿಮ ಚರ್ಚೆಯಾಗಿದೆ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಚರ್ಚೆ ಆಗಿದೆ. ನಮ್ಮ ಸರ್ಕಾರ ಬಂದ ನಂತರ ಗಿಗ್ ಕಾರ್ಮಿಕರಿಗೆ ಜೀವ ವಿಮೆ, ಅಪಘಾತ ಪರಿಹಾರ ನೀಡುವ ಕ್ರಮ ಜಾರಿಯಲ್ಲಿದೆ. ಮುಂದಿನ ದಿನಗಳಲ್ಲಿ ಸಚಿವ ಸಂಪುಟದಲ್ಲಿ ಮಂಡಿಸಿ ಒಪ್ಪಿಗೆ ಪಡೆದು ಸುಗ್ರೀವಾಜ್ಞೆ ಮೂಲಕ ಕಾನೂನು ಮಾಡಿ ಜಾರಿಗೆ ತರುವ ಸಾಧ್ಯತೆ ಇದೆ ಎಂದು ವಿವರಿಸಿದರು.
ಇದರಲ್ಲಿ ಉದ್ಯೋಗಿ, ಉದ್ಯೋಗದಾತ, ಕೈಗಾರಿಕಾ ವಿವಾದ ಅಥವಾ ಪ್ಲಾಟ್ ಫಾರಂನವರಿಗೆ ತೊಂದರೆ ಕೊಡುವ ಉದ್ದೇಶ ಇಲ್ಲ. ಈ ಮಸೂದೆ ಉದ್ದೇಶ ಯಾರು ಗಿಗ್ ವಲಯದಲ್ಲಿ ಕೆಲಸ ಮಾಡುತ್ತಾರೆ ಅವರಿಗೆ ಅನುಕೂಲ ಮಾಡಿಕೊಡುವುದಾಗಿದೆ. ಇಂತಿಷ್ಟು ಶುಲ್ಕ ಪಡೆದು ಮಂಡಳಿ ಮೂಲಕ ಹಣ ಸಂಗ್ರಹಿಸಿ ಅನುಕೂಲವಾಗುವ ಕೆಲಸಗಳನ್ನು ಮಾಡುತ್ತೇವೆ ಎಂದರು.
ಈ ನಡುವೆ ಸಭೆಯಲ್ಲಿ ಭಾಗವಹಿಸಿದ್ದ ಮೂವರು ಗಿಗ್ ಕಾರ್ಮಿಕರ ಪ್ರತಿನಿಧಿಗಳು - ರಕ್ಷಿತಾ ದೇವ್ (ಕರ್ನಾಟಕ), ಶೇಖ್ ಸಲಾಹುದ್ದೀನ್ (ಹೈದರಾಬಾದ್) ಮತ್ತು ನಿಖಿಲ್ ದೇವ್ - ಕಲ್ಯಾಣ ಮಂಡಳಿಯನ್ನು ಸ್ಥಾಪಿಸುವ ಅಗತ್ಯತೆಯ ಬಗ್ಗೆ ರಾಹುಲ್ ಗಾಂಧಿಯವರಿಗೆ ವಿವರಿಸಿದ್ದಾರೆಂದು ತಿಳಿದುಬಂದಿದೆ.
ಸಭೆ ಬಳಿಕ ಕಾಂಗ್ರೆಸ್ ಹೈ ಕಮಾಂಡ್ ಸರ್ಕಾರದ ಉಪಕ್ರಮಗಳನ್ನು ಶ್ಲಾಘಿಸಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.