ಬೆಂಗಳೂರು ಕರಗ ವಿವಾದ 
ರಾಜ್ಯ

Bengaluru Karaga: ಹಣ ಬಿಡುಗಡೆ ಗೊಂದಲ; ಸಮಿತಿ ಆರೋಪ ಅಲ್ಲಗಳೆದ ರಾಮಲಿಂಗಾ ರೆಡ್ಡಿ; 'ಯೋಗ್ಯತೆ ಇಲ್ಲ'- JDS ಟೀಕೆ!

ಪ್ರತಿ ವರ್ಷ ಮಹಾನಗರ ಪಾಲಿಕೆ ಹಣ ಬಿಡುಗಡೆ ಮಾಡುತ್ತದೆ. ಅನುದಾನದ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಹೆಚ್ಚುವರಿ ಹಣ ಖರ್ಚು ಮಾಡಿದರೂ ಸಹ ಬಿಡುಗಡೆ ಮಾಡುತ್ತೇವೆ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಬೆಂಗಳೂರು: ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗಕ್ಕೆ ಹಣ ಬಿಡುಗಡೆ ವಿಚಾರವಾಗಿ ಉಂಟಾಗಿರುವ ಗೊಂದಲ ಇದೀಗ ತಾರಕಕ್ಕೇರಿರುವಂತೆಯೇ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಈ ಗೊಂದಲದ ಕುರಿತು ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ, ಕರಗಕ್ಕೆ ಹಣ ಬಿಡುಗಡೆಯಾಗಿಲ್ಲ ಎಂಬ ಆರೋಪವನ್ನು ಅಲ್ಲಗಳೆದಿದ್ದಾರೆ. 'ಶುಕ್ರವಾರ ಬೆಳಗ್ಗೆಯೇ 11 ಗಂಟೆಗೆ ಎಡಿಸಿ ಖಾತೆಗೆ ಹಣ ಹೋಗಿದೆ. ಅವರೇ ಜವಾಬ್ದಾರಿ ತೆಗೆದುಕೊಂಡು ಖರ್ಚು ವೆಚ್ಚ ನೋಡುತ್ತಾರೆ.

ಪ್ರತಿ ವರ್ಷ ಮಹಾನಗರ ಪಾಲಿಕೆ ಹಣ ಬಿಡುಗಡೆ ಮಾಡುತ್ತದೆ. ಅನುದಾನದ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಹೆಚ್ಚುವರಿ ಹಣ ಖರ್ಚು ಮಾಡಿದರೂ ಸಹ ಬಿಡುಗಡೆ ಮಾಡುತ್ತೇವೆ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಬಿಬಿಎಂಪಿ ಸ್ಪಷ್ಟನೆ

ಇನ್ನು ಇದೇ ವಿಚಾರವಾಗಿ ಸ್ಪಷ್ಟನೆ ಕೊಟ್ಟಿರುವ ಬಿಬಿಎಂಪಿ, 'ವಿಶ್ವ ವಿಖ್ಯಾತ ಬೆಂಗಳೂರು "ಕರಗ ಶಕ್ತ್ಯೋತ್ಸವ” ಆಚರಣೆಗಾಗಿ ಬಿಬಿಎಂಪಿ ವತಿಯಿಂದ ಈಗಾಗಲೇ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿಗಳ ಖಾತೆಯಾದ ಭಾರತೀಯ ಸ್ಟೇಟ್ ಬ್ಯಾಂಕ್, ಕಂದಾಯ ಭವನ, IFSC, SBINOO41072, ಖಾತೆ ಸಂಖ್ಯೆ: 64146306027 ಗೆ ರೂ: 40,00,000/- (40 ಲಕ್ಷ) ಮೊತ್ತವನ್ನು ದಿ:11-04-2025 ರಂದು ಬೆಳಗ್ಗೆ 11.15 ಗಂಟೆಗೆ ಹಣವನ್ನು ವರ್ಗಾವಣೆ ಮಾಡಲಾಗಿದೆ' ಎಂದು ಎಕ್ಸ್ ನಲ್ಲಿ ಟ್ವೀಟ್ ಮಾಡಿದೆ.

'ಯೋಗ್ಯತೆ ಇಲ್ಲ' JDS ಕಿಡಿ!

ಇನ್ನು ಕರಗ ಸಮಿತಿ ಸದಸ್ಯರ ಆರೋಪದ ವಿಚಾರವಾಗಿ ಟ್ವೀಟ್ ಮಾಡಿರುವ ಜೆಡಿಎಸ್, '“ಕುಣಿಯಲಾರದವರು ನೆಲ ಡೊಂಕು ಎಂದರಂತೆ”.. ರಾಮಲಿಂಗಾ ರೆಡ್ಡಿ ಅವರೇ, ಇದು ನಿಮಗೆ ಒಪ್ಪುವ ಮಾತು! ಮುಜರಾಯಿ ಇಲಾಖೆಯ ಯೋಗ್ಯತೆಯನ್ನು ಸ್ವತಃ ಕರಗ ಸಮಿತಿಯವರೇ ಬಿಚ್ಚಿಟ್ಟಿದ್ದಾರೆ.

ಒಮ್ಮೆ ಕಿವಿಗೊಟ್ಟು‌ ಕೇಳಿ. ಕರಗ ಉತ್ಸವಕ್ಕೆ ಶುಕ್ರವಾರವೇ ಹಣ ಬಿಡುಗಡೆ ಮಾಡಿದ್ದರೇ, ಕರಗ ಹೊರುವ ಅರ್ಚಕರು , ಸಮಿತಿಯವರು ಯಾಕೆ ತಮ್ಮ ಕೈಯಿಂದ ಸ್ವಂತ 60ಲಕ್ಷ ರೂ. ಹಣ ಹಾಕಿ ಉತ್ಸವ ನಡೆಸುತ್ತಿದ್ದಾರೆ.? ಕರಗ ಉತ್ಸವಕ್ಕೆ ಇನ್ನೂ ಹಣ ಬಿಡುಗಡೆಯಾಗಿಲ್ಲ ಎಂದು ಮಾಧ್ಯಮಗಳ ಮುಂದೆ ಅಳಲು ತೋಡಿಕೊಳ್ಳುತ್ತಿದ್ದರು? ಹಣ ಬಿಡುಗಡೆಗೂ ಪರ್ಸಂಟೇಜ್ ವ್ಯವಹಾರವೇ?

ರಾಮಲಿಂಗ ರೆಡ್ಡಿ ಅವರೇ, ಸಾರಿಗೆ ಸಂಸ್ಥೆಯನ್ನು ನಿಶ್ಯಕ್ತಿಗೊಳಿಸಿರುವ ನೀವೂ ಸಹ ನಿಶ್ಯಕ್ತಿ ಗೊಂಡಂತಿದೆ. ಮೊದಲು ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳಿ. ನಿಮ್ಮ “ಅಯೋಗ್ಯ” ಕಾಂಗ್ರೆಸ್ ಸರ್ಕಾರದ ಯೋಗ್ಯತೆ ದೇಶದ ಜನತೆ ಚೆನ್ನಾಗಿ‌ ತಿಳಿದಿದೆ. ರಾಜ್ಯದಲ್ಲಿರುವ ಡಕೋಟಾ ಕಾಂಗ್ರೆಸ್ ಸರ್ಕಾರಕ್ಕೆ, ಬೆಲೆ ಏರಿಸಿರುವ ನಿಮ್ಮ ದುರಾಡಳಿತಕ್ಕೆ ಜನರೇ ಬೀದಿ ಬೀದಿಯಲ್ಲಿ ಛೀಮಾರಿ ಹಾಕಿ ಉಗಿಯುತ್ತಿದ್ದಾರೆ ಎಂದು ಟ್ವೀಟ್ ಮಾಡಿದೆ.

ಕಾಂಗ್ರೆಸ್ ತಿರುಗೇಟು

ಜೆಡಿಎಸ್ ಆರೋಪಕ್ಕೆ ಕಾಂಗ್ರೆಸ್ ಪಕ್ಷ ಕೂಡ ತಿರುಗೇಟು ನೀಡಿದ್ದು, 'ಬಿಜೆಪಿ ಸಹವಾಸ ಮಾಡಿ ಪುಂಗಿ ಊದಲು ಕಲಿತಿರುವ ಜೆಡಿ(ಎಸ್) ಪಕ್ಷದವರೇ, ರಾಜ್ಯದ ಮುಜರಾಯಿ ದೇವಸ್ಥಾನಗಳಿಗೆ ತಸ್ತಿಕ್ ಹಣವನ್ನು ₹60,000 ದಿಂದ ₹72,000ಕ್ಕೆ ಹೆಚ್ಚಿಸಿದ್ದು ಇದೇ ನಮ್ಮ ಕಾಂಗ್ರೆಸ್ ಸರ್ಕಾರ! (ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ 2013, 2015, 2018 ಮತ್ತು 2025ರಲ್ಲಿ ತಲಾ 12,000 ರೂ ತಸ್ತಿಕ್ ಹಣವನ್ನು 4 ಬಾರಿ ಹೆಚ್ಚಳ ಮಾಡಿ ಒಟ್ಟು ₹48,000 ಹೆಚ್ಚಳ ಮಾಡಿದ್ದಾರೆ). 2 ಬಾರಿ ಮುಖ್ಯಮಂತ್ರಿಯಾಗಿದ್ದ ನಿಮ್ಮ ಕುಮಾರಸ್ವಾಮಿಯಾಗಲಿ ಅಥವಾ ಮುಖ್ಯಮಂತ್ರಿ ‌ಮತ್ತು ಪ್ರಧಾನಿಯಾಗಿ ಆಡಳಿತ ನಡೆಸಿದ ದೇವೇಗೌಡ ಅವರಾಗಲಿ ದೇವಸ್ಥಾನಗಳ ಅಭಿವೃದ್ಧಿಗೆ ಅಥವಾ ಅರ್ಚಕರ ಏಳಿಗೆಗೆ ಕೈಗೊಂಡ ಯೋಜನೆಗಳ ಬಗ್ಗೆ ಸ್ವಲ್ಪ ಮಾಹಿತಿ ನೀಡುವಿರಾ?

ಹಿಂದೂ ದೇವಾಲಯಗಳ ಹಣವನ್ನು ದೇವಾಲಯ ಅಭಿವೃದ್ಧಿಗೆ ಮಾತ್ರ ಬಳಸಬಹುದು ಮತ್ತು ಬೇರೆ ಯಾವುದೇ ಉದ್ದೇಶಕ್ಕಾಗಿ ತಿರುಗಿಸಲಾಗುವುದಿಲ್ಲ ಎಂದು ರಾಜ್ಯದ ಕಾನೂನು ಹೇಳುತ್ತದೆ ಎಂಬ ಕನಿಷ್ಠ ಪರಿಜ್ಞಾನವೂ ನಿಮ್ಮ ಪಕ್ಷಕ್ಕೆ ಇಲ್ಲವೇ? ಕರಗ ಉತ್ಸವಕ್ಕೆ ಬಿಬಿಎಂಪಿ ವತಿಯಿಂದ ಶುಕ್ರವಾರವೇ ಹಣ ಬಿಡುಗಡೆಯಾಗಿದ್ದು ಸರಿಯಾಗಿ ಮಾಹಿತಿ ಇಲ್ಲದೆ ಟ್ವೀಟ್ ಮಾಡುವ ಅಯೋಗ್ಯರನ್ನು ಬಿಟ್ಟು ಸ್ವಲ್ಪ ತಲೆ ಇರುವವರನ್ನು ನಿಮ್ಮ ಸಾಮಾಜಿಕ ಜಾಲತಾಣ ನಿರ್ವಹಿಸಲು ಇಟ್ಟುಕೊಳ್ಳಿ.

ಚಾಮುಂಡೇಶ್ವರಿ ದೇವಸ್ಥಾನ, ಮಲೆ ಮಹದೇಶ್ವರ ಕ್ಷೇತ್ರ, ಹುಲಿಗೆಮ್ಮ ದೇವಸ್ಥಾನ, ಸವದತ್ತಿಯ ಯಲ್ಲಮ್ಮ, ಅಂಜನಾದ್ರಿ ಬೆಟ್ಟ, ಘಾಟಿ ಸುಬ್ರಹ್ಮಣ್ಯ ದೇವಸ್ಥಾನ ಸೇರಿದಂತೆ ಅನೇಕ ದೇವಸ್ಥಾನಗಳ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಿರುವುದು ನಮ್ಮ ಕಾಂಗ್ರೆಸ್ ಸರ್ಕಾರವೇ ಹೊರತು ಹಿಂದೂ ಪರ ಎಂದು ಬೊಗಳೆ ಬಿಡುವ ನೀವಲ್ಲ!! ಇದೇ ರೀತಿ ಸದಾ ಸುಳ್ಳನೇ ಹೇಳುತ್ತಾ ಹೋದರೆ, ರಾಜ್ಯದ ಜನ ಕ್ಯಾಕರಿಸಿ ಉಗಿಯುವುದು ನಿಶ್ಚಿತವಾಗಿದ್ದು, ಇದನ್ನು ನೋಡಿ ನಿಮ್ಮ ನಾಯಕರಾದ ಬ್ರದರ್ ಸ್ವಾಮಿ ಅವರು ಕಣ್ಣೀರು ಹಾಕುತ್ತಾರೆ ಅಷ್ಟೆ!! ಎಂದು ಟ್ವೀಟ್ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ಉಚ್ಚಾಟಿತ AIADMK ಹಿರಿಯ ನಾಯಕ ಸೆಂಗೊಟ್ಟೈಯನ್ ನಾಳೆ ವಿಜಯ್ ಭೇಟಿ; TVK ಸೇರುವ ಸಾಧ್ಯತೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

Punishment: 5 ವರ್ಷದ ಬಾಲಕನನ್ನು ಮರಕ್ಕೆ ನೇತು ಹಾಕಿದ ಶಿಕ್ಷಕಿ!

SCROLL FOR NEXT