ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ ಎಂದು ಜನಪ್ರತಿನಿಧಿಗಳ ನ್ಯಾಯಾಲಯ ಮಹತ್ವದ ತೀರ್ಪು ಪ್ರಕಟಿಸಿದೆ.ಅಶ್ಲೀಲ ವಿಡಿಯೋ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಈಗಾಗಲೇ ಕಳೆದ 14 ತಿಂಗಳಿನಿಂದ ಬಂಧನದಲ್ಲಿದ್ದಾರೆ. 26 ಸಾಕ್ಷಿಗಳ ವಿಚಾರಣೆ ನಡೆಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈ ತೀರ್ಪು ನೀಡಿದೆ. ಕೋರ್ಟ್ ಶಿಕ್ಷೆಯ ಪ್ರಮಾಣವನ್ನು ನಾಳೆ ಪ್ರಕಟಿಸಲಿದೆ. ಏಪ್ರಿಲ್ 28, 2024 ರಂದು ಹಾಸನದ ಹೊಳೆನರಸೀಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ 47 ವರ್ಷದ ಮನೆಕೆಲಸದವಳು ಸಲ್ಲಿಸಿದ ದೂರಿನ ಆಧಾರದ ಮೇಲೆ ಪ್ರಕರಣವನ್ನು ದಾಖಲಿಸಲಾಗಿತ್ತು.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳ ಮೇಲೆ ನಿರಂತರ ನಿಗಾ ಇರಿಸಲಾಗಿದ್ದು, ಸುಳ್ಳುಸುದ್ದಿ ಹರಡಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿ ಪರಮೇಶ್ವರ್, 'ಧರ್ಮಸ್ಥಳದಲ್ಲಿ ಹಲವಾರು ಶವಗಳ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜದಲ್ಲಿ ಭಾವನೆಗಳನ್ನು ಕೆರಳಿಸುವ" ಪೋಸ್ಟ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ಕಳೆದ ಎರಡು ದಶಕಗಳಲ್ಲಿ ಧರ್ಮಸ್ಥಳದಲ್ಲಿ ನಡೆದ ಸಾಮೂಹಿಕ ಕೊಲೆ, ಅತ್ಯಾಚಾರ ಮತ್ತು ಸಾಮೂಹಿಕ ಅಂತ್ಯಕ್ರಿಯೆಗಳ ಆರೋಪಗಳನ್ನು ಪರಿಶೀಲಿಸಲು ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿದೆ. ಈ ಸಂಬಂಧ ಅನಾಮಧೇಯ ಮಾಜಿ ನೌಕರನೋರ್ವ ನೀಡಿದ ಮಾಹಿತಿ ಮೇರೆಗೆ ಅಸ್ತಿಪಂಜರಗಳ ಹೊರತೆಗೆಯುವ ಕೆಲಸ ನಾಲ್ಕನೆ ದಿನವಾದ ಇಂದು ಕೂಡ ಮುಂದುವರೆದಿದೆ. ಸಮಾಧಿಯೆಂದು ಗುರುತಿಸಲಾದ ಏಳನೇ ಸ್ಥಳದಲ್ಲಿ SIT ಶುಕ್ರವಾರ ಉತ್ಖನನವನ್ನು ಪ್ರಾರಂಭಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗುರುವಾರ ಪಾಯಿಂಟ್ ಸಂಖ್ಯೆ 6 ಎಂದು ಗುರುತಿಸಲಾದ ಪಕ್ಕದ ಸ್ಥಳದಲ್ಲಿ ಅಗೆಯುವಾಗ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿತ್ತು. ಇದೇ ವೇಳೆ ಧರ್ಮಸ್ಥಳ ಪ್ರಕರಣದ ತನಿಖೆಯ ನೇತೃತ್ವ ವಹಿಸಿರುವ ಎಸ್‌ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ ಅವರು ಶುಕ್ರವಾರ ರಾಜ್ಯ ಗೃಹ ಸಚಿವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಕೇಂದ್ರ ಸರ್ಕಾರದ ಹುದ್ದೆಗಳಿಗೆ ಪರಿಗಣಿಸಲಾಗುತ್ತಿರುವ ಮಹಾನಿರ್ದೇಶಕರ ಶ್ರೇಣಿಯ ಅಧಿಕಾರಿಗಳ ಪಟ್ಟಿಯಲ್ಲಿ ಅವರ ಹೆಸರು ಇರುವ ಹಿನ್ನೆಲೆಯಲ್ಲಿ ಮೊಹಂತಿ ಅವರ ಭೇಟಿ ಸಾಕಷ್ಟು ಕುತೂಹಲ ಕೆರಳಿಸಿದೆ.
ಬೆಂಗಳೂರಿನ ಅರಕೆರೆಯ ಶಾಂತಿನಿಕೇತನ ಬಡಾವಣೆಯಲ್ಲಿ ಟ್ಯೂಷನ್ ಮುಗಿಸಿಕೊಂಡು ರಾತ್ರಿ ಮನೆಗೆ ತೆರಳುತ್ತಿದ್ದ ಬಾಲಕನನ್ನು ಅಪಹರಿಸಿ ಕೊಲೆ ಮಾಡಲಾಗಿದ್ದು, ಇಬ್ಬರು ಆರೋಪಿಗಳನ್ನು ಹುಳಿಮಾವು ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಗುರುಮೂರ್ತಿ ಹಾಗೂ ಗೋಪಾಲಕೃಷ್ಣ ಬಂಧಿತರಾಗಿದ್ದು, ಆರೋಪಿಗಳು ಕಗ್ಗಲಿಪುರ ಅರಣ್ಯದಲ್ಲಿ ಅಡಗಿ ಕುಳಿತ್ತಿದ್ದರು. ಖಚಿತ ಮಾಹಿತಿ ಆಧರಿಸಿ ಗುರುವಾರ ತಡರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಕಾರ್ಯಾಚರಣೆ ವೇಳೆ ಪೊಲೀಸರ ಮೇಲೆ ಆರೋಪಿಗಳು ಹಲ್ಲೆಗೆ ಯತ್ನಿಸಿ ಪರಾರಿಯಾಗಲು ಪ್ರಯತ್ನಿಸಿದ್ದರು. ಹುಳಿಮಾವು ಠಾಣೆಯ ಪೊಲೀಸರು ಆತ್ಮರಕ್ಷಣೆಗಾಗಿ ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ. ಬಾಲಕನನ್ನು ಅಪಹರಣ ಮಾಡಿ ಆತನ ತಂದೆಗೆ ಕರೆ ಮಾಡಿದ್ದ ಆರೋಪಿಗಳು, ₹5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು.
ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರನ್ನು ಹನಿಟ್ರ್ಯಾಪ್ ಮಾಡಲು ಯತ್ನಿಸಿದ್ದಾರೆ ಎಂಬ ಆರೋಪದ ತನಿಖೆ ನಡೆಸುತ್ತಿದ್ದ ಸಿಐಡಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು ಹನಿಟ್ರ್ಯಾಪ್ ಪ್ರಯತ್ನಗಳ ಕುರಿತು ಸಚಿವರ ಹೇಳಿಕೆಗಳನ್ನು ಬೆಂಬಲಿಸಲು ಯಾವುದೇ ಗಣನೀಯ ಪುರಾವೆಗಳು ಸಿಕ್ಕಿಲ್ಲ ಎಂದು ತಿಳಿಸಿದೆ. ವರದಿ ಕುರಿತು ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಡಾ.ಪರಮೇಶ್ವರ್, ವರದಿಯಲ್ಲಿ ಏನಿದೆ ಎಂಬುದನ್ನು ನಾನು ಇನ್ನೂ ಓದಿಲ್ಲ ಎಂದು ಹೇಳಿದರು. ಪೊಲೀಸರು ಯಾರ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆಂದು ತಿಳಿಯುತ್ತಿಲ್ಲ. ಸರ್ಕಾರ ಅಕ್ರಮಗಳನ್ನು ಮುಚ್ಚಿಹಾಕುತ್ತಿದೆ, ಸಚಿವರಿಗೇ ನ್ಯಾಯ ಸಿಗದಿದ್ದರೆ, ಬಡವರ ಗತಿ ಏನು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ರಸ್ತೆ ಬದಿಯ ಪಾರ್ಕಿಂಗ್‌ನಿಂದ ನಗರದಲ್ಲಿ ಉಂಟಾಗುವ ಸಂಚಾರ ದಟ್ಟಣೆಯ ಸಮಸ್ಯೆಗೆ ಅಂತ್ಯ ಹಾಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಟೋಯಿಂಗ್ ವ್ಯವಸ್ಥೆಯನ್ನು ಮತ್ತೆ ಆರಂಭಿಸಲು ಚಿಂತನೆ ನಡೆಸುತ್ತಿದೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ. ಜಿ ಪರಮೇಶ್ವರ್, ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಗೆ ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸುವುದು ಒಂದು ಪ್ರಮುಖ ಕಾರಣವಾಗಿದೆ. ಹೀಗಾಗಿ ಟೋಯಿಂಗ್ ವ್ಯವಸ್ಥೆಯನ್ನು ಮತ್ತೆ ಆರಂಭಿಸಲು ಚಿಂತನೆ ನಡೆಸಲಾಗುತ್ತಿದೆ. ವಾಹನ ಟೋಯಿಂಗ್ ಅನ್ನು ಇಲಾಖೆಯಿಂದಲೇ ಕಾರ್ಯಾಚರಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.