ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಹಾಸನದ ಮಾಜಿ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೀವನ ಪರ್ಯಂತ ಶಿಕ್ಷೆ ಹಾಗೂ 11 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ. ಪ್ರಕರಣದ ವಿಚಾರಣೆ ಪೂರ್ಣಗೊಂಡು ನ್ಯಾಯಮೂರ್ತಿ ಸಂತೋಷ ಗಜಾನನ ಭಟ್ ಅವರು ನಿನ್ನೆ ಶುಕ್ರವಾರ ಮಾಜಿ ಸಂಸದ ದೋಷಿ ಎಂದು ತೀರ್ಪು ನೀಡಿದ್ದರು. ಇಂದು ಶಿಕ್ಷೆಯ ಪ್ರಮಾಣ ಪ್ರಕಟಿಸಿದ ನ್ಯಾಯಾಧೀಶರು ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಇನ್ನು ದಂಡದ ಪೈಕಿ 7 ಲಕ್ಷ ರೂಪಾಯಿಯನ್ನು ಸಂತ್ರಸ್ತೆಗೆ ಪರಿಹಾರ ನೀಡುವಂತೆ ಕೋರ್ಟ್ ಸೂಚಿಸಿದೆ. ಪ್ರಜ್ವಲ್ ವಿರುದ್ಧ ನಾಲ್ಕು ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು ಒಂದು ಪ್ರಕರಣದಲ್ಲಿ ಶಿಕ್ಷೆ ಪ್ರಕಟವಾಗಿದ್ದು, ಇನ್ನೂ ಮೂರು ಪ್ರಕರಣಗಳ ವಿಚಾರಣೆ ಬಾಕಿ ಇದೆ.
ಮಂಡ್ಯದ ಮಾಜಿ ಸಂಸದೆ ಮತ್ತು ನಟಿ ರಮ್ಯಾ ಸಲ್ಲಿಸಿದ ದೂರಿನ ಆಧಾರದ ಮೇಲೆ ಕೇಂದ್ರ ಅಪರಾಧ ವಿಭಾಗವು ಇಬ್ಬರು ಆರೋಪಿಗಳನ್ನು ಬಂಧಿಸಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನಿಂದನೀಯ ಕಾಮೆಂಟ್‌ಗಳನ್ನು ಪೋಸ್ಟ್ ಮಾಡುವಲ್ಲಿ ನೇರವಾಗಿ ಭಾಗಿಯಾಗಿದ್ದ 11 ಜನರನ್ನು ಗುರುತಿಸಲಾಗಿದ್ದು, ಶೀಘ್ರದಲ್ಲೇ ಅವರನ್ನೂ ಬಂಧಿಸಲಾಗುವುದು ಎಂದು ಹೇಳಿದರು. ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಧ್ವನಿ ಎತ್ತಿದ್ದಕ್ಕಾಗಿ ನಟ ದರ್ಶನ್ ಅಭಿಮಾನಿಗಳು ತನಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದು ಅಲ್ಲದೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆಗಳು ಹಾಕಿದ್ದಾರೆ ಎಂದು ರಮ್ಯಾ ಜುಲೈ 28ರಂದು ಆಯುಕ್ತರನ್ನು ಭೇಟಿಯಾಗಿ 43 ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ಧ ದೂರು ದಾಖಲಿಸಿದ್ದರು.
ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶವಗಳ ಹೂತಿಟ್ಟ ಪ್ರಕರಣ ತೀವ್ರ ಸಂಚಲನ ಎಬ್ಬಿಸಿರುವಾಗಲೇ ಸಾಕ್ಷಿ-ದೂರುದಾರ ವ್ಯಕ್ತಿಯನ್ನು ಎಸ್ಐಟಿ ತಂಡದ ಇನ್ಸ್ ಪೆಕ್ಟರ್ ಮಂಜುನಾಥ ಗೌಡ, ದೂರು ಹಿಂಪಡೆಯುವಂತೆ ಬೆದರಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಈ ಬಗ್ಗೆ ದೂರುದಾರನ ಪರ ವಕೀಲರು ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿಗೆ ಇಮೇಲ್ ಮೂಲಕ ದೂರು ಸಲ್ಲಿಸಿದ್ದಾರೆ. ಬೆಳ್ತಂಗಡಿ ಎಸ್ಐಟಿ ಕಚೇರಿಯಲ್ಲಿ ಆಗಸ್ಟ್ 1ರಂದು ರಾತ್ರಿ ದೂರುದಾರ ವ್ಯಕ್ತಿಯನ್ನು ವಿಚಾರಣೆ ನಡೆಸುತ್ತಿದ್ದಾಗ ಇನ್ಸ್ ಪೆಕ್ಟರ್ ಮಂಜುನಾಥ ಗೌಡ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ SIT ಮೂಲಗಳು ಈ ಆರೋಪಗಳನ್ನು ನಿರಾಕರಿಸಿವೆ. ಇವು ಆಧಾರರಹಿತ ಆರೋಪಗಳಲ್ಲದೆ ಬೇರೇನೂ ಅಲ್ಲ. ಆದರೂ ನಾವು ಅದನ್ನು ಪರಿಶೀಲಿಸುತ್ತೇವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಮತ್ತೊಂದೆಡೆ ಇಂದು ಸಹ ಎಸ್ಐಟಿ ತಂಡ ಸಮಾಧಿ ಅಗೆಯುವ ಕಾರ್ಯದಲ್ಲಿ ತೊಡಗಿದೆ. ಇಂದು ಬೆಳಗ್ಗೆ ಪಾಯಿಂಟ್ 9ರಲ್ಲಿ ಶೋಧ ಕಾರ್ಯ ನಡೆಸಿದ್ದವು. ಆದರೆ ಅಲ್ಲಿ ಯಾವುದೇ ಕಳೇಬರ ಸಿಕ್ಕಿಲ್ಲ. ನಂತರ 10ನೇ ಪಾಯಿಂಟ್ ನಲ್ಲಿ ಅಗೆಯುವ ಕೆಲಸ ನಡೆಯಿತು.
ಬೆಂಗಳೂರು ಮೆಟ್ರೋ ಇತಿಹಾಸದಲ್ಲೇ ಮೊದಲ ಬಾರಿಗೆ ಯಶಸ್ವಿಯಾಗಿ ಮಾನವ ಅಂಗಾಂಗ ಸಾಗಣೆ ಮಾಡಲಾಗಿದೆ. ಶಸ್ತ್ರಚಿಕಿತ್ಸೆಗಾಗಿ ಮಾನವ ಯಕೃತ್ತನ್ನು ವೈದ್ಯರೊಬ್ಬರು ಮತ್ತು ಏಳು ಮಂದಿ ವೈದ್ಯಕೀಯ ಸಿಬ್ಬಂದಿಯೊಂದಿಗೆ ನಮ್ಮ ಮೆಟ್ರೋ ಮೂಲಕ ವೈದೇಹಿ ಆಸ್ಪತ್ರೆಯಿಂದ ಆರ್.ಆರ್.ನಗರದ ಸ್ಪರ್ಶ ಆಸ್ಪತ್ರೆಗೆ ಸಾಗಿಸಲಾಯಿತು. ಮೆಟ್ರೋ ನಿಲ್ದಾಣಕ್ಕೆ ತಲುಪಿದ ತಕ್ಷಣ ಅಲ್ಲಿನ ಸಿಬ್ಬಂದಿ ತಂಡವನ್ನು ರೈಲಿನ ಮೂಲಕ ತೆರಳಲು ನೆರವಾದರು.
ಧರ್ಮಸ್ಥಳ ರಹಸ್ಯ ಸಮಾಧಿ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ ಚುರುಕುಗೊಳಿಸಿರುವಂತೆಯೇ 2000 ದಿಂದ 2015ರ ನಡುವೆ ದಾಖಲಾದ ಅಪರಿಚಿತ ಸಾವಿನ ಪ್ರಕರಣಗಳ ಪ್ರಮುಖ ದಾಖಲೆಗಳು ಡಿಲೀಟ್ ಆಗಿದೆ ಎಂದು ಹೇಳಲಾಗುತ್ತಿದ್ದು ಬೆಳ್ತಂಗಡಿ ಪೊಲೀಸರು ತೀವ್ರ ಟೀಕೆಗೆ ಗುರಿಯಾಗಿದ್ದಾರೆ. 1998 ಮತ್ತು 2014ರ ನಡುವೆ ಲೈಂಗಿಕ ಅತ್ಯಾಚಾರಕ್ಕೊಳಗಾದ ಮಹಿಳೆಯರು, ಅಪ್ರಾಪ್ತ ಬಾಲಕಿಯರು ಸೇರಿದಂತೆ ಹಲವು ಶವಗಳನ್ನು ನನ್ನ ಕೈಯಲ್ಲಿ ಬಲವಂತವಾಗಿ ಹೂಳಿಸಲಾಗಿದೆ ಎಂದು ಸಾಕ್ಷಿ-ದೂರದಾರ ಆರೋಪಿಸಿದ್ದನು. ಇನ್ನು 2000 ದಿಂದ 2015 ರ ನಡುವಿನ UDR ನೀಡುವಂತೆ RTI ಸಲ್ಲಿಸಲಾಗಿದ್ದು, ಇದಕ್ಕೆ ಮರಣೋತ್ತರ ಪರೀಕ್ಷೆಯ ವರದಿಗಳು, ನೋಟಿಸ್‌ಗಳು ಮತ್ತು ಮೃತ ವ್ಯಕ್ತಿಗಳ ಗುರುತನ್ನು ಪತ್ತೆಹಚ್ಚುವ ಪ್ರಯತ್ನಗಳಲ್ಲಿ ಬಳಸಲಾದ ಫೋಟೋಗಳನ್ನು ಆಡಳಿತಾತ್ಮಕ ಆದೇಶಗಳಿಗೆ ಅನುಗುಣವಾಗಿ ನಾಶಪಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.