ಭರತ್ ಭೂಷಣ್ ಕುಟುಂಬ 
ರಾಜ್ಯ

'ಪ್ರೇಮ ಕಾಶ್ಮೀರ'ದಲ್ಲಿ ರಕ್ತದೋಕುಳಿ: ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದ ಅಪ್ಪ-ಅಮ್ಮ; 3 ವರ್ಷದ ಮಗು ಮುಂದೆ ಗುಂಡಿಕ್ಕಿ ತಂದೆ ಹತ್ಯೆ!

ಮಿನಿ ಸ್ವಿಡ್ಜರ್ ಲ್ಯಾಂಡ್ ಎಂದೇ ಪ್ರಸಿದ್ದವಾಗಿರುವ ಕಾಶ್ಮೀರದ ಪ್ರಕೃತಿ ಸೊಬಗನ್ನು ಕಣ್ತುಂಬಿಕೊಳ್ಳಲು ಬೆಂಗಳೂರಿನ ಭರತ್ ಭೂಷಣ್ ಕುಟುಂಬ ಕೂಡ ಹೋಗಿತ್ತು.

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ ಜಿಲ್ಲೆಯ ಪಹಲ್ಗಾಮ್‌ ಪಟ್ಟಣ ಸಮೀಪದ ಹುಲ್ಲುಗಾವಲಿನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ಮಂಗಳವಾರ ನಡೆಸಿದ ಗುಂಡಿನ ದಾಳಿಯಲ್ಲಿ 28 ಮಂದಿ ಮೃತಪಟ್ಟು, ಕನಿಷ್ಠ 20 ಜನರು ಗಾಯಗೊಂಡಿದ್ದಾರೆ.

ಮಿನಿ ಸ್ವಿಡ್ಜರ್ ಲ್ಯಾಂಡ್ ಎಂದೇ ಪ್ರಸಿದ್ದವಾಗಿರುವ ಕಾಶ್ಮೀರದ ಪ್ರಕೃತಿ ಸೊಬಗನ್ನು ಕಣ್ತುಂಬಿಕೊಳ್ಳಲು ಬೆಂಗಳೂರಿನ ಭರತ್ ಭೂಷಣ್ ಕುಟುಂಬ ಕೂಡ ಹೋಗಿತ್ತು. ತಮ್ಮ ಐದನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮಾಚರಣೆ ಮಾಡಲು, ಬೆಂಗಳೂರಿನ ಯಶವಂತಪುರದ ಮತ್ತಿಕೆರೆ ಬಳಿಯ ಸುಂದರ್ ನಗರದ ನಿವಾಸಿ ಭರತ್ ಭೂಷಣ್ (41), ತಮ್ಮ ಪತ್ನಿ ಡಾ. ಸುಜಾತಾ ಮತ್ತು ಪುತ್ರ ಹವೀಶ್ ಜೊತೆ ತೆರಳಿದ್ದರು.

ಮಂಗಳವಾರ ದುರಂತ ಸಂಭವಿಸಿದಾಗ ಮೂರು ವರ್ಷದ ಹವೀಶ್ ತನ್ನ ತಂದೆ ಭರತ್ ಮತ್ತು ತಾಯಿ ಸುಜಾತಾ ಅವರೊಂದಿಗೆ ಪಹಲ್ಗಾಮ್‌ನ ಹಚ್ಚ ಹಸಿರಿನ ಹುಲ್ಲುಗಾವಲುಗಳಲ್ಲಿ ಸಂತೋಷದಿಂದ ಆಟವಾಡುತ್ತಿದ್ದ. ಮುಂದೆ ಏನು ನಡೆಯುತ್ತದೆ ಎಂಬುದನ್ನು ಯಾರೂ ಊಹಿಸಲೂ ಸಾಧ್ಯವಾಗಲಿಲ್ಲ. 3 ವರ್ಷದ ಹವೀಶ್ ಕಣ್ಣುಗಳ ಮುಂದೆಯೇ ಆತನ ತಂದೆಗೆ ಗುಂಡು ಹಾರಿಸಿ ಕೊಲ್ಲಲಾಯಿತು. ಅವನ ತಾಯಿ ಸುಜಾತಾ, ವೈದ್ಯೆಯಾಗಿದ್ದ ಕಾರಣ ಭರತ್‌ನ ನಾಡಿಮಿಡಿತ ಪರಿಶೀಲಿಸಿದರು, ಆದರೆ ಭಯಾನಕ ಸತ್ಯ ಅವರ ಅರಿವಿಗೆ ಬಂತು.

ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಅವರು ಇತ್ತೀಚೆಗೆ ತಮ್ಮ ಕೆಲಸವನ್ನು ತ್ಯಜಿಸಿ ತಮ್ಮ ಪತ್ನಿಯ ಕ್ಲಿನಿಕ್ ಬಳಿ ಡಯಾಗ್ನೋಸ್ಟಿಕ್ ಕೇಂದ್ರವನ್ನು ನಡೆಸುತ್ತಿದ್ದರು. ಭರತ್ ಅವರ ಅತ್ತೆ ವಿಮಲಾ ಅವರನ್ನು TNIE ಸಂಪರ್ಕಿಸಿದಾಗ ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ಬುಧವಾರ ಬೆಳಿಗ್ಗೆ 10.30 ರ ಸುಮಾರಿಗೆ ಕುಟುಂಬವು ಹಿಂತಿರುಗಬೇಕಿತ್ತು. ದುರದೃಷ್ಟವಶಾತ್, ನಾವು ನನ್ನ ಅಳಿಯನ ಶವವನ್ನು ಸ್ವೀಕರಿಸುತ್ತಿದ್ದೇವೆ" ಎಂದು ಅವರು ಹೇಳಿದರು. ಮಂಗಳವಾರ ಮಧ್ಯಾಹ್ನ 2.40 ರ ಸುಮಾರಿಗೆ ಸುಜಾತ ತನಗೆ ಕರೆ ಮಾಡಿ ಭರತ್ ಅವರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಹೇಳಿದ್ದರು. "ಸುಜಾತ ತನ್ನ ನಾಡಿಮಿಡಿತವನ್ನು ಪರಿಶೀಲಿಸಿ ಭರತ್ ಇನ್ನಿಲ್ಲ ಎಂದು ಖಚಿತಪಡಿಸಿದ್ದಾಗಿ ಹೇಳಿದ್ದಾಗಿ ತಿಳಿಸಿದ್ದಾರೆ.

ತನ್ನ ಮಗಳು ಮತ್ತು ಅಳಿಯನನ್ನು ಪಹಲ್ಗಾಮ್‌ಗೆ ಹೋಗುವಂತೆ ಹೇಳಿದ್ದಕ್ಕಾಗಿ ತನ್ನನ್ನು ತಾನೇ ಶಪಿಸಿಕೊಂಡಿದ್ದಾರೆ, ಏಕೆಂದರೆ ಸುಮಾರು ಒಂದು ವರ್ಷದ ಹಿಂದೆ ತನ್ನ ಸ್ನೇಹಿತರು ಮತ್ತು ನೆರೆಹೊರೆಯವರೊಂದಿಗೆ ಆ ಸುಂದರ ಸ್ಥಳಕ್ಕೆ ವಿಮಲಾ ಭೇಟಿ ನೀಡಿದ್ದರು. ಹೀಗಾಗಿ ತಮ್ಮ ಮಗಳು ಅಳಿಯನಿಗೆ ಅಲ್ಲಿಗೆ ಹೋಗಲು ನಾನೇ ಹೇಳಿದ್ದಾಗಿ ತಿಳಿಸಿದ್ದಾರೆ. ಭಯೋತ್ಪಾದಕರು ಎಲ್ಲರ ಆಧಾರ್ ಕಾರ್ಡ್ ಹುಡುಕಿ ನೋಡಿದ ನಂತರ ಅವರು ಮುಸ್ಲಿಮರೋ ಅಥವಾ ಹಿಂದೂವೋ ಎಂದು ತಿಳಿದು ಹತ್ಯೆ ಮಾಡಿದ್ದಾರೆ ಎಂದು ವಿಮಲಾ ಹೇಳಿದರು.

ಭರತ್‌ನ ಪೋಷಕರು ಇಬ್ಬರೂ ಹೃದಯ ರೋಗಿಗಳಾಗಿದ್ದು, ಅವರ ತಾಯಿ ಶೈಲಾಕುಮಾರಿ ಇತ್ತೀಚೆಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಆಮ್ಲಜನಕದ ಬೆಂಬಲದಲ್ಲಿದ್ದಾರೆ ಎಂದು ಅವರು ಹೇಳಿದರು. ಶೈಲಾಕುಮಾರಿಗೆ ತನ್ನ ಮಗನ ಸಾವಿನ ಬಗ್ಗೆ ತಿಳಿಸಲಾಗಿಲ್ಲ ಎಂದು ವಿಮಲಾ ಹೇಳಿದರು. ಬುಧವಾರ ಬೆಳಿಗ್ಗೆ ಈ ದುರಂತದ ಬಗ್ಗೆ ಭರತ್ ಅವರ ತಂದೆ, ನಿವೃತ್ತ ಸಾರ್ವಜನಿಕ ಶಿಕ್ಷಣ ಉಪ ನಿರ್ದೇಶಕ (ಡಿಡಿಪಿಐ) ಚನ್ನವೀರಪ್ಪ ಅವರಿಗೆ ಮಾಹಿತಿ ನೀಡಲಾಯಿತು.

ಮತ್ತೊಬ್ಬ ಸಂಬಂಧಿ ಪ್ರದೀಪ್, ಭರತ್ ಕುದುರೆ ಸವಾರಿ ಮುಗಿಸಿದಾಗ ಅವರ ಮೇಲೆ ದಾಳಿ ನಡೆಸಲಾಯಿತು ಎಂದು ಸುದ್ದಿಸಂಸ್ಥೆಗೆ ತಿಳಿಸಿದರು. "ಒಬ್ಬ ಭಯೋತ್ಪಾದಕ ಅವರನ್ನು ಸಮೀಪಿಸಿ ಅವರ ಹೆಸರು ಕೇಳಿದ. ಭರತ್ ಭೂಷಣ್ ಎಂದು ಹೇಳಿದಾಗ ಅವರು ಅವರ ತಲೆಗೆ ಮೂರು ನಾಲ್ಕು ಬಾರಿ ಗುಂಡು ಹಾರಿಸಿದರು ಎಂದು ಸುಜಾತಾ ಹೇಳಿರುವುದಾಗಿ ಪ್ರದೀಪ್ ಉಲ್ಲೇಖಿಸಿದ್ದಾರೆ.

ಭರತ್ ಮತ್ತು ಸುಜಾತಾ ಐದು ವರ್ಷಗಳ ಹಿಂದೆ ವಿವಾಹವಾದರು ಮತ್ತು ಪ್ರವಾಸವನ್ನು ಒಂದು ತಿಂಗಳ ಹಿಂದೆಯೇ ಯೋಜಿಸಲಾಗಿತ್ತು ಎಂದು ಅವರು ಹೇಳಿದರು. ಭರತ್ ಅವರ ಅಣ್ಣ ಮತ್ತು ಸುಜಾತಾ ಅವರ ಇಬ್ಬರು ಸಹೋದರರು ಸುದ್ದಿ ತಿಳಿದ ಕೂಡಲೇ ಶ್ರೀನಗರಕ್ಕೆ ಧಾವಿಸಿದರು. ಗುರುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಹೆಬ್ಬಾಳದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಭರತ್ ಅವರ ಮಾವ ಸೀತಾರಾಮ್ ಹೇಳಿದ್ದಾರೆ.

ಆಂಧ್ರಪ್ರದೇಶದ ನೆಲ್ಲೂರು ಮೂಲದ ರಾಮಮೂರ್ತಿ ನಗರದ ಮತ್ತೊಬ್ಬ ಬೆಂಗಳೂರಿನ ನಿವಾಸಿ ಮಧುಸೂಧನ್ ರಾವ್ ಕೂಡ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಮಧುಸೂಧನ್ ಅವರ ಪತ್ನಿ, ಮಗಳು ಮತ್ತು ಮಗನೊಂದಿಗೆ ರಜೆಗಾಗಿ ಕಾಶ್ಮೀರಕ್ಕೆ ಹೋಗಿದ್ದರು ಎಂದು ಅವರ ನೆರೆಯ ಬಾಬು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

SCROLL FOR NEXT