ಕಳೆದ ಮೂರೂವರೆ ವರ್ಷಗಳಲ್ಲಿ ಭಾರತದಾದ್ಯಂತ ಫಾಸ್ಟ್ ಟ್ಯಾಗ್ (FASTag) ವಹಿವಾಟಿನಲ್ಲಿ ತಮಿಳುನಾಡು ಮುಂಚೂಣಿಯಲ್ಲಿದೆ.
ಲೋಕಸಭೆಯಲ್ಲಿ ಮಂಡಿಸಿದ ಮಾಹಿತಿ ಪ್ರಕಾರ, 2022 ಮತ್ತು ಜೂನ್ 2025 ರ ನಡುವೆ 1.26 ಬಿಲಿಯನ್ ವಹಿವಾಟು ನಡೆಯುವುದರೊಂದಿಗೆ ತಮಿಳುನಾಡು ಫಾಸ್ಟ್‌ಟ್ಯಾಗ್ ಬಳಕೆಯಲ್ಲಿ ಅಗ್ರ ಸ್ಥಾನವನ್ನು ಉಳಿಸಿಕೊಂಡಿದ್ದು, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಂತಹ ಇತರ ಹೆಚ್ಚಿನ ಸಂಚಾರ ಹೆಚ್ಚಿರುವ ರಾಜ್ಯಗಳನ್ನು ಮೀರಿಸಿದೆ. ತಮಿಳುನಾಡು ಪ್ರತಿ ವರ್ಷವೂ ಪಾಸ್ಟ್ ಟ್ಯಾಗ್ ಬಳಕೆಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡು ಬಂದಿದೆ.
ಡಿಜಿಟಲ್ ಟೋಲ್ ಸಂಗ್ರಹ ವ್ಯವಸ್ಥೆ ಫಾಸ್ಟ್ ಟ್ಯಾಗ್ ನ್ನು ಫೆಬ್ರವರಿ 2021 ರಿಂದ ರಾಷ್ಟ್ರವ್ಯಾಪಿ ತ್ವರತಗತಿಯಲ್ಲಿ ಅಳವಡಿಸಿಕೊಳ್ಳಲಾಗಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಪ್ರಕಾರ ಈಗ ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ ಶೇ.98 ಕ್ಕಿಂತ ಹೆಚ್ಚು ಟೋಲ್ ಸಂಗ್ರಹವನ್ನು ಹೊಂದಿದೆ.
ಕರ್ನಾಟಕದಲ್ಲಿ 1.19 ಬಿಲಿಯನ್ ವಹಿವಾಟು ದಾಖಲು:
ಇದೇ ಅವಧಿಯಲ್ಲಿ ಉತ್ತರ ಪ್ರದೇಶ ಮತ್ತು ಕರ್ನಾಟಕ ಕ್ರಮವಾಗಿ 1.19 ಶತಕೋಟಿ ಮತ್ತು 1.12 ಶತಕೋಟಿ ವಹಿವಾಟು ದಾಖಲಾಗಿದೆ. ರಾಜಸ್ಥಾನ ಮತ್ತು ಮಹಾರಾಷ್ಟ್ರದಲ್ಲಿ ಕ್ರಮವಾಗಿ 1 ಬಿಲಿಯನ್ ಮತ್ತು 919 ಮಿಲಿಯನ್ ವಹಿವಾಟು ಆಗಿದೆ.
ತಮಿಳುನಾಡಿನಲ್ಲಿ ವಾರ್ಷಿಕವಾಗಿ ಅತ್ಯಧಿಕ ಮೊತ್ತದ ವಹಿವಾಟು ನಡೆದಿದ್ದರೆ ಉತ್ತರ ಪ್ರದೇಶ ಮತ್ತು ಕರ್ನಾಟಕದಂತಹ ರಾಜ್ಯಗಳಲ್ಲಿ ವೇಗದ ಬೆಳವಣಿಗೆಯಾಗಿದೆ. ಉದಾಹರಣೆಗೆ ಕರ್ನಾಟಕದಲ್ಲಿ 2022 ರಿಂದ 2024 ರವರೆಗಿನ ವಹಿವಾಟಿನಲ್ಲಿ ಶೇ. 28.7 ರಷ್ಟು ಹೆಚ್ಚಳ ಆಗಿದೆ.
ದಕ್ಷಿಣ ಭಾರತ ಗಣನೀಯ ಕೊಡುಗೆ: ಇದೇ ಅವಧಿಯಲ್ಲಿ ಉತ್ತರ ಪ್ರದೇಶದಲ್ಲಿ ಶೇ. 30. 09ರಷ್ಟು ಬೆಳವಣಿಗೆಯಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ತಮಿಳುನಾಡಿನಲ್ಲಿ ಎರಡು ವರ್ಷಗಳಲ್ಲಿ ಸುಮಾರು ಶೇ. 16. 8 ರಷ್ಟು ಬೆಳವಣಿಗೆಯಾಗಿದೆ. ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳವನ್ನು ಒಳಗೊಂಡಿರುವ ದಕ್ಷಿಣ ಭಾರತವು ಒಟ್ಟಾರೆ ಫಾಸ್ಟ್‌ಟ್ಯಾಗ್ ಚಟುವಟಿಕೆಗೆ ಗಣನೀಯ ಕೊಡುಗೆ ನೀಡಿದೆ.
ಈ ಐದು ರಾಜ್ಯಗಳು ಒಟ್ಟಾರೆಯಾಗಿ 2022 ಮತ್ತು 2025 ರ ಮಧ್ಯದ ನಡುವೆ 3.71 ಬಿಲಿಯನ್ ವ್ಯವಹಾರಗಳನ್ನು ದಾಖಲಿಸಿದೆ. ಇದುರಾಷ್ಟ್ರದ ಒಟ್ಟಾರೇ 13.69 ಬಿಲಿಯನ್ ವಹಿವಾಟಿನಲ್ಲಿ ಸರಿಸುಮಾರು ಶೇ. 27.1 ರಷ್ಟಿದೆ.
ಸುಳ್ಳು ಕಡಿತ ಸಾಬೀತಾದ ಪ್ರಕರಣದಲ್ಲಿ ದಂಡ: ಫಾಸ್ಟ್‌ಟ್ಯಾಗ್ ಪರಿಸರ ವ್ಯವಸ್ಥೆಯಲ್ಲಿನ ತಪ್ಪು ಕಡಿತಗಳು ಮತ್ತು ಸಿಸ್ಟಮ್ ದೋಷಗಳ ಬಗ್ಗೆಗಿನ ಕಳವಳಗಳನ್ನು ಸರ್ಕಾರ ಪರಿಹರಿಸಿದೆ. ಸುಳ್ಳು ಕಡಿತ ಸಾಬೀತಾದ ಪ್ರಕರಣದಲ್ಲಿ, ಜವಾಬ್ದಾರಿಯುತ ಟೋಲ್ ಸಂಗ್ರಹ ಏಜೆನ್ಸಿಗೆ ರೂ 1 ಲಕ್ಷ ದಂಡ ಕೂಡಾ ವಿಧಿಸಲಾಗಿದೆ.
ಹೆದ್ದಾರಿ ಬಳಕೆದಾರರು ತಮ್ಮ FASTag ವಿತರಕರ ಬ್ಯಾಂಕ್ ಅನ್ನು ಸಂಪರ್ಕಿಸುವ ಮೂಲಕ, ರಾಷ್ಟ್ರೀಯ ಸಹಾಯವಾಣಿಗೆ (1033) ಕರೆ ಮಾಡುವ ಮೂಲಕ ಅಥವಾ ಇಮೇಲ್ ಮೂಲಕ [falsededuction@ihmcl.com] (mailto:falsededuction@ihmcl.com) ಲೋಪದೋಷಗಳನ್ನು ವರದಿ ಮಾಡಬಹುದು.
ಹೆಚ್ಚಿನ ಕಾನೂನುಬದ್ಧ ಮರುಪಾವತಿ ಕೋರಿಕೆಗಳನ್ನು ಮೂರು ದಿನಗಳಲ್ಲಿ ಪರಿಹರಿಸಲಾಗುತ್ತದೆ, ಆದಾಗ್ಯೂ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಬ್ಯಾಂಕ್‌ಗಳಿಗೆ 40 ದಿನಗಳವರೆಗೆ ಇರುತ್ತದೆ ಎಂದು ವರದಿ ಹೇಳಿದೆ.