ಬೆಂಗಳೂರು: ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರನ್ನು ಹನಿಟ್ರ್ಯಾಪ್ ಮಾಡಲು ಯತ್ನಿಸಿದ್ದಾರೆ ಎಂಬ ಆರೋಪದ ತನಿಖೆ ನಡೆಸುತ್ತಿದ್ದ ಸಿಐಡಿಗೆ, ಆರೋಪಗಳಿಗೆ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ ಎಂದು ಹೇಳಲಾಗುತ್ತಿದೆ.
ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿರುವ ಸಿಐಡಿ ಅಧಿಕಾರಿಗಳು, ಹನಿಟ್ರ್ಯಾಪ್ ಪ್ರಯತ್ನಗಳ ಕುರಿತು ಸಚಿವರ ಹೇಳಿಕೆಗಳನ್ನು ಬೆಂಬಲಿಸಲು ಯಾವುದೇ ಗಣನೀಯ ಪುರಾವೆಗಳು ಸಿಕ್ಕಿಲ್ಲ ಎಂದು ತಿಳಿಸಿದೆ ಎಂದು ಮೂಲಗಳು ತಿಳಿಸಿವೆ.
ವರದಿ ಕುರಿತು ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಡಾ.ಪರಮೇಶ್ವರ್ ಅವರು, ಸಚಿವ ರಾಜಣ್ಣ ಹನಿಟ್ರ್ಯಾಪ್ ದೂರು ವಿಚಾರಕ್ಕೆ ಸಂಬಂಧಿಸಿ ಸಿಐಡಿ ಅಧಿಕಾರಿಗಳು ವರದಿ ಕೊಟ್ಟಿದ್ದಾರೆ. ಅದರಲ್ಲಿ ಏನಿದೆ ಎಂಬುದನ್ನು ನಾನು ಇನ್ನೂ ಓದಿಲ್ಲ ಎಂದು ಹೇಳಿದರು.
ವರದಿಯಂತೂ ಕೈಸೇರಿದೆ. ಆದರೆ ಇನ್ನೂ ಅದರಲ್ಲಿ ಏನಿದೆ ಎಂದು ನೋಡಿಲ್ಲ. ವರದಿ ನೋಡಿದ ಮೇಲೆ ಮಾತನಾಡುತ್ತೇನೆ. ಪ್ರಕರಣ ಚರ್ಚೆ ಸದನದಲ್ಲಿ ಆಯಿತು. ಇದರ ಬಗ್ಗೆ ನೀವು (ಮಾಧ್ಯಮಗಳಿಗೆ) ಸದ್ದು ಮಾಡಿದಿರಿ. ಈ ಸದ್ದಿಗೆ ಸಿಐಡಿಯವರು ಉತ್ತರ ಕೊಟ್ಟಿದ್ದಾರೆ. ಏನಿದೆ ಮೊದಲು ನೋಡೋಣ ಎಂದು ತಿಳಿಸಿದರು.
ಸಚಿವರು ಸುಳ್ಳು ಆರೋಪ ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅದರ ಬಗ್ಗೆ ನನಗೆ ತಿಳಿದಿಲ್ಲ. ವರದಿಯನ್ನು ನೋಡಬೇಕು ಎಂದರು.
ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಪ್ರತಿಕ್ರಿಯಿಸಿ, ಇದಕ್ಕೂ ನನಗೂ ಏನು ಸಂಬಂಧ? ದೂರುದಾರರ ಬಗ್ಗೆಯಾಗಲಿ ಅಥವಾ ತನಿಖೆಯ ಬಗ್ಗೆಯಾಗಲಿ ನನಗೆ ತಿಳಿದಿಲ್ಲ. ಮಾಧ್ಯಮಗಳಿಂದ ನಾನು ಈ ಬಗ್ಗೆ ಕೇಳುತ್ತಿದ್ದೇನೆ ಎಂದು ಹೇಳಿದರು.
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಮಾತನಾಡಿ, ಆರೋಪಗಳು ನಿಜವಾಗಿದ್ದರೆ, ಅವರ ಹೇಳಿಕೆಗಳ ಸಾಬೀತುಪಡಿಸಲು ಸಾಕ್ಷ್ಯಗಳಿರುವುದೇ ಆದರೆ, ರಾಜಣ್ಣ ಮುಖ್ಯಮಂತ್ರಿ ಮತ್ತು ಗೃಹ ಸಚಿವರನ್ನು ತನಿಖೆಯನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಬೇಕು, ಆದರೆ, ವಿಧಾನಸಭೆಯಲ್ಲಿ ಸುಳ್ಳು ಆರೋಪಗಳನ್ನು ಮಾಡಿದ್ದರೆ, ರಾಜ್ಯದ ಜನರಲ್ಲಿ ಕ್ಷಮೆಯಾಚಿಸಬೇಕು ಎಂದು ಹೇಳಿದ್ದಾರೆ.
ಪೊಲೀಸರು ಯಾರ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆಂದು ತಿಳಿಯುತ್ತಿಲ್ಲ. ಸರ್ಕಾರ ಅಕ್ರಮಗಳನ್ನು ಮುಚ್ಚಿಹಾಕುತ್ತಿದೆ, ಸಚಿವರಿಗೇ ನ್ಯಾಯ ಸಿಗದಿದ್ದರೆ, ಬಡವರ ಗತಿ ಏನು ಎಂದು ಪ್ರಶ್ನಿಸಿದ್ದಾರೆ.