ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಕೇಳಿಬಂದಿರುವ ಮುಡಾ ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಬಿ ರಿಪೋರ್ಟ್ ಪ್ರಶ್ನಿಸಿ ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ತಕರಾರು ಅರ್ಜಿಯ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸದ್ಯಕ್ಕೆ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಬಿ ರಿಪೋರ್ಟ್ ಕುರಿತ ಆದೇಶ ಪ್ರಕಟಿಸಿಲ್ಲ. ಆದರೆ ತನಿಖೆ ಮುಂದುವರೆಸುವಂತೆ ಲೋಕಾಯುಕ್ತ ಪೊಲೀಸರಿಗೆ ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಸೂಚನೆ ನೀಡಿದ್ದಾರೆ. ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ ಕೂಡಾ ತಕರಾರು ಅರ್ಜಿ ಸಲ್ಲಿಸಬಹುದು. ಲೋಕಾಯುಕ್ತ ಪೊಲೀಸರ ಅಂತಿಮ ವರದಿ ಬಳಿಕವೇ ಬಿ ರಿಪೋರ್ಟ್ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಲೋಕಾಯುಕ್ತ ಪೊಲೀಸರು ತನಿಖೆ ಇನ್ನೂ ಪೂರ್ಣಗೊಳಿಸದ ಹಿನ್ನೆಲೆಯಲ್ಲಿ ತನಿಖೆ ಮುಂದುವರಿಸಲು ಸೂಚನೆ ನೀಡಿದ್ದು ಮುಂದಿನ ವಿಚಾರಣೆಯನ್ನು ಮೇ 7 ಕ್ಕೆ ವಿಚಾರಣೆ ಮುಂದೂಡಿದೆ.
88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಳ್ಳಾರಿಯಲ್ಲಿ ಡಿಸೆಂಬರ್ನಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ಹೇಳಿದ್ದಾರೆ. ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜೋಶಿ, ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಈಗಾಗಲೇ ನಾಲ್ಕು ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆದಿವೆ. ಈಗ 67 ವರ್ಷಗಳ ಬಳಿಕ ನಡೆಯುತ್ತಿರುವ ಈ ಸಮ್ಮೇಳನವನ್ನು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳೆರಡೂ ಒಟ್ಟುಗೂಡಿ ನಡೆಸಲಿವೆ ಎಂದರು. ಇನ್ನೂ ಬಳ್ಳಾರಿ ಬಿಸಿಲ ನಾಡು. ಹೀಗಾಗಿ ಡಿಸೆಂಬರ್ನಲ್ಲಿ ಹವಾಮಾನಕ್ಕೆ ಅನುಗುಣವಾಗಿ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಲಾಗಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಜೊತೆ ಚರ್ಚಿಸಲಾಗಿದೆ ಎಂದರು.
ಕರ್ನಾಟಕ ಕಾಂಗ್ರೆಸ್ ಸರ್ಕಾರ ಜಾರಿ ಮಾಡಲು ಮುಂದಾಗಿರುವ ಜಾತಿ ಗಣತಿ ವರದಿಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ರಾಜ್ಯ ಸರ್ಕಾರ ಕಾಂತರಾಜು ಆಯೋಗದ ವರದಿ ಜಾರಿ ಮಾಡಲು ಹೊರಟಿದೆ. ಜಾತಿಗಣತಿ ವರದಿ ಜಾರಿಯಾದರೆ ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾಗುತ್ತದೆ. ಹೀಗಾಗಿ, ಅನ್ಯಾಯಕ್ಕೊಳಗಾದ ಸಮುದಾಯ ಒಟ್ಟಿಗೆ ಹೋರಾಟ ಮಾಡುತ್ತೇವೆ. ಒಕ್ಕಲಿಗ ಮತ್ತು ವೀರಶೈವ ಲಿಂಗಾಯತರು ಒಟ್ಟಿಗೆ ಸೇರಿ ಹೋರಾಟ ಮಾಡುತ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ ಎಚ್ಚರಿಕೆ ನೀಡಿದರು. ಮೀಸಲಾತಿ ಯಾರಿಗೊ ಹೆಚ್ಚು ಕೊಡಿಸಬೇಕು ಅನ್ನೋ ದೃಷ್ಟಿಯಿಂದ ಮಾಡಲಾಗಿದೆ. ನಮ್ಮ ಜನಾಂಗ, ವೀರಶೈವ ಲಿಂಗಾಯತರು, ಇತರೆ ಅನ್ಯಾಯಕ್ಕೊಳಗಾದ ಸಮುದಾಯ ಒಟ್ಟಿಗೆ ಸೇರಿ ಹೋರಾಟ ಮಾಡಲಿದ್ದೇವೆ. ಜಾತಿಗಣತಿ ವರದಿಗೆ ರಾಜ್ಯ ಒಕ್ಕಲಿಗ ಸಂಘ ತೀವ್ರ ವಿರೋಧಿಸುತ್ತೆ ಎಂದು ಹೇಳಿದರು.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಪತ್ರಕರ್ತ ಎಸ್.ಕೆ. ಶ್ಯಾಮಸುಂದರ್ ಅವರು ಕಳೆದ ರಾತ್ರಿ ನಿಧನರಾಗಿದ್ದಾರೆ. 72 ವರ್ಷದ ಶ್ಯಾಮಸುಂದರ್ ಅವರು ಅನಾರೋಗ್ಯದಿಂದಾಗಿ ಬೆಂಗಳೂರಿನ ದಿಗ್ವಿಶ್ ಆಸ್ಪತ್ರೆಯಲ್ಲಿ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಆರೋಗ್ಯ ಚೇತರಿಸದೇ ಕೋಮಾಗೆ ಜಾರಿದ್ದರು. ಕಳೆದ ಸೋಮರಾತ್ರಿ ರಾತ್ರಿ ಹೃದಯಾಘಾತವಾಗಿ ಕೊನೆಯುಸಿರೆಳೆದಿದ್ದಾರೆ. ಶ್ಯಾಮಸುಂದರ್ ಅವರು ಕನ್ನಡ ಪತ್ರಿಕೋದ್ಯಮಲ್ಲಿ ಸುಮಾರು 39 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಉನ್ನತ ಜವಾಬ್ದಾರಿಯನ್ನು ನಿರ್ವಹಿಸಿರುವ ಶ್ಯಾಮಸುಂದರ್ ಅವರು, ಕನ್ನಡ ಡಿಜಿಟಲ್ ಮಾಧ್ಯಮಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇನ್ನು ಶ್ಯಾಮಸುಂದರ್ ಅವರ ನಿಧನದ ಸುದ್ದಿ ದುಃಖವುಂಟು ಮಾಡಿದೆ. ಬರಹವನ್ನೇ ಬದುಕಾಗಿಸಿಕೊಂಡಿದ್ದ ಶ್ಯಾಮಸುಂದರ್ ಅವರು ಸುದೀರ್ಘಕಾಲ ಪತ್ರಕರ್ತರಾಗಿ ದುಡಿದವರು. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆಂದು ಸಿಎಂ ಸಿದ್ದರಾಮಯ್ಯ ಕಂಬನಿ ಮಿಡಿದಿದ್ದಾರೆ.
ಮಾದಕ ವಸ್ತುಗಳ ಮಾರಾಟ ಸಾಗಾಣೆ ವಿರುದ್ಧ ಸಮರ ಸಾರಿರುವ ಸಿಸಿಬಿ ಪೊಲೀಸರು ವಿದೇಶಿ ಪ್ರಜೆ, ಸಿವಿಲ್ ಇಂಜಿನಿಯರ್ ಸೇರಿ 10 ಮಂದಿ ಡ್ರಗ್ಸ್ ಪೆಡ್ಲರ್ ಗಳನ್ನು ಬಂಧಿಸಿದ್ದು 6 ಕೋಟಿ 70 ಲಕ್ಷ ಮೌಲ್ಯದ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ 2ನೇ ಹಂತದ ಡಿ ಮಾರ್ಟ್ ಹಿಂಭಾಗ ನಿಷೇದಿತ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಡ್ರಗ್ಸ್ ಪೆಡ್ಲರ್ ನನ್ನು ಬಂಧಿಸಿ 3 ಕೆಜಿ 554 ಗ್ರಾಂ ಹೈಡ್ರೋಫೋನಿಕ್ ಗಾಂಜಾ ಹಾಗೂ 26,06,500 ನಗದು, ಮೊಬೈಲ್ ಸೇರಿ 4.52 ಕೋಟಿ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಿದ್ದಾರೆ. ಮತ್ತೊಂದೆಡೆ ಬೇಗೂರಿನಲ್ಲಿ ಡ್ರಗ್ ಪೆಡ್ಲಿಂಗ್‌ನಲ್ಲಿ ತೊಡಗಿದ್ದ ಓರ್ವ ವಿದೇಶಿ ಪ್ರಜೆಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿ 1 ಕೆ.ಜಿ MDMA ಕ್ರಿಸ್ಟಲ್, ಮೊಬೈಲ್ ಸೇರಿದಂತೆ 2 ಕೋಟಿ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಿದ್ದಾರೆ.