ಬೆಳಗಾವಿ: ಕೆಲವು ಪ್ರಭಾವಿ ಸಚಿವರ ಒತ್ತಡದಿಂದ ರಾಜ್ಯ ಸರ್ಕಾರ ತುಮಕೂರು ಬಳಿಯ ಶಿರಾದಲ್ಲಿ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸುವ ಯೋಜನೆಯನ್ನು ಕೈಬಿಟ್ಟಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಶನಿವಾರ ಹೇಳಿದ್ದಾರೆ.
ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರು ತಿಂಗಳ ಹಿಂದೆಯೇ ಶಿರಾ ಬಳಿ 2ನೇ ವಿಮಾನ ನಿಲ್ದಾಣ ಸ್ಥಾಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೆ. ಶಿರಾ ಬಳಿ ವಿಮಾನ ನಿಲ್ದಾಣ ಬಂದರೆ ಕನಿಷ್ಠ ಏಳರಿಂದ ಎಂಟು ಜಿಲ್ಲೆಗಳು ಪ್ರಯೋಜನ ಪಡೆಯುತ್ತವೆ ಎಂದು ಮನವಿ ಮಾಡಿದ್ದೆ. ಹಲವಾರು ಶಾಸಕರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಥಾಪಿಸಬೇಕೆಂದು ಬಯಸಿದ್ದಾರೆ. ಆದರೆ, ಕೆಲ ಪ್ರಭಾವಿ ಸಚಿವರ ಒತ್ತಡದಿಂದ ಸರ್ಕಾರ ಯೋಜನೆಯಿಂದ ಹಿಂದೆ ಸರಿದಿದಂತಿದೆ. ಸರ್ಕಾರ ತನ್ನ ನಿರ್ಧಾರವನ್ನು ಪುನರ್ವಿಮರ್ಶಿಸಬೇಕಿದೆ ಎಂದು ಹೇಳಿದ್ದಾರೆ.
ವಿಮಾನ ನಿಲ್ದಾಣ ಸ್ಥಾಪನೆ ಕುರಿತು ಇತ್ತೀಚೆಗೆ ನವದೆಹಲಿಗ ಭೇಟಿ ನೀಡಿದ್ದಾಗ ಕೇಂದ್ರ ಸಚಿವ ರಾಮ್ ಮೋಹನ್ ನಾಯ್ಡು ಅವರ ಗಮನಕ್ಕೆ ತರಲಾಗಿತ್ತು. ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಹಚ್ಚಾಗುತ್ತಿದ್ದು, ತುಮಕೂರು ಬಳಿಯ ಶಿರಾದಲ್ಲಿ 2ನೇ ವಿಮಾನ ನಿಲ್ದಾಣದ ಸ್ಥಾಪನೆ ಅಗತ್ಯವಿದೆ. ಕನಿಷ್ಠ ಏಳರಿಂದ ಎಂಟು ಜಿಲ್ಲೆಗಳು ಸೇರಿದಂತೆ ಶಿರಾ ಸುತ್ತಮುತ್ತಲಿನ ಅನೇಕ ಪ್ರದೇಶಗಳು ಇದರಿಂದ ಪ್ರಯೋಜನ ಪಡೆಯಲಿದೆ ಎಂದು ತಿಳಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ, ಎಐಸಿಸಿ ಕಾರ್ಯಕಾರಿಣಿ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದಿಲ್ಲ ಎಂದು ಹೇಳಿದರು.