ಬೆಂಗಳೂರು: ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣ ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸುತ್ತಿರುವ ನಡುವಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸಕ್ಕೆ ಗೃಹ ಸಚಿವ ಪರಮೇಶ್ವರ್ ಅವರು ಭೇಟಿ ನೀಡಿದ್ದು, ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ.
ವಿರಾಜಪೇಟೆ ಶಾಸಕ, ಸಿಎಂ ಕಾನೂನು ಸಲಹೆಗಾರ ಎಎಸ್ ಪೊನ್ನಣ್ಣ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ದು, ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಪರಮೇಶ್ವರ್ ಅವರು ಸುದೀರ್ಘ ಚರ್ಚೆ ನಡೆಸಿದ್ದಾರೆನ್ನಲಾಗಿದೆ.
ಈ ನಡುವೆ ಪೊನ್ನಣ್ಣ ಅವರು ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ ಯಾರೆಂದು ತಿಳಿದಿಲ್ಲ ಎಂದು ಹೇಳಿದ್ದು, ಸಮಸ್ಯೆ ನಿಭಾಯಿಸುವ ಕುರಿತು ಕಾರ್ಯತಂತ್ರಗಳ ಬಗ್ಗೆ ಪರಮೇಶ್ವರ್ ಅವರು ಸಿಎಂ ಜೊತೆಗೆ ಚರ್ಚೆ ನಡೆಸಿದ್ದಾರೆಂದು ತಿಳಿದುಬಂದಿದೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ಗೋಣಿಮರೂರು ನಿವಾಸಿ ವಿನಯ್ ಸೋಮಯ್ಯ ಬಿಜೆಪಿ ಕಾರ್ಯಕರ್ತರಾಗಿದ್ದು, ಆತ್ಮಹತ್ಯೆಗೆ ಶರಣಾಗಿದ್ದಾರೆ.
ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿದ್ದು, ತಮ್ಮ ಸಾವಿಕೆ ನಿರ್ಧಾರಕ್ಕೆ ಕಾರಣ ತಿಳಿಸಿದ್ದಾರೆ. ಅಲ್ಲದೆ, ಕೊಡಗು ಜಿಲ್ಲೆಯ ಕಾಂಗ್ರೆಸ್ ಮುಖಂಡ ತೆನ್ನಿರ ಮೈನಾ ಮೇಲೆ ಆರೋಪ ಮಾಡಿದ್ದಾರೆಂದು ಹೇಳಲಾಗುತ್ತಿದೆ.
ಮೃತ ವಿನಯ್ ಕೊಡಗು ಸಮಸ್ಯೆ, ಸಲಹೆ ಸೂಚನೆಯ ವಾಟ್ಸ್ಆ್ಯಪ್ ಗ್ರೂಪ್ ಮಾಡಿದ್ದರು. ಈ ಗ್ರೂಪ್ ಮೂಲಕ ಕಾಂಗ್ರೆಸ್ ಶಾಸಕ ಪೊನ್ನಣ್ಣ ತೇಜೋವಧೆಯ ಆರೋಪ ಹೊತ್ತಿದ್ದರು. ಈ ಬಗ್ಗೆ ಕೊಡಗಿನಲ್ಲಿ ರಾಜಕೀಯ ಪ್ರೇರಿತ ಪ್ರಕರಣದಲ್ಲಿ FIR ದಾಖಲಾಗಿತ್ತು. ಗ್ರೂಪ್‌ನಲ್ಲಿ ಯಾರೋ ಹಾಕಿದ್ದ ಮೆಸೇಜ್‌ಗೆ ವಿನಯ್ ಮೇಲೆ FIR ಆಗಿತ್ತು.
ಮಡಿಕೇರಿ ನಗರ ಠಾಣೆಯಲ್ಲಿ ಕಾಂಗ್ರೆಸ್ ಮುಖಂಡ ತೆನ್ನಿರ ಮೈನಾ ದೂರು ನೀಡಿದ್ದರು. ಅದರಂತೆ ಕೆಲವು ದಿನಗಳ ಹಿಂದೆ ವಿನಯ್ ಬಂಧನಕ್ಕೆ ಒಳಗಾಗಿ ಜಾಮೀನು ಪಡೆದು ಹೊರಬಂದಿದ್ದರು. ಬಳಿಕ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಡೆತ್ನೋಟ್ನಲ್ಲಿ ಉಲ್ಲೇಖ ಮಾಡಿದ್ದಾರೆ ಎನ್ನಲಾಗುತ್ತಿದೆ.