ಬೆಂಗಳೂರು: ಕೆಲ ತಿಂಗಳ ಹಿಂದಷ್ಟೇ ಗಂಗಾವತಿ ತಾಲ್ಲೂಕಿನ ಪ್ರವಾಸಿ ತಾಣ ಸಾಣಾಪುರದಲ್ಲಿ ಇಸ್ರೇಲಿ ಪ್ರಜೆ ಮತ್ತು ಸ್ಥಳೀಯ ಹೋಮ್ ಸ್ಟೇ ಒಡತಿ ಮೇಲೆ ನಡೆದ ಹಲ್ಲೆ ಹಾಗೂ ಅತ್ಯಾಚಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪ್ರವಾಸೋದ್ಯಮ ಇಲಾಖೆ, ರಾಜ್ಯದ ಹೋಂಸ್ಟೇಗಳಿಗೆ ಹೊಸ ಮಾರ್ಗಸೂಚಿಯೊಂದನ್ನು ಸಿದ್ಧಪಡಿಸಿದೆ.
ನಿಮ್ಮ ಆಸ್ತಿಯನ್ನು ಹೋಂಸ್ಟೇ ಎಂದು ವ್ಯಾಖ್ಯಾನಿಸಲು ಮತ್ತು ಪಟ್ಟಿ ಮಾಡಬೇಕೆಂದರೆ, ಮಾಲೀಕರು ಸ್ಥಳದಲ್ಲಿ ವಾಸವಿದ್ದು, ಅತಿಥಿಗಳಿಗೆ ಸ್ವತಃ ಸತ್ಕಾರ ಮಾಡಬೇಕು. ದೂರದಲ್ಲಿದ್ದು ನಿಯಂತ್ರಿಸುವುದನ್ನು ಒಪ್ಪಲಾಗದು. ಈ ನಿಯಮ ಪಾಲಿಸದವರ ಆಸ್ತಿಯನ್ನು ಬ್ರೆಡ್ ಮತ್ತು ಬ್ರೇಕ್‌ಫಾಸ್ಟ್ (ಬಿ & ಬಿ) ಅಥವಾ ರೆಸಾರ್ಟ್ ಎಂದು ವರ್ಗೀಕರಿಸಲಾಗುತ್ತದೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ,
ಅಸ್ತಿತ್ವದಲ್ಲಿರುವ ಆಸ್ತಿಯಲ್ಲಿ ಮಾಲಿಕರನ್ನು ಹೊರತುಪಡಿಸಿ ಮನೆಯಲ್ಲಿ 6 ಕೊಠಡಿಗಳು ಅಥವಾ 12 ಹಾಸಿಗೆಗಳು ಇರಬಾರದು. ಹೋಂಸ್ಟೇಗಳ ಹೆಸರಿನಲ್ಲಿ ಹಲವು ದುಡ್ಡು ಮಾಡುತ್ತಿದ್ದಾರೆ. ಆದರೆ, ನಿಯಮಗಳಂತೆ ಅವುಗಳು ಹೋಂಸ್ಟೋ ವ್ಯಾಖ್ಯಾನದಡಿ ಬರುವುದೇ ಇಲ್ಲ. ಹೀಗಾಗಿ ಮಾರ್ಗಸೂಚಿಗಳ ಮೂಲಕ, ಇಲಾಖೆಯು ನಿಯಂತ್ರಣಕ್ಕೆ ತರಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಹಲವು ಮಾಲೀಕರು ಸ್ಥಳದಲ್ಲಿ ಇರುವುದಿಲ್ಲ. ಇತರೆಡೆ ಉಳಿದುಕೊಂಡು ವ್ಯವಸ್ಥಾಪಕರ ಮೂಲಕ ಹೋಂಸ್ಟೇ, ಹೋಟೆಲ್ ಮತ್ತು ರೆಸಾರ್ಟ್‌ಗಳನ್ನು ನಡೆಸುತ್ತಿದ್ದಾರೆ. ಕೊಡಗು, ಹಾಸನ, ಸಕಲೇಶಪುರ, ಮಂಗಳೂರು ಸೇರಿದಂತೆ ಇತರೆ ಪ್ರದೇಶಗಳಲ್ಲಿನ ಹಲವು ಹೋಂಸ್ಟೇ, ಹೋಟೆಲ್ ಮತ್ತು ರೆಸಾರ್ಟ್‌ಗಳನ್ನು ವ್ಯವಸ್ಥಾಪಕರೇ ನೋಡುಕೊಳ್ಳುತ್ತಿದ್ದಾರೆ. ನೋಂದಣಿ ಇಲ್ಲದೆ ಹೋಂಸ್ಟೇಗಳನ್ನು ನಡೆಸುತ್ತಿರುವುದೂ ಗಮನಕ್ಕೆ ಬಂದಿದೆ. ಇವುಗಳಿಗೆ ನಿಯಂತ್ರಣ ಹೇರಬೇಕಿದೆ. ಹೀಗಾಗಿ ಮಾರ್ಗಸೂಚಿ ಸಿದ್ಧಪಡಿಸಲಾಗಿದ್ದು, ಪ್ರವಾಸೋದ್ಯಮ ಸಚಿವರು ಮತ್ತು ಮುಖ್ಯಮಂತ್ರಿಗಳಿಂದ ಅಂತಿಮ ಅನುಮೋದನೆಗಾಗಿ ಕಾಯಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮಾರ್ಗಸೂಚಿ ಪ್ರಕಾರ ಆಸ್ತಿ ನೋಂದಣಿಗೆ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಿಂದ ಅನುಮೋದನೆ ಕಡ್ಡಾಯವಾಗಿದೆ. ಅಧಿಕಾರಿಗಳು ಆಸ್ತಿಯ ವಿವರಗಳು, ಮಾಲೀಕರು, ಭದ್ರತೆ ಮತ್ತು ನಿರ್ವಹಣೆಯನ್ನು ಪರಿಶೀಲಿಸುತ್ತಾರೆ.
ಮಾರ್ಗಸೂಚಿಯಂತೆ ಬಿ & ಬಿ, ಹೋಂಸ್ಟೇ, ಲಾಡ್ಜ್, ಹೋಟೆಲ್ ಮತ್ತು ರೆಸಾರ್ಟ್ ನಡುವಿನ ವ್ಯಾಖ್ಯಾನ ಮತ್ತು ವ್ಯತ್ಯಾಸವನ್ನು ಪಟ್ಟಿ ಮಾಡುತ್ತಾರೆ. ನಂತರ ಅವುಗಳನ್ನು ಶ್ರೇಣೀಕರಿಸುವ ಹಾಗೂ ತೆರಿಗೆ ವಿಧಿಸಲು ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದೆ.